ಬಾಗಲಕೋಟೆ: ಸಿಡಿಲಿನ ಹೊಡೆತಕ್ಕೆ ಮನೆಯ ಮಣ್ಣಿನ ಮೇಲ್ಚಾವಣಿ ಕುಸಿದು (House collapse) ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ನಡೆದಿದೆ.
ಗುರುವಾರ ರಾತ್ರಿ 11.30ರ ಸುಮಾರಿಗೆ ಜೋರಾಗಿ ಸಿಡಿಲು ಬಡಿದು, ಮನೆಯ ಚಾವಣಿ ಒಮ್ಮಿಂದೊಮ್ಮೆಗೇ ಉದುರಿಬಿದ್ದು, ಯಂಕುಬಾಯಿ ಕುಲಕರ್ಣಿ (79), ಶಾರದಾ ಪತ್ತಾರ (61) ಪ್ರಾಣ ಕಳೆದುಕೊಂಡರು.
ಈ ಮಹಿಳೆಯರಿಬ್ಬರೂ ಅಕ್ಕಪಕ್ಕದ ಮನೆಯವರಾಗಿದ್ದು, ರಾತ್ರಿ ಒಂದೇ ಮನೆಯಲ್ಲಿ ಮಲಗುತ್ತಿದ್ದರು. ಶಾರದಾ ಪತ್ತಾರ ಅವರಿಗೆ ಬೇರೆ ಮನೆ ಇದ್ದರೂ ದಿನಂಪ್ರತಿ ಯಂಕುಬಾಯಿ ಕುಲಕರ್ಣಿ ಅವರ ಮನೆಗೇ ಬರುತ್ತಿದ್ದರು ಎನ್ನಲಾಗಿದೆ. ಆಗಲೇ ದುರಂತ ನಡೆದು ಇಬ್ಬರೂ ಮೃತಪಟ್ಟಿದ್ದಾರೆ.
ಗುರುವಾರ ರಾತ್ರಿ ಈ ಭಾಗದಲ್ಲಿ ಸಿಡಿಲು ಗುಡುಗಿನ ಅಬ್ಬರವಿತ್ತು. ಮಳೆಯೂ ಜೋರಾಗಿ ಬಿದ್ದಿತ್ತು. ಈ ವೇಳೆ ಮಣ್ಣಿನಿಂದ ಮಾಡಿದ ಮೇಲ್ಚಾವಣಿ ಸಿಡಿಲಿಗೆ ತತ್ತರಿಸಿ ಕುಸಿದುಬಿದ್ದಿದೆ. ಮೇಲ್ಚಾವಣಿಯ ಮಣ್ಣು ಮತ್ತು ಕಲ್ಲು ಕೆಳಗೆ ಮಲಗಿದ್ದ ಯಂಕುಬಾಯಿ ಮತ್ತು ಶಾರದಾ ಅವ್ರ ಮೇಲೆ ಬಿದ್ದಿದೆ. ಪರಿಣಾಮವಾಗಿ ಅವರು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೂಡಲೇ ಸ್ಥಳೀಯರು ಧಾವಿಸಿ ರಕ್ಷಣೆಗೆ ಪ್ರಯತ್ನ ನಡೆಸಿದರು. ಕೊನೆಗೆ ಅಗ್ನಿಶಾಮಕ ದಳ ಸಿಬ್ಬಂದಿಗಳ ಸಹಾಯದಿಂದ ಶವಗಳನ್ನು ಹೊರತೆಗೆಯಲಾಗಿದೆ.
ಬಾದಾಮಿ ತಾಲೂಕು ಆಸ್ಪತ್ರೆಯಲ್ಲಿ ಮೃತ ಮಹಿಳೆಯರ ಶವ ಪರೀಕ್ಷೆ ನಡೆದಿದ್ದು, ಕುಟುಂಬದವರಿಗೆ ಬಿಟ್ಟುಕೊಡಲಾಗಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೋಟದ ಮನೆಯಲ್ಲಿ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದ ಗಂಡ
ಬಾಗಲಕೋಟೆ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಾಗಲಕೋಟೆ ಜಿಲ್ಲೆಯ ಹಿರೇಸಂಶಿ ಗ್ರಾಮದಲ್ಲಿ ಬೆಳಗಿನ ಈ ಘಟನೆ ನಡೆದಿದೆ.
ಮಾಯವ್ವ ಉದ್ದನ್ನವರ (43) ಎಂಬ ಮಹಿಳೆಯನ್ನು ಆಕೆಯ ಗಂಡ ಶಿವಪ್ಪ ಉದ್ದನ್ನವರ (48) ಎಂಬಾತ ತೋಟದ ಮನೆಯಲ್ಲಿ ಕೊಚ್ಚಿ ಕೊಂದು ಪರಾರಿಯಾಗಿದ್ದಾನೆ. ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಸಾಕಷ್ಟು ಸಾಲ ಮಾಡಿಕೊಂಡಿದ್ದ ಶಿವಪ್ಪ, ಹೆಂಡತಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಹಣ ಕೊಡದೆ ಇದ್ದಾಗ ಈ ರೀತಿ ಮಾಡಿದ್ದ ಎಂದು ತಿಳಿದುಬಂದಿದೆ.
ಬೀಳಗಿ ತಾಲೂಕಿನ ಹಿರೇಸಂಶಿ ಮೂಲದ ಮಾಯವ್ವಳನ್ನು ಬಾದಾಮಿ ತಾಲೂಕಿನ ಹಾಗನೂರ ಗ್ರಾಮಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಗಂಡ ಶಿವಪ್ಪ 10 ಲಕ್ಕಕ್ಕಿಂತಲೂ ಹೆಚ್ಚು ಸಾಲ ಮಾಡಿಕೊಂಡಿದ್ದ. ಇಲ್ಲದ ಚಟಗಳನ್ನು ಅಂಟಿಸಿಕೊಂಡಿದ್ದ. ಸಾಲ ತೀರಿಸಲು ಹಣ ಕೊಡುವಂತೆ ಪದೇಪದೆ ಜಗಳ ಮಾಡುತ್ತಿದ್ದ.
ತನ್ನ ಬಳಿ ಇಲ್ಲ ಎಂದಾಗ ತವರು ಮನೆಯ ಪಾಲಿನ ಆಸ್ತಿಯನ್ನು ಮಾರಾಟ ಮಾಡಿ ಹಣ ಕೊಡು ಎನ್ನುತ್ತಿದ್ದ. ಆತನ ಕಾಟ ತಾಳಲಾಗದೆ ಮಾಯವ್ವ ಇತ್ತೀಚೆಗೆ ತವರು ಮನೆಗೆ ಬಂದು ನೆಲೆಸಿದ್ದಳು. ತೋಟದ ಮನೆಯಲ್ಲಿ ವಾಸವಾಗಿದ್ದಳು.
ಗುರುವಾರ ರಾತ್ರಿ ಶಿವಪ್ಪ ಹೆಂಡತಿಯನ್ನು ಹುಡುಕಿಕೊಂಡು ಆ ಮನೆಗೆ ಬಂದಿದ್ದ. ರಾತ್ರಿ ತೋಟದ ಮನೆಯಲ್ಲೇ ಮಲಗಿದ್ದ ಶಿವಪ್ಪ ಬೆಳಗಿನ ಜಾವ ಕೊಲೆಗೈದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : Murder Case: ವೃದ್ಧೆಯನ್ನೂ ಬಿಡದ ಕಾಮ ಪಿಶಾಚಿ; ಕಲ್ಲು ಎತ್ತಿ ಹಾಕಿ ಕೊಂದು ಅತ್ಯಾಚಾರ: ಪಾಪಿ ಸೆರೆ