Site icon Vistara News

ಕೊಳ್ಳೇಗಾಲ ಬಳಿ ದೇವಸ್ಥಾನಕ್ಕೆ ಬಂದಿದ್ದ ಇಬ್ಬರು ಯುವಕರು ನೀರುಪಾಲು, ಪ್ರಾಣ ಕಳೆದ ಚೆಕ್‌ಡ್ಯಾಂ ಆಕರ್ಷಣೆ

kollegala drowned

ಚಾಮರಾಜ ನಗರ: ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗಿದ್ದ ಯುವಕರಿಬ್ಬರು ಬಳಿಕ ಕಾಲುವೆಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ದೇವಸ್ಥಾನದಲ್ಲಿ ಪಂಕ್ತಿ ಸೇವೆಗೆ ಬಂದಿದ್ದ ಮಂಡ್ಯದ ಚಂದ್ರು (೧೯) ಮತ್ತು ಸುನಿಲ್‌ (೨೬) ಮೃತರು. ಇವರು ಮಂಡ್ಯದ ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಎಂಬ ಊರಿನವರು.

ಈ ದೇವಸ್ಥಾನದಲ್ಲಿ ಪಂಕ್ತಿ ಸೇವೆ ಜನಪ್ರಿಯವಾಗಿದ್ದು, ಅದನ್ನು ಸಲ್ಲಿಸಲೆಂದು ಕುಟುಂಬದ ಇತರ ಸದಸ್ಯರ ಜತೆಗೆ ಬಂದಿದ್ದರು. ಸುಮಾರು ೩೦ ಮಂದಿ ಈ ತಂಡದಲ್ಲಿದ್ದರು. ಬೆಳಗ್ಗೆ ಬಂದಿದ್ದ ತಂಡ ಪಂಕ್ತಿ ಸೇವೆಗೆ ಇನ್ನೂ ಸಮಯವಿದೆ ಎಂದು ತಿಳಿಯುತ್ತಲೇ ದೇವಸ್ಥಾನದ ಹೊರಗಡೆ ಹೋಗಿ ಬರೋಣ ಎಂದು ಹೊರಗೆ ಬಂದಿದೆ.

ಆಗ ಹೊಸಮಠದ ಮುಂಭಾಗದಲ್ಲಿರುವ ಚೆಕ್‌ ಡ್ಯಾಂ ಅವರನ್ನು ಸೆಳೆದಿದೆ. ಮಂಡ್ಯ ಭಾಗದವರಾಗಿರುವುದರಿಂದ ತಮಗೆ ಈಜು ಬರುತ್ತದೆ ಎಂಬ ಧೈರ್ಯದಲ್ಲಿ ಸುನಿಲ್‌ ಮತ್ತು ಚಂದ್ರು ನೀರಿಗೆ ಹಾರಿದ್ದಾರೆ. ಆದರೆ, ನೀರಿನ ಆಳ ತಿಳಿಯದ ಅವರು ನೀರಿನಲ್ಲಿ ಮುಳುಗೇ ಹೋಗಿದ್ದಾರೆ. ಕೂಡಲೇ ಅಕ್ಕಪಕ್ಕದವರು ಸೇರಿ ರಕ್ಷಣೆಗೆ ಪ್ರಯತ್ನಿಸಿದರೂ ಫಲ ನೀಡಿಲ್ಲ. ಕೊನೆಗೆ ಅವರಿಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ.

ದೇವರನ್ನು ನೋಡಲೆಂದು ಬಂದೆವು, ಪಂಕ್ತಿ ಸೇವೆಗೆ ಬಂದೆವು. ಆದರೆ, ದೇವರು ನಮ್ಮಿಬ್ಬರು ಮಕ್ಕಳನ್ನೇ ಕಿತ್ತುಕೊಂಡು ಬಿಟ್ಟ ಎಂಬ ಮನೆಯವರ ಅಳು ಮುಗಿಲು ಮುಟ್ಟಿತ್ತು. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ |Bhima river | ಪುಣ್ಯ ಸ್ನಾನ ಮಾಡಲು ಹೋದ ಯುವಕ ನೀರುಪಾಲು; ಶವವಾಗಿ ಪತ್ತೆ

Exit mobile version