ಬೆಂಗಳೂರು: ತಮ್ಮ ಮಕ್ಕಳು ಓದಬೇಕು.. ಓದಿ ದೊಡ್ಡವರಾಗಬೇಕು.. ದೊಡ್ಡವರಾಗಿ ದೊಡ್ಡ ಕೆಲಸಕ್ಕೆ ಸೇರಬೇಕು ಎಂದು ಕನಸನ್ನು ಕಟ್ಟಿಕೊಂಡು ತಂದೆ-ತಾಯಿ ಮಕ್ಕಳನ್ನು ಓದಲು ಕಳುಹಿಸುತ್ತಾರೆ. ಆದರೆ, ಮಕ್ಕಳು ತೆಗೆದುಕೊಳ್ಳುವ ನಿರ್ಧಾರ ಪೋಷಕರನ್ನು ಕೊರಗುವಂತೆ ಮಾಡಿಬಿಡುತ್ತದೆ. ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯಾರ್ಥಿಗಳಿಬ್ಬರು ಶಿಕ್ಷಣವೇ ಸಾಕೆಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮನಕಲಕುವಂತಿದೆ.
ತುಮಕೂರು ನಗರದ ಸದಾಶಿವ ನಗರದ ನಿವಾಸಿ ಮಂಜೇಶ್ ಅವರ ಪುತ್ರ ಜಿಷ್ನು ಎಂಬ 16 ವರ್ಷದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಶಿರಾ ನಗರದ ಪ್ರತಿಷ್ಠಿತ ಖಾಸಗಿ ಪಿ.ಯು. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಹಾಸ್ಟೆಲ್ ವಿದ್ಯಾಭ್ಯಾಸಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ತಿಲಕ್ ಪಾರ್ಕ್ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ರಾಯಚೂರಿನ ಲಿಂಗಸುಗೂರು ತಾಲೂಕಿನ ಅನ್ವರಿ ಗ್ರಾಮದ ಗಂಗಣ್ಣ ಎಂಬ ೧೪ ವರ್ಷದ ಬಾಲಕ ಶಾಲೆಗೆ ಹೋಗಲು ಇಷ್ಟವಿಲ್ಲದ ಕಾರಣಕ್ಕೆ ಮಸ್ಕಿ ತಾಲ್ಲೂಕಿನ ಮಲ್ಲದಗುಡ್ಡ ಸರ್ಕಾರಿ ಶಾಲಾ ಆವರಣದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತನು ಮಾನ್ವಿ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಮಲ್ಲದಗುಡ್ಡ ಗ್ರಾಮದಲ್ಲಿನ ಸಂಬಂಧಿಕರ ಮನೆಯಲ್ಲಿ ವಾಸವಿದ್ದನು. ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದ ಬಾಲಕ, ನಂತರ ಸರ್ಕಾರಿ ಶಾಲೆಯ ಮೈದಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೂರನೇ ಬಾರಿಯೂ ಪಿಯು ಪರೀಕ್ಷೆಯಲ್ಲಿ ಫೇಲ್; ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ