Site icon Vistara News

ಪೆನ್ನಾರ್ ನದಿ ನೀರು ಹಂಚಿಕೆ ವಿವಾದ; ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್‌ನ ಇಬ್ಬರು ಜಡ್ಜ್!

Supreme Court On Article 370

Article 370: Constitution doesn’t restrict President from reorganising a state

ನವದೆಹಲಿ: ದಕ್ಷಿಣ ಪಿನಾಕಿನಿ ಎಂದೂ ಕರೆಯಲಾಗುವ ಪೆನ್ನಾರ್ ನದಿ ನೀರು ಹಂಚಿಕೆ (Pennaiyar river dispute) ಸಂಬಂಧ ಕರ್ನಾಟಕ (Karnataka) ಮತ್ತು ತಮಿಳುನಾಡು (Tamil Nadu) ನಡುವೆ ವಿವಾದ ಇದ್ದು, ಸುಪ್ರೀಂ ಕೋರ್ಟ್‌ನಲ್ಲಿ (Supreme Court) ವಿಚಾರಣೆ ನಡೆಯುತ್ತಿದೆ. ಉನ್ನತ ನ್ಯಾಯಾಲಯದಲ್ಲಿ ಬುಧವಾರ ಈ ಕುರಿತು ವಿಚಾರಣೆ ನಿಗದಿಯಾಗಿತ್ತು. ಆದರೆ, ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ (AS Bopanna) ಮತ್ತು ಎಂ ಎಂ ಸುಂದ್ರೇಶ್ (MM Sundresh) ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈ ಇಬ್ಬರೂ ನ್ಯಾಯಮೂರ್ತಿಗಳು ಸಂಬಂಧಿತ ವಿವಾದಿತ ರಾಜ್ಯಗಳ ಮೂಲದವರಾಗಿದ್ದೇ ವಿಚಾರಣೆಯಿಂದ ಹಿಂದೆ ಸರಿಯಲು ಕಾರಣ.

ಬುಧವಾರ ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆ ಇಬ್ಬರೂ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದರು. ಒಂದು ವೇಳೆ ನಾವು ಅರ್ಜಿ ವಿಚಾರಣೆ ಆರಂಭಿಸಿದರೆ, ವಿವಾದಕ್ಕೆ ಸಂಬಂಧಸಿದಂತೆ ನಾವಿಬ್ಬರೂ ಜಗಳಾಡಬೇಕಾಗುತ್ತದೆ ಎಂದು ತಮಾಷೆಯಾಗಿ ನ್ಯಾಯಮೂರ್ತಿಗಳು ಹೇಳಿದರು. ಅಲ್ಲದೇ, ಮತ್ತೊಂದು ಪೀಠಕ್ಕೆ ವಿಚಾರಣೆಯನ್ನು ವರ್ಗಾಯಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರಿಗೆ ಕೋರಿದರು. ಜಸ್ಟೀಸ್ ಎ ಎಸ್ ಬೋಪಣ್ಣ ಅವರು ಕರ್ನಾಟಕದವರಾದರೆ, ಜಸ್ಟೀಸ್ ಎಂ ಎಂ ಸುಂದ್ರೇಶ್ ಅವರು ತಮಿಳುನಾಡಿನವರಾಗಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲಶಕ್ತಿ ಸಚಿವಾಲಯವು ತನ್ನ ಅಫಿಡವಿಟ್ ಸಲ್ಲಿಸಿದೆ. ಅಂತರ್ ರಾಜ್ಯ ಜಲ ವಿವಾದಗಳ ಕಾಯ್ದೆ 1956 ರ ಅಡಿಯಲ್ಲಿ ಪೆನ್ನಯಾರ್ ಜಲ ವಿವಾದ ನ್ಯಾಯಾಧಿಕರಣ ರಚನೆಯ ಪ್ರಸ್ತಾವನೆಯನ್ನು ಕ್ಯಾಬಿನೆಟ್ ಸೆಕ್ರೆಟರಿಯೇಟ್‌ಗೆ ಪರಿಗಣನೆಗೆ ಸಲ್ಲಿಸಲಾಗಿದೆ ಮತ್ತು ಕೇಂದ್ರ ಸಚಿವ ಸಂಪುಟದ ಅನುಮೋದನೆಗೆ ಕೇಳಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದೆ. ಆದರೆ, ಈ ಕುರಿತು ಕೇಂದ್ರ ಸಚಿವ ಸಂಪುಟವು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ ಎಂದು ವಿವರಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ಪೆನ್ನಾರ್ ನದಿ ನೀರು ವಿವಾದ: ನ್ಯಾಯಾಧಿಕರಣ ರಚನೆಗೆ 4 ವಾರ ಸಮಯ ಕೇಳಿದ ಕೇಂದ್ರ ಸರ್ಕಾರ, ಅಸ್ತು ಎಂದ ಸುಪ್ರೀಂಕೋರ್ಟ್​

ಪೆನ್ನಾರ್ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ವಿವಾದಗಳಿವೆ. ಈ ಕುರಿತು ನ್ಯಾಯಾಧಿಕರಣ ರಚಿಸಬೇಕು ಎಂದು ತಮಿಳುನಾಡು ಸುಪ್ರೀಂ ಕೋರ್ಟ್ ಮೂಲ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯ ನೀಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆ ಸಂಬಂಧ ವಿಚಾರಣೆ ನಡೆಯುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version