ದಾವಣಗೆರೆ: ಅಣ್ಣನ ಕೊಲೆ ಪ್ರಕರಣದ ಆರೋಪಿಗಳಿಗೆ ಜಾಮೀನು ಕೊಡಿಸಿದ್ದಾರೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ಇಬ್ಬರಿಗೆ ಚಾಕು ಇರಿದಿರುವ ಘಟನೆ (Stabbing Case) ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಂದ್ರಪ್ಪ ಮತ್ತು ಆತನ ಪುತ್ರ ಹೇಮಂತ್ ಗಾಯಾಳುಗಳು. ಹಾಲಸ್ವಾಮಿ ಚಾಕು ಇರಿದ ಆರೋಪಿ. ಆರೋಪಿ ಹಾಲಸ್ವಾಮಿಯ ಅಣ್ಣ ರಾಮಕೃಷ್ಣ, ನರೇಗಾ ಯೋಜನೆಯಲ್ಲಿ ಅವ್ಯವ್ಯಹಾರ ನಡೆದಿದೆ ಎಂದು ಪಿಡಿಒ ಎ.ಟಿ. ನಾಗರಾಜ್ ವಿರುದ್ಧ ಆರೋಪ ಮಾಡಿದ್ದರು. ಆದರೆ, ಕಳೆದ ಗೌರಿಪುರ ಪಕ್ಕದ ಹೊಸಕೆರೆ ದಾಬಾ ಬಳಿ ರಾಮಕೃಷ್ಣ ಕೊಲೆಯಾಗಿತ್ತು. ಆರೋಪಿಗಳು ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಆರೋಪಿಗಳಿಗೆ ಜಾಮೀನು ನೀಡಲು ಸಹಕಾರ ನೀಡಿದ್ದಾರೆ ಎಂದು ಅನುಮಾನಿಸಿ ಮೃತ ರಾಮಕೃಷ್ಣ ಸಹೋದರ ಹಾಲಸ್ವಾಮಿ, ಚಂದ್ರಪ್ಪ ಮತ್ತು ಪುತ್ರ ಹೇಮಂತ್ ಜತೆ ಗಲಾಟೆ ಮಾಡಿದ್ದಾನೆ. ಗಲಾಟೆ ತಾರಕಕ್ಕೇರಿದಾಗ ಹಾಲಸ್ವಾಮಿ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆತನಿಗೂ ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ.
ಇದನ್ನೂ ಓದಿ | Assault Case : ಹೆಂಡತಿ ಕಣ್ಣಿನ ಗುಡ್ಡೆಯನ್ನೇ ಕಚ್ಚಿ ಕಿತ್ತೊಗೆದ ಕ್ರೂರಿ!
ಗಲಾಟೆ ವಿಡಿಯೋ ವೈರಲ್ ಆಗಿದ್ದರಿಂದ ಗೌರಿಪುರ ಗ್ರಾಮದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಭದ್ರತೆಗಾಗಿ 20ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಾಲಸ್ವಾಮಿಗೆ ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೇಮಂತ್ ಮತ್ತು ಚಂದ್ರಪ್ಪಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಮತ್ತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಂಚಕ್ಕೆ ಬೇಡಿಕೆ ಇಟ್ಟ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಧಾರವಾಡ: ಕಾಮಗಾರಿ ಬಿಲ್ ಪಾಸ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಧಾರವಾಡದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಹಾಗೂ ಕಿರಿಯ ಎಂಜಿನಿಯರ್ ಪ್ರಕಾಶ್ ಹೊಸಮನಿ ಆರೋಪಿಗಳು.
ಉತ್ತರ ಕನ್ನಡದ ಬಾಲಕೃಷ್ಣ ನಾಯ್ಕ ಎನ್ನುವ ಕಂಟ್ರಾಕ್ಟರ್‌ನ ಬಿಲ್ ಪಾಸ್ ಮಾಡಲು ಅಧಿಕಾರಿಗಳು ಲಂಚ ಕೇಳಿದ್ದರು. ಹಾವೇರಿಯ ಮೂರು ಕಡೆಗಳಲ್ಲಿ ಬಾಲಕೃಷ್ಣ ರಸ್ತೆ ಕಾಮಗಾರಿ ಮಾಡಿದ್ದ. ಮೊದಲು ಪೋನ್ ಪೇ ಮೂಲಕ 83 ಸಾವಿರ ರೂ. ಪಡೆದು ನಂತರ, ತಲಾ 50 ಸಾವಿರ ರೂ.ಗಳಿಗೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಅದರಂತೆ 1 ಲಕ್ಷ ಹಣ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ