Site icon Vistara News

Car Accident: ನಿದ್ದೆ ಮಂಪರಿನಲ್ಲಿ ಡಿವೈಡರ್‌ಗೆ ಗುದ್ದಿದ ಕಾರು; ಇಬ್ಬರು ವಿದ್ಯಾರ್ಥಿಗಳ ದುರ್ಮರಣ

car Accident in yelahanka

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದ್ದರಿಂದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ (Car Accident) ಯಲಹಂಕ ಸಮೀಪದ ಹುಣಸಮಾರನಹಳ್ಳಿಯಲ್ಲಿ ನಡೆದಿದೆ. ನಿದ್ದೆ ಮಂಪರಿನಲ್ಲಿ ವಾಹನ ಚಾಲನೆ ಮಾಡಿರುವುದು ದುರಂತಕ್ಕೆ ಕಾರಣವಾಗಿದೆ.

ಕಾರ್ತಿಕ್ ಜೈನ್, ಆದರ್ಶ್ ಕುಮಾರ್ ಮೃತ ವಿದ್ಯಾರ್ಥಿಗಳು. ಕಾರಿನಲ್ಲಿ ಐವರು ವಿದ್ಯಾರ್ಥಿಗಳು ಶನಿವಾರ ತಡರಾತ್ರಿ ನಂದಿ ಬೆಟ್ಟಕ್ಕೆ ಟ್ರಿಪ್ ಹೊರಟಿದ್ದರು. ಆದರೆ, ಅಷ್ಟು ಹೊತ್ತಿನಲ್ಲಿ ಹೋಗುವುದು ಬೇಡ ಎಂದು ವಿದ್ಯಾರ್ಥಿಗಳು ವಾಪಸ್ ಬರುತ್ತಿದ್ದರು. ಈ ವೇಳೆ ಹುಣಸಮಾರನಹಳ್ಳಿ ಬಳಿ ಚಾಲಕ ನಿದ್ದೆ ಮಂಪರಿನಲ್ಲಿ ಡಿವೈಡರ್‌ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಕಾರ್ತಿಕ್ ಜೈನ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆದರ್ಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇನ್ನುಳಿದ ಮೂವರಿಗೆ ಗಾಯಗಳಾಗಿದ್ದು, ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | NIA Raid: ಪಿಎಫ್‌ಐಗೆ ಫಂಡಿಂಗ್; ದ.ಕನ್ನಡದ 3 ಕಡೆ ಎನ್‌ಐಎ ರೇಡ್‌, ಧಾರ್ಮಿಕ ಶಿಕ್ಷಕನ ಮನೆಯಲ್ಲಿ ಶೋಧ

ಗೋ ಕಟ್ಟೆಯಲ್ಲಿ ಮುಳುಗಿ ನಾಲ್ವರ ಸಾವು; ರೀಲ್ಸ್‌ ಹುಚ್ಚಿಗೆ ನಡೆಯಿತು ದುರಂತ

ತುಮಕೂರು: ಗೋ ಕಟ್ಟೆಯಲ್ಲಿ ಮುಳುಗಿ ನಾಲ್ವರು ಮೃತಪಟ್ಟಿರುವ ಘಟನೆ ನಗರದ ಕ್ಯಾತಸಂದ್ರದ ಸಿದ್ಧಗಂಗಾ ಮಠದ ಹಿಂಭಾಗದಲ್ಲಿ ನಡೆದಿದೆ. ಮೊದಲಿಗೆ ಗೋ ಕಟ್ಟೆಯಲ್ಲಿ ಈಜಲು ಹೋಗಿದ್ದ ಮಠದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಹೋದ ತಾಯಿ‌ ಹಾಗೂ ಮತ್ತಿಬ್ಬರು ಬಾಲಕರು ಮುಳುಗಿದ್ದಾರೆ. ಈ ಮೂವರನ್ನು ರಕ್ಷಿಸಲು ಹೋದ ಮಹದೇವಪ್ಪ ಎಂಬಾತ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಾಗಡಿಯ ಶಂಕರ್ (12),‌ ಚಿಕ್ಕಮಗಳೂರಿನ‌ ಹರ್ಷಿತ್ (12), ಬೆಂಗಳೂರಿನ ಬಾಗಲಗುಂಟೆಯ ಲಕ್ಷ್ಮಿ (33) ಹಾಗೂ ಯಾದಗಿರಿ ಜಿಲ್ಲೆ ಅಫಜಲಪುರದ ಮಹದೇವಪ್ಪ (40) ಮೃತರು. ಘಟನೆಗೆ ಮತ್ತೊಂದು ತಿರುವು ಸಿಕ್ಕಿದ್ದು, ಈಜಲು ಹೋಗಿದ್ದಾಗ ವಿದ್ಯಾರ್ಥಿ ನೀರಿಗೆ ಬಿದ್ದಿಲ್ಲ. ವಿದ್ಯಾರ್ಥಿ ರಂಜಿತ್ ತಾಯಿ ಲಕ್ಷ್ಮಿ ಸೆಲ್ಫಿ ಹಾಗೂ ರೀಲ್ಸ್ ಹುಚ್ಚಿಗೆ ದುರಂತ ನಡೆದಿದೆ. ಗೋ ಕಟ್ಟೆ ದಡದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಗೋ ಕಟ್ಟೆ ಪಕ್ಕದಲ್ಲಿ ಊಟ ಮಾಡುತ್ತಿದ್ದಾಗ ರಂಜಿತ್‌ ಎಂಬ ಬಾಲಕ ಕೈತೊಳೆಯಲು ಹೋಗಿದ್ದಾಗ ನೀರಿಗೆ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಶಂಕರ್‌ ಮತ್ತು ಹರ್ಷಿತ್ ಹೋಗಿದ್ದಾರೆ. ಅವರು ಕೂಡ ಮುಳುಗುತ್ತಿದ್ದಾಗ ರಂಜಿತ್‌ ತಾಯಿ ನೀರಿಗಿಳಿದಿದ್ದಾರೆ. ಈ ನಾಲ್ವರನ್ನು ಅಪಾಯದಿಂದ ಪಾರು ಮಾಡಲು ಮಹದೇವಪ್ಪ ಹೋಗಿದ್ದರು. ಆದರೆ, ಈ ಪೈಕಿ ನಾಲ್ವರು ಮೃತಪಟ್ಟಿದ್ದು, ರಂಜಿತ್‌ ಎಂಬ ಬಾಲಕ ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Exit mobile version