Site icon Vistara News

Mandya News: ಕಾವೇರಿ ನದಿ ನೀರಿನಲ್ಲಿ ಮುಳುಗಿ ಇಬ್ಬರು ಯುವಕರ ಸಾವು

Two youths drown in Cauvery river

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಪ್ರವಾಸಿತಾಣ ಬಲಮುರಿ ಬಳಿಯ ಕಾವೇರಿ ನದಿ ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ. ಮೈಸೂರು ಮೂಲದ ಧನರಾಜ್ (21) ಹಾಗೂ ಪ್ರಸನ್ನ (33) ಮೃತ ಯುವಕರು. ಪ್ರವಾಸಕ್ಕೆಂದು ಬಂದು ನದಿಯಲ್ಲಿ ಈಜಲು ಹೋಗಿದ್ದಾಗ ದುರ್ಘಟನೆ ನಡೆದಿದೆ. ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ (Mandya News) ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದು 15 ಕುರಿ ಸಾವು

ವಿಜಯಪುರ: ಸಿಡಿಲು ಬಡಿದು 15 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಕ್ರಾಸ್ ಬಳಿ ನಡೆದಿದೆ. ತಳೇವಾಡ ಗ್ರಾಮದ ಚಂದ್ರಶೇಖರ ಮುಕನ್ನನವರ ಎಂಬುವವರ ಕುರಿಗಳು ಮೃತಪಟ್ಟಿದ್ದು, ಈ ವೇಳೆ ಕುರಿ ಮಾಲೀಕ ಚಂದ್ರಶೇಖರಗೂ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುರಿಗಳು ಮೃತಪಟ್ಟಿದ್ದರಿಂದ ಸುಮಾರು 2 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ದಾಯಾದಿಗಳ ನಡುವೆ ಗಲಾಟೆ; 4ಕ್ಕೂ ಹೆಚ್ಚು ಮಂದಿಗೆ ಗಾಯ

ಚಿಕ್ಕಬಳ್ಳಾಪುರ: ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಗಲಾಟೆಯಲ್ಲಿ 4ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶಿಡ್ಲಘಟ್ಟ ತಾಲೂಕಿನ ಹಿರೇಬಲ್ಲ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಹಿಂದೆ ಮಾರಾಮಾರಿ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಮೀನು ಹಂಚಿಕೆ ವಿಚಾರದಲ್ಲಿ ಗಂಗರೆಡ್ಡಿ ಮತ್ತು ಪುಟ್ಟಪ್ಪ ಕುಟುಂಬಗಳ ನಡುವೆ 30 ವರ್ಷಗಳಿಂದ ಜಮೀನು ತಗಾದೆ ಇತ್ತು. ಆದರೆ, ಇತ್ತೀಚೆಗೆ ಬೋರ್ ವೆಲ್ ಹಾಕಲು ಗಂಗರೆಡ್ಡಿ ಕುಟುಂಬಸ್ಥರಾದ ಮುನೇಗೌಡ, ವೇಣುಗೋಪಾಲ್ ಮುಂದಾಗಿದ್ದಾರೆ. ಈ ವೇಳೆ ಪುಟ್ಟಪ್ಪನ ಮಕ್ಕಳಾದ ರಾಮಕೃಷ್ಣಪ್ಪ, ಮುನಿರಾಜು ಎಂಬುವರು ಹಲ್ಲೆ ನಡೆಸಿದ್ದು, ಈ ವೇಳೆ ನಾಲ್ಕಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಕ್ಕಳ‌ ಕಳ್ಳರೆಂದು ಭಾವಿಸಿ ಕಾರಿಗೆ ಬೆಂಕಿ ಹಚ್ಚಿದ ಜನ

ಬಾಗಲಕೋಟೆ: ಮಕ್ಕಳ‌ ಕಳ್ಳರೆಂದು ಭಾವಿಸಿ ಪ್ರಯಾಣಿಕರು ಸಾಗುತ್ತಿದ್ದ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ಖಜ್ಜಿಡೋಣಿ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಬಾಗಲಕೋಟೆ-ಬೆಳಗಾವಿ (Bagalkote News) ಹೆದ್ದಾರಿಯಲ್ಲಿ ಹುಬ್ಬಳ್ಳಿ ಪಾಸಿಂಗ್ ಕೆಎ 25 ಎಂಸಿ 2832 ಸಂಖ್ಯೆಯ ಕಾರಿಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಧಗ ಧಗ ಉರಿದು ಕಾರು ಕರಕಲಾಗಿದೆ.

ಚಿಕ್ಕೂರು ಗ್ರಾಮದಿಂದ ಮಕ್ಕಳ‌ ಕಳ್ಳರೆಂದು ಕಾರನ್ನು ಸ್ಥಳೀಯರು ಬೆನ್ನಟ್ಟಿದ್ದಾರೆ. ಇದರಿಂದ ಕಾರಿನಲ್ಲಿದ್ದವರು ಗಾಬರಿಯಾಗಿ ಖಜ್ಜಿಡೋಣಿ ಗ್ರಾಮದ ಕಡೆ ಬಂದಿದ್ದಾರೆ. ಅಲ್ಲಿ ಪ್ರಯಾಣಿಕರನ್ನು ತಡೆದಿರುವ ಸ್ಥಳೀಯರು ಕಾರನ್ನು ರಸ್ತೆ ಬದಿ ತಳ್ಳಿ ಬೆಂಕಿ ಹಚ್ಚಿದ್ದಾರೆ. ಲೋಕಾಪುರ ಠಾಣೆ ಪೊಲೀಸರು ಆಗಮಿಸಿ ಕಾರು ಪ್ರಯಾಣಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾರಿನಲ್ಲಿದ್ದವರು ಮಕ್ಕಳ ಕಳ್ಳರೋ ಅಥವಾ ಅಲ್ಲವೋ ಎಂಬುವುದು ಪೊಲೀಸ್ ತನಿಖೆ ಬಳಿಕ ತಿಳಿದುಬರಬೇಕಿದೆ.‌

Exit mobile version