ಬಾಗಲಕೋಟೆ: ಬಿಸಿಯೂಟಕ್ಕಾಗಿ ಶಾಲೆಗೆ ಬಂದಿದ್ದ ರೇಷನ್ ಅನ್ನು ಮನೆಗೆ ಸಾಗಿಸುತ್ತಿದ್ದ ಶಿಕ್ಷಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತೆರೆಯಲಾಗಿದ್ದ ಬಾಗಲಕೋಟೆಯ ವಿದ್ಯಾಗಿರಿ ಚೆಕ್‌ಪೋಸ್ಟ್ ಬಳಿ ಈ ಪ್ರಕರಣ ಬೆಳಕಿಗೆ ಬಂದಿದೆ. ತಲಾ 100 ಕೆಜಿ ಗೋಧಿ, ಬೇಳೆ ಹಾಗೂ 50 ಪ್ಯಾಕೆಟ್ ಅಡುಗೆ ಎಣ್ಣೆ ಜತೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶರಣಪ್ಪ ಬೇವೂರ್, ಹಾಗೂ ಸಹ ಶಿಕ್ಷಕ ಶಶಿಧರ್ ನರಸಪ್ಪನವರ್ ಈಗ ಸಿಕ್ಕಿಬಿದ್ದ ಶಿಕ್ಷಕರಾಗಿದ್ದಾರೆ. ಶಾಲೆಗೆ ಮಕ್ಕಳ ಬಿಸಿಯೂಟಕ್ಕಾಗಿ ನೀಡುವ ರೇಷನ್ ಅನ್ನು ಇವರು ತಮ್ಮ ಮನಗಳಿಗೆ ಸಾಗಾಟ ಮಾಡುತ್ತಿದ್ದರು.
ಇವರು ವಿದ್ಯಾಗಿರಿಯ ಬಿಟಿಡಿಎ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂಬರ್ 15ರ ಶಿಕ್ಷಕರಾಗಿದ್ದಾರೆ. ಶಾಲೆಗೆ ಬಂದಿರುವ ರೇಷನ್ ಅನ್ನು ಟಾಟಾ ಏಸ್ ವಾಹನದ ಮೂಲಕ ಮನೆಗೆ ಸಾಗಿಸುತ್ತಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ವಿದ್ಯಾಗಿರಿ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಆಗ ಇವುಗಳಿಗೆ ದಾಖಲೆ ಇಲ್ಲ ಎಂಬುದು ಗೊತ್ತಾಗಿದೆ. ಬಳಿಕ ವಿಚಾರಣೆ ನಡೆಸಿದಾಗ ಶಾಲೆಗೆ ಬಂದಿದ್ದ ರೇಷನ್ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: Nandini vs Amul: ಅಮುಲ್ ಜತೆ ನಂದಿನಿ ವಿಲೀನ ಪ್ರಸ್ತಾಪವೇ ಇಲ್ಲ: ಸಚಿವ ಎಸ್.ಟಿ. ಸೋಮಶೇಖರ್
ಹಾಗಾಗಿ ವಾಹನದಲ್ಲಿ ತಂದಿದ್ದ 100 ಕೆಜಿ ಗೋಧಿ, 100 ಕೆಜಿ ಬೇಳೆ ಹಾಗೂ 50 ಪ್ಯಾಕೆಟ್ ಅಡುಗೆ ಎಣ್ಣೆಯನ್ನು ಸೀಜ್ ಮಾಡಿದ್ದಾರೆ. ಶಾಲಾ ಬಿಸಿಯೂಟದ ಆಹಾರ ಧಾನ್ಯಗಳನ್ನು ಮನೆಗೆ ಸಾಗಸುತ್ತಿರುವ ಆರೋಪದ ಮೇಲೆ ಇಬ್ಬರೂ ಶಿಕ್ಷಕರ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಅಲ್ಲದೆ, ಆಹಾರ ಧಾನ್ಯವನ್ನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನವನ್ನು ಸಹ ಸೀಜ್ ಮಾಡಲಾಗಿದೆ.
ಧಾರವಾಡದಲ್ಲಿ ಚುನಾವಣಾಧಿಕಾರಿ ಕರ್ತ್ಯವ್ಯ ಲೋಪ; ಅಧಿಕಾರಿ ಅಮಾನತು
ಧಾರವಾಡ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಎಲ್ಲ ಕಡೆ ಹದ್ದಿನ ಕಣ್ಣನ್ನು ಇಟ್ಟಿದೆ. ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಗಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ರೂಪಿಸಿರುವ ನಿಯಮಾನುಸಾರ ಕ್ರಮ ಕೈಗೊಳ್ಳುವ ಹಾಗೂ ಮೇಲಧಿಕಾರಿಗಳಿಗೆ ವರದಿ ನೀಡುವ ಪದ್ಧತಿಯನ್ನೂ ಜಾರಿಗೆ ತರಲಾಗಿದೆ. ಈ ವೇಳೆ ಫ್ಲೈಯಿಂಗ್ ಸ್ಕ್ಯಾಡ್‌ನ ಅಧಿಕಾರಿಯೊಬ್ಬರು ಕರ್ತ್ಯವ್ಯ ಲೋಪ ಎಸೆಗಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಆದೇಶ ಹೊರಡಿಸಿದ್ದಾರೆ.
ಹೆಸ್ಕಾಂ ಅಧಿಕಾರಿಯಾಗಿರುವ ನವಲಗುಂದ ವಿಧಾನಸಭಾ ಕ್ಷೇತ್ರದ ಫ್ಲೈಯಿಂಗ್ ಸ್ಕ್ಯಾಡ್ ಆಗಿದ್ದ ನಾಗರಾಜ ಕುಬಹಳ್ಳಿ ಅವರನ್ನು ಅಮಾನತು ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಸಿ-ವಿಜಿಲ್ ಆ್ಯಪ್ ಅನ್ನು ಬಳಸುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದರು. ಆದರೆ, ಈ ಆದೇಶವನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: D ಕೋಡ್ ಅಂಕಣ: ರಾಜಕೀಯ ಹವಾಮಾನ ವರದಿ: ಕಾಂಗ್ರೆಸ್ ಕಡೆಗೆ ಬೀಸುವಂತಿದೆ ತಂಗಾಳಿ; ಪಕ್ಷಾಂತರಿಗಳಿಗೆ ತಿಳಿದಿದೆಯೇ ಒಳಸುಳಿ?
ಆದೇಶ ಪಾಲನೆ ಮಾಡದ ಬಗ್ಗೆ ಪತ್ರದ ಮೂಲಕ 24 ಗಂಟೆಯಲ್ಲಿ ಲಿಖಿತವಾಗಿ ಉತ್ತರ ನೀಡಬೇಕಿದ್ದ ನಾಗರಾಜ್ ಅವರು, ವಾಟ್ಸಾಪ್ ಮೂಲಕ ಜಿಲ್ಲಾಧಿಕಾರಿಗೆ ಉತ್ತರ ನೀಡಿದ್ದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಮಾಡಲಾಗಿದೆ.