ಚಿಕ್ಕಬಳ್ಳಾಫುರ: ಇಲ್ಲಿನ ನಂದಿ ಗಿರಿಧಾಮದಲ್ಲಿ ಟ್ರೆಕ್ಕಿಂಗ್ ಮಾಡಲು ಬಂದಿರುವ ವಿದ್ಯಾರ್ಥಿಗಳ ಪೈಕಿ ಇಬ್ಬರು ಕಲ್ಲಿನಲ್ಲಿ ಕಾಲು ಜಾರಿ ಇಳಿಜಾರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ (Students in danger). ಸ್ವಲ್ಪ ಆಯತಪ್ಪಿದರೆ ಪ್ರಪಾತಕ್ಕೆ ಬೀಳುವ ಸ್ಥಿತಿಯಲ್ಲಿರುವ ಈ ವಿದ್ಯಾರ್ಥಿಗಳ ರಕ್ಷಣೆಗಾಗಿ ಶತ ಪ್ರಯತ್ನ ನಡೆಯುತ್ತಿದೆ.
ಇಲ್ಲಿನ ವೀರಭದ್ರೇಶ್ವರ ದೇವಸ್ಥಾನ ಇಳಿಜಾರಿನಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಿಕ್ಕಿ ಹಾಕಿಕೊಂಡಿದ್ದು, ಚಿಕ್ಕಬಳ್ಳಾಪುರದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬೆಂಗಳೂರು ಗ್ರಾ.ಜಿಲ್ಲೆಯ ದೊಡ್ಡಬಳ್ಳಾಪುರ ಮೂಲದ ಕಾಲೇಜು ವಿದ್ಯಾರ್ಥಿಗಳಾದ ಮನೋಜ್ ಮತ್ತು ಮಂಜುನಾಥ್ ಸಿಕ್ಕಿಹಾಕಿಕೊಂಡವರು. ಇವರಿಬ್ಬರೂ ಬಿಕಾಂ ವಿದ್ಯಾರ್ಥಿಗಳು. ವೀಕೆಂಡ್ ಇರುವುದರಿಂದ ಬೆಳಗ್ಗೆ ಸ್ನೇಹಿತರ ಜತೆ ಸೇರಿ ಟ್ರೆಕ್ಕಿಂಗ್‌ಗೆ ಹೋಗಿದ್ದರು. ಈ ವೇಳೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಕಾಲು ಜಾರಿ ಕೆಳಕ್ಕೆ ಉರುಳಿದ್ದಾರೆ. ಹೀಗೆ ಜಾರಿದಾಗ ಒಂದು ಕಡೆ ಆಧಾರವನ್ನು ಹಿಡಿದುಕೊಂಡಿದ್ದಾರೆ. ಸದ್ಯಕ್ಕೆ ಅವರು ಇರುವ ಜಾಗ ಸುರಕ್ಷಿತ ಅನಿಸುತ್ತಿದೆಯಾದರೂ ಅಲ್ಲಿಂದ ಸ್ವಲ್ಪವೇ ಸ್ವಲ್ಪ ಕಾಲು ಜಾರಿದರೂ ಪ್ರಪಾತಕ್ಕೆ ಬೀಳುವುದು ಖಚಿತ. ಹಾಗಂತ ಮೇಲೆ ಬರಲು ಕೂಡಾ ಸಾಧ್ಯವಾಗುತ್ತಿಲ್ಲ.
ಈ ಅಪಾಯಕಾರಿ ಸ್ಥಿತಿಯಲ್ಲಿ ಸಿಲುಕಿರುವ ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ಸಾಮಗ್ರಿಗಳ ಮೂಲಕ ರಕ್ಷಣೆಗೆ ಧಾವಿಸಿರುವ ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಜಾರಿಬಿದ್ದಿರುವ ಒಬ್ಬ ವಿದ್ಯಾರ್ಥಿಗೆ ಗಾಯವೂ ಆಗಿದೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವರಾಜ್ ಕರಲಿಂಗನ್ನವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ | Suicide case : ಕುಡಿತ ಬಿಡಿಸಲು ಆಸ್ಪತ್ರೆಗೆ ಕರೆತಂದ ತಾಯಿ, ಅಲ್ಲಿಂದ ತಪ್ಪಿಸಿಕೊಂಡು ಹೋಗಿ ನದಿಗೆ ಹಾರಿದ ಮಗ