Site icon Vistara News

Kempegowda Jayanti: ಕೆಂಪೇಗೌಡ ಜಯಂತಿಗೆ ರಾಜ್ಯಮಟ್ಟದ 2 ಕಾರ್ಯಕ್ರಮ: ಹಾಸನದಲ್ಲೊಂದು, ಬೆಂಗಳೂರಲ್ಲೊಂದು

Kempegowda Statue in Bengaluru museum

#image_title

ಬೆಂಗಳೂರು: ಈಗಾಗಲೆ ಬಿಜೆಪಿ ಸರ್ಕಾರ ನಿರ್ಧಾರ ಮಾಡಿದಂತೆ ಹಾಸನದಲ್ಲಿ ರಾಜ್ಯಮಟ್ಟದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲೂ ಒಂದು ರಾಜ್ಯಮಟ್ಟದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೆಂಪೇಗೌಡ ಜಯಂತಿ ಆಚರಣೆ ಪೂರ್ವಭಾವಿ ಸಭೆ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಕೆಂಪೇಗೌಡ ಜಯಂತಿ ಆಚರಣೆ ವಿಚಾರವಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ಜತೆಗೂಡಿ ಸಭೆ ಮಾಡಿದ್ದು, ಈ ಸಭೆಯಲ್ಲಿ ಅನೇಕ ಸಂಘ ಸಂಸ್ಥೆಗಳು ಭಾಗವಹಿಸಿದ್ದವು. ಕೆಂಪೇಗೌಡ ಜಯಂತಿ ಕೇವಲ ಒಂದು ಸಮುದಾಯ, ಜಾತಿ ಅಥವಾ ಧರ್ಮಕ್ಕೆ ಸೀಮಿತವಾದುದಲ್ಲ. ಎಲ್ಲಾ ಜಾತಿ ಹಾಗೂ ಧರ್ಮಕ್ಕೆ ಸಲ್ಲುವ ರಾಜ್ಯಮಟ್ಟದ ಕಾರ್ಯಕ್ರಮ. ನಮ್ಮ ಸರ್ಕಾರದ ಅವಧಿಯಲ್ಲಿ ಜೂನ್ 27ರಂದು ಪ್ರತಿ ತಾಲೂಕಿನಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮಾಡಬೇಕು ಎಂದು ಆದೇಶ ಮಾಡಿದ್ದೆವು. ಅದೇ ರೀತಿ ಸರ್ಕಾರದ ವತಿಯಿಂದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ಸಂಘ ಸಂಸ್ಥೆಗಳು ಭಾಗವಹಿಸುವಂತೆ ಮನವಿ ಮಾಡಿದ್ದೇವೆ.

ಬಿಬಿಎಂಪಿಯ ಎಲ್ಲಾ ವಾರ್ಡ್ ಗಳಲ್ಲೂ ಕಾರ್ಯಕ್ರಮ ನಡೆಯುತ್ತಿತ್ತು. ಬಿಬಿಎಂಪಿ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ವಾರ್ಡ್ ರಚನೆ ಕುರಿತ ಗೊಂದಲ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಜೂನ್ 28 ರಿಂದ ಜುಲೈ 5ನೇ ತಾರೀಕಿನವರೆಗೆ 28 ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಚರಿಸಲು ತೀರ್ಮಾನಿಸಲಾಗಿದೆ.

ಹಿಂದಿನ ಸರ್ಕಾರ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಹಾಸನದಲ್ಲಿ ಮಾಡುವ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ಅದನ್ನು ನಾವು ನಿಲ್ಲಿಸುವುದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆ ಕಾರ್ಯಕ್ರಮ ನಡೆಯಲಿದೆ. ಆದರೆ ಬೆಂಗಳೂರಿನಲ್ಲಿ ಜೂನ್ 27ರ ಬೆಳೆಗ್ಗೆ 9 ಗಂಟೆಗೆ ಕೆಂಪೇಗೌಡರ 4 ಗೋಪುರಗಳಿಂದ ಹಾಗೂ ಮಾಗಡಿಯಿಂದ ಮೂರ್ನಾಲ್ಕು ಶಾಸಕರ ಸಮ್ಮುಖದಲ್ಲಿ ಜ್ಯೋತಿ ಉದ್ಘಾಟನೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಐವರು ಸಚಿವರು ತೆರಳಲಿದ್ದಾರೆ. ಮದ್ಯಾಹ್ನ 12 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿ ಕಾರ್ಯಕ್ರಮ ಇದಾಗಿದ್ದು, ಬಿ.ಎಲ್ ಶಂಕರ್ ಅವರ ನೇತೃತ್ವದ ಸಮಿತಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಿದೆ.

27ರಂದು ನಡೆಯಲಿರುವ ಕಾರ್ಯಕ್ರಮಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೆಂಪೇಗೌಡ ಪ್ರಾಧಿಕಾರ ವತಿಯಿಂದ ನಡೆಸಲಾಗುವುದು. ಪಾಲಿಕೆ ವತಿಯಿಂದ ಜುಲೈ 9ರಂದು 198 ವಾರ್ಡ್ ಗಳಲ್ಲಿ ಬೆಂಗಳೂರಿಗೆ ಸೇವೆ ಮಾಡಿದವರನ್ನು ಗುರುತಿಸಿ ಅವರಿಗೆ ಕೆಂಪೇಗೌಡ ಬೆಂಗಳೂರು ನಗರ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಸಚಿವರಾದ ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ, ಮಾಗಡಿ ಶಾಸಕರಾದ ಬಾಲಕೃಷ್ಣಾ, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುಳಾ, ರಾಜೇಂದ್ರ ಕುಮಾರ್ ಕಠಾರಿಯಾ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Karnataka Politics: ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ₹50 ಕೋಟಿ; ಉದ್ಘಾಟನೆಗೆ ₹30 ಕೋಟಿ: ಡೀಲ್‌ ಆಗಿದೆ ಎಂದ ಡಿ.ಕೆ. ಸುರೇಶ್‌

Exit mobile version