Site icon Vistara News

ಗಣೇಶೋತ್ಸವ ಭದ್ರತೆಗೆ ಹೋಗಿದ್ದ ಪೊಲೀಸರು ಹಳ್ಳದ ನೀರಲ್ಲಿ ಕೊಚ್ಚಿ ಹೋಗಿದ್ದು ನಿಜ, ಸಿಕ್ಕಿತು ಮೃತದೇಹ

police death koppala

ಕೊಪ್ಪಳ: ಯಾವುದು ಸುಳ್ಳಾಗಲಿ ಎಂದು ಆ ಭಾಗದ ಜನರು ಆಶಿಸುತ್ತಿದ್ದರೋ ಅದುವೇ ನಿಜವಾಗಿದೆ. ಕೊಪ್ಪಳ ಜಿಲ್ಲೆಯ ತೊಂಡಿಹಾಳ ಬಳಿಯ ಹಳ್ಳದಲ್ಲಿ ಪೊಲೀಸರಿಬ್ಬರು ಕೊಚ್ಚಿ ಹೋಗಿರಬಹುದು ಎಂಬ ಸಂಶಯ ನಿಜವಾಗಿದೆ.

ಸೋಮವಾರ ಗದಗ ಜಿಲ್ಲೆಯ ಗಜೇಂದ್ರ ಗಡಕ್ಕೆ ಬಂದೋ ಬಸ್ತ್ ಗೆ ಬಂದಿದ್ದ ಮುಂಡರಗಿ ಠಾಣೆಯ ಮಹೇಶ ಹಾಗೂ ನಿಂಗಪ್ಪ ಎಂಬಿಬ್ಬರು ಪೊಲೀಸರು ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರ ಮೊಬೈಲ್‌ ಹಳ್ಳದ ಲೊಕೇಶನ್‌ ತೋರಿಸುತ್ತಿತ್ತು. ಹೀಗಾಗಿ ಅವರು ಹಳ್ಳಕ್ಕೆ ಬಿದ್ದು ಕೊಚ್ಚಿ ಹೋಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಲಾಗಿತ್ತು. ಆದರೂ ಅವರು ಎಲ್ಲಾದರೂ ಹೋಗಿ ಬದುಕಿರಬಹುದು ಎಂಬ ದೂರದ ಆಶಯವೂ ಈಗ ಸುಳ್ಳಾಗಿದೆ. ಅವರು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವುದು ಒಂದು ಶವ ಸಿಗುವ ಮೂಲಕ ದೃಢವಾಗಿದೆ.

ತೊಂಡಿಹಾಳ ಹಳ್ಳದಲ್ಲಿ ಕೊಚ್ಚಿ ಹೋದ ಪೊಲೀಸರಿಗಾಗಿ ಶೋಧ ಕಾರ್ಯ

ಭಾರಿ ಮಳೆಯಿಂದಾಗಿ ತೊಂಡಿಹಾಳ ಬಳಿಯ ಹಳ್ಳ ಈ ಭಾಗದಲ್ಲಿ ತುಂಬಿ ಹರಿಯುತ್ತಿದೆ. ಅದರಲ್ಲೂ ಕೆಸರು ನೀರು ಅಬ್ಬರಿಸುತ್ತಿದೆ. ಪೊಲೀಸರ ಮೊಬೈಲ್‌ ಇಲ್ಲೇ ಲೊಕೇಶನ್‌ ಎಂಡ್‌ ತೋರಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದ ಶೋಧ ಕಾರ್ಯ ನಡೆಸಿದರು. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಾ ಭೇಟಿ ನೀಡಿದ್ದಾರೆ. ಊರಿನ ಜನರೂ ಸೇರಿ ಹುಡುಕಾಟಕ್ಕೆ ಸಹಕರಿಸಿದರು.

ಭಾರಿ ಹುಡುಕಾಟದ ಸಂದರ್ಭದಲ್ಲಿ ಹಳ್ಳದ ಸೇತುವೆ ಭಾಗದಿಂದ ಸುಮಾರು ಒಂದು ಕಿಲೋ ಮೀಟರ್ ದೂರದಲ್ಲಿ ಪೊಲೀಸ್‌ ಸಿಬ್ಬಂದಿಗಳಲ್ಲಿ ಒಬ್ಬರಾದ ಮಹೇಶ‌ ಅವರ ಮೃತದೇಹ ಪತ್ತೆಯಾಗಿದೆ. ನಿಂಗಪ್ಪ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.

ತೊಂಡಿಹಾಳ ಹಳ್ಳದಲ್ಲಿ ಕೊಚ್ಚಿ ಹೋದ ಪೊಲೀಸರಿಗಾಗಿ ಶೋಧ ಕಾರ್ಯ

ಈ ಪೊಲೀಸರು ಯಾಕೆ ಹಳ್ಳದ ಬಳಿಗೆ ಹೋದರು? ನೀರಿಗೆ ಬಿದ್ದಿದ್ದು ಹೇಗೆ ಎನ್ನುವ ಬಗ್ಗೆ ಹಲವು ಪ್ರಶ್ನೆಗಳು ಇನ್ನೂ ಉಳಿದುಕೊಂಡಿವೆ. ಆದರೆ, ಎರಡು ಮನೆಗಳ ದೀಪವಂತೂ ಆರಿದೆ.

ಇದನ್ನೂ ಓದಿ | Rain News | ಗಣೇಶ ವಿಸರ್ಜನೆ ಭದ್ರತೆಗೆ ಹೋದ ಇಬ್ಬರು ಪೊಲೀಸರು ನಾಪತ್ತೆ, ಕೊಚ್ಚಿ ಹೋದ್ರಾ?

Exit mobile version