ಬೆಂಗಳೂರು: ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣದಲ್ಲಿ ಈಗಾಗಲೇ ಐವರು ಬೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಯನ್ನು ಪೊಲೀಸರು ಬಂದಿಸಿದ್ದಾರೆ. ಇನ್ನು ಪ್ರಕರಣದಲ್ಲಿ ನಿರ್ಲಕ್ಷ್ಯದ ಆರೋಪದಲ್ಲಿ ಇಬ್ಬರು ಬೆಸ್ಕಾಂ ಅಧಿಕಾರಿಗಳನ್ನು ಇಂಧನ ಇಲಾಖೆ ಅಮಾನತು ಮಾಡಿದ್ದು, ಮೃತರಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ.
ಈ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯಿಸಿ, ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಹೋಪ್ ಫಾರ್ಮ್ ಬಳಿ ವಿದ್ಯುತ್ ಶಾಕ್‌ಗೆ ಒಬ್ಬ ಮಹಿಳೆ ಮತ್ತು ಒಂದು ಮಗು ಸಾವನ್ನಪ್ಪಿರುವ ದುರ್ದೈವದ ಘಟನೆ ನಡೆದಿದೆ. ಈ ದುರದೃಷ್ಟಕರ ಸಾವುಗಳಿಗೆ ಕಾರಣವಾದ ಘಟನೆಯ ಕುರಿತು ನಾವು ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದೇವೆ. ಇದರ ವರದಿಯನ್ನು ಎದುರು ನೋಡುತ್ತಿದ್ದೇವೆ. ಈ ಅಪಘಾತಕ್ಕೆ ಕಾರಣರಾದ AE ಮತ್ತು AEE ಯನ್ನು ಅಮಾನತುಗೊಳಿಸಲಾಗಿದೆ ಮತ್ತು ಇದಕ್ಕೆ ಕಾರಣಾದವರು ಮತ್ತಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಈ ದುರ್ಘಟನೆಯಲ್ಲಿ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ ಪರಿಹಾರ ನೀಡಲಿದೆ ಎಂದು ತಿಳಿಸಿದ್ದಾರೆ.
ಐವರ ಬಂಧನ
ವಿದ್ಯುತ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಕಾಡುಗುಡಿ ಪೊಲೀಸರು ಬಂಧಿಸಿದ್ದಾರೆ. ನಿರ್ಲಕ್ಷ್ಯದ ಆರೋಪದಡಿ ಬೆಸ್ಕಾಂ ವೈಟ್‌ಫೀಲ್ಡ್ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್ ಶ್ರೀರಾಮ್, ಅಸಿಸ್ಟೆಂಟ್ ಎಂಜಿನಿಯರ್ ಚೇತನ್, ಎಇಇ ಸುಬ್ರಮಣ್ಯ, ಜೂನಿಯರ್ ಎಂಜಿನಿಯರ್ ರಾಜಣ್ಣ ಹಾಗೂ ಸ್ಟೇಷನ್ ಆಪರೇಟರ್ ಮಂಜು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ | KRS Backwater : ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳುಗಿ ಮೈಸೂರಿನ ಮೂವರು ಸಾವು
ಇಬ್ಬರ ಸಾವಿಗೆ ಬಿಎಂಟಿಸಿ ಬಸ್ ಡ್ರೈವರ್ ಕೂಡ ಕಾರಣ?
ವಿದ್ಯುತ್ ತಗುಲಿ ತಾಯಿ-ಮಗು ಮೃತಪಡಲು ಬಿಎಂಟಿಸಿ ಬಸ್ ಡ್ರೈವರ್ ಕೂಡ ಕಾರಣ ಎಂಬ ಆರೋಪ ಕೇಳಿಬಂದಿದೆ. ಸಿಗ್ನಲ್ ಬಿದ್ದಿದೆ ಎಂದು ಘಟನೆ ನಡೆದಿದ್ದ ಸ್ಥಳದಲ್ಲಿ ಬಸ್ ಚಾಲಕ ಡೋರ್ ಓಪನ್ ಮಾಡಿದ್ದ. ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಬಸ್ ನಿಲ್ದಾಣವಿತ್ತು. ಆದರೂ ಮೊದಲೇ ನಿಲ್ಲಿಸಿದ್ದರಿಂದ ತಾಯಿ-ಮಗು ಇಳಿದು ನಡೆದುಕೊಂಡು ಹೋಗಿದ್ದರಿಂದ ವಿದ್ಯುತ್ ತಂತಿ ತುಳಿದು ದರಂತಕ್ಕೆ ಕಾರಣವಾಗಿದೆ. ಹೀಗಾಗಿ ಬಸ್ ಚಾಲಕನ ವಿರುದ್ಧವೂ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
ನ್ಯಾಯಕ್ಕಾಗಿ ಆಗ್ರಹಿಸಿ ಸಂಬಂಧಿಕರ ಪ್ರತಿಭಟನೆ
ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವಿಗೀಡಾದ್ದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮೃತರ ಕುಟುಂಬಸ್ಥರು, ಸ್ಥಳೀಯರು ಕಾಡುಗುಡಿಯಲ್ಲಿ ಪ್ರತಿಭಟನೆ ನಡೆಸಿದರು. ಬೆಸ್ಕಾಂಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ನ್ಯಾಯಕ್ಕಾಗಿ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು. ಇದರಿಂದ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕೆ ಪೊಲೀಸರು ದೌಡಾಯಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಿದರು.
ರಸ್ತೆಯಲ್ಲಿ ಬಿದ್ದ ವಿದ್ಯುತ್ ತಂತಿ ಮೆಟ್ಟಿ ತಾಯಿ-ಮಗು ಸುಟ್ಟು ಕರಕಲು
ಬೆಂಗಳೂರು: ಬೆಳ್ಳಂಬೆಳಗ್ಗೆಯೇ ರಾಜಧಾನಿಯಲ್ಲಿ ಅತ್ಯಂತ ಆತಂಕಕಾರಿ ಮತ್ತು ಹೃದಯ ಹಿಂಡುವ ಘಟನೆ ನಡೆದಿದೆ. ತನ್ನ ಪುಟ್ಟ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ವಿದ್ಯುತ್ ಆಘಾತಕ್ಕೆ (Electricuted) ಒಳಗಾಗಿ ಮಗುವಿನೊಂದಿಗೆ ಸುಟ್ಟು ಕರಕಲಾಗಿದ್ದಾರೆ (Mother and Child dead). ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ (BESCOM Negligence) ಕ್ಕೆ ತಾಯಿ-ಮಗು ಬಲಿಯಾಗಿದ್ದಾರೆ.
ತಾಯಿ ಸೌಂದರ್ಯ ಮತ್ತು ಪುಟ್ಟ ಮಗಳು ಲಿಯಾ ಮೃತಪಟ್ಟ ದುರ್ದೈವಿಗಳು. ವೈಟ್ ಫೀಲ್ಡ್ ಸಮೀಪದ ಹೋಪ್ ಫಾರ್ಮ್ ಸರ್ಕಲ್ ಬಳಿ ದುರ್ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಸೌಂದರ್ಯ ಅವರು ತಮ್ಮ ಪತಿ ಸಂತೋಷ್ ಮತ್ತು ಮಗುವಿನೊಂದಿಗೆ ತಮಿಳುನಾಡಿನ ತಾಯಿ ಮನೆಗೆ ಹೋಗಿದ್ದರು. ಶನಿವಾರ ರಾತ್ರಿ ಅವರು ಅಲ್ಲಿಂದ ಹೊರಟು ಬೆಳಗ್ಗೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಬಸ್ಸಿನಿಂದ ಇಳಿದಿದ್ದರು. ಬೆಳಗ್ಗೆ ಐದು ಗಂಟೆಯ ಹೊತ್ತಿಗೆ ಬಸ್ಸಿನಿಂದ ಇಳಿದು ಸಂತೋಷ್, ಸೌಂದರ್ಯ ಪುಟ್ಟ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡು ಅವರು ವೈಟ್ ಫೀಲ್ಡ್ ಸಮೀಪದ ಓಫಾರ್ಮ್ ಸರ್ಕಲ್ ಬಳಿ ಮನೆ ಕಡೆಗೆ ಸಾಗುತ್ತಿದ್ದರು. ಅವರು ಎ.ಕೆ ಗೋಪಾಲ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು.
ಇದನ್ನೂ ಓದಿ | Murder Case : ಭೂ ವಿಜ್ಞಾನಿ ಪ್ರತಿಮಾ ಕೊಲೆಗೆ ಟ್ವಿಸ್ಟ್; ಹಣ-ಒಡವೆ ಕದಿಯೋಕೆ ಸ್ಕೆಚ್ ಹಾಕಿದ್ದ ಹಂತಕ!
ಈ ವೇಳೆ ರಸ್ತೆ ಬದಿ ತುಂಡಾಡಿ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಅವರಿಗೆ ಕಾಣಿಸಲಿಲ್ಲ . ಕತ್ತಲಲ್ಲಿ ಅವರು ವಿದ್ಯುತ್ ತಂತಿಯನ್ನು ತುಳಿದಿದ್ದರು. ಮತ್ತು ಒಮ್ಮೆಗೇ ವಿದ್ಯುತ್ ಅವರ ದೇಹದಲ್ಲಿ ಪ್ರವಹಿಸಿ ತಾಯಿ ಮತ್ತು ಮಗು ಸ್ಥಳದಲ್ಲೇ ಸುಟ್ಟು ಕರಕಲಾಗಿ ಹೋಗಿದ್ದಾರೆ.