ಆನೇಕಲ್: ಬೈಕ್‌ನಿಂದ ಬಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಜಿಗಣಿ ಸಮೀಪದ ಮಾದ ಪಟ್ಟಣದ ಬಳಿ ಶನಿವಾರ ನಡೆದಿದೆ. ರಸ್ತೆ ಹಂಪ್ ಗೊತ್ತಾಗದೇ ಸಾಗಿದ್ದರಿಂದ ಬೈಕ್ ಸ್ಕಿಡ್ ಆಗಿ ಅಪಘಾತ (Bike Accident) ಸಂಭವಿಸಿದೆ.
ಒಡಿಶಾ ಮೂಲದ ಕಾರ್ಮಿಕರಾದ ಫೋಕೀರ್ ಚರಣ್ ಪ್ರಧಾನ್ (29), ಬೀರ್ ಸಿಂಗ್ ನಾಯಕ್(24) ಮೃತರು. ಕೆಲಸ ಮುಗಿಸಿಕೊಂಡು ಜಿಗಣಿಯಿಂದ ಇಂಡ್ಲವಾಡಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮಾದಪಟ್ಟಣ ಬಳಿ ರಸ್ತೆ ಹಂಪ್ ಗೊತ್ತಾಗದೆ ಸವಾರ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಮುಂಭಾಗದಲ್ಲಿ ನಿಂತಿದ್ದ ಬಸ್‌ಗೆ ಬೈಕ್ ಡಿಕ್ಕಿಯಾಗಿದೆ. ಇದರಿಂದ ಸವಾರರು ಹಾರಿ ಬಿದ್ದಾಗ ಬಸ್‌ಗೆ ತಲೆ ತಗುಲಿ ಗಂಭೀರ ಗಾಯಗೊಂಡಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
L&t ಕಂಪನಿಯಲ್ಲಿ ಹೆಲ್ಪರ್ ಆಗಿ ಫೋಕೀರ್ ಚರಣ್ ಪ್ರಧಾನ್, ಶಕ್ತಿ ಪ್ರೊಸೆಸಿಂಗ್ ಕಂಪನಿಯಲ್ಲಿ ಸಹಾಯಕನಾಗಿ ಬೀರ್ ಸಿಂಗ್ ನಾಯಕ್ ಕೆಲಸಮಾಡುತ್ತಿದ್ದ. ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Murder case : ಮಲಗಿದ್ದ ರೈತನ ರುಂಡವನ್ನೇ ಕತ್ತರಿಸಿದ ದುರುಳರು!
ಚಾರ್ಮಾಡಿ ಘಾಟ್‌ನಲ್ಲಿ ಲಾರಿ-ಕಾರ್ ಡಿಕ್ಕಿಯಾಗಿ ಐವರಿಗೆ ಗಾಯ
ಚಿಕ್ಕಮಗಳೂರು: ಚಾರ್ಮಾಡಿ ಘಾಟ್‌ನಲ್ಲಿ ಲಾರಿ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಐವರು ಗಾಯಗೊಂಡಿರುವುದು ನಡೆದಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿ ಘಾಟ್‌ನ ತಿರುವಿನಲ್ಲಿ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ಐವರಿಗೆ ಗಾಯಗಳಾಗಿವೆ. ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಚಾರ್ಮಾಡಿ ಘಾಟ್‌ನಲ್ಲಿ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು, ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
ಬಸ್ ಪಲ್ಟಿಯಾಗಿ ನಾಲ್ವರ ಸಾವು; ಮದುವೆಗೆ ಹೊರಟಿದ್ದವರು ಮಸಣ ಸೇರಿದರು
ಚಿತ್ರದುರ್ಗ: ಮದುವೆಗೆ ಹೊರಟಿದ್ದ ಬಸ್ ಭೀಕರ ಅಪಘಾತಕ್ಕೀಡಾಗಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಹೊಸದುರ್ಗ-ಹೊಳಲ್ಕೆರೆ ಮಾರ್ಗದ ಉಗಣೆ ಕಟ್ಟೆ ಬಳಿ ನಡೆದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ದುರಂತ (Bus Accident) ಸಂಭವಿಸಿದೆ.
ಇದನ್ನೂ ಓದಿ | Someshwara Beach: ದ್ವಿತೀಯ ಪಿಯುಸಿ ಇಬ್ಬರು ವಿದ್ಯಾರ್ಥಿಗಳು ಸೋಮೇಶ್ವರದಲ್ಲಿ ಸಮುದ್ರಪಾಲು
ಹೊಸದುರ್ಗ -ಹೊಳಲ್ಕೆರೆ ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದರಿಂದ ನಾಲ್ವರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊಳಲ್ಕೆರೆ, ಹೊಸದುರ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸೀಗೆಹಟ್ಟಿಯಿಂದ ದಾವಣಗೆರೆಗೆ ಮದುವೆಯ ಬಸ್ ಹೋಗುತ್ತಿದ್ದಾಗ ಅಪಘಾತ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ