Site icon Vistara News

U B Banakar | ಬಿಜೆಪಿಗೆ ಗುಡ್‌ಬೈ ಹೇಳಿದ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ ಬಣಕಾರ್‌, ಕಾಂಗ್ರೆಸ್‌ ಸೇರ್ಪಡೆ ಪಕ್ಕಾ

U Banakar

ಹಾವೇರಿ: ಬಿಜೆಪಿಯ ಹಿರಿಯ ನಾಯಕ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ್‌ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಸದ್ಯವೇ ಕಾಂಗ್ರೆಸ್‌ ಸೇರುವುದು ಬಹುತೇಕ ಖಚಿತವಾಗಿದೆ.

ಯು.ಬಿ. ಬಣಕಾರ್‌ ಅವರು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದಾರೆ. ಜತೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿದ್ದಾರೆ. ಅವರು ಈ ಎರಡೂ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಜತೆಗೆ ಬಿಜೆಪಿಯನ್ನು ಸಂಪೂರ್ಣವಾಗಿ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.

ಎರಡು ಬಾರಿ ಹಿರೇಕೆರೂರು ಕ್ಷೇತ್ರದ ಶಾಸಕರಾಗಿದ್ದವರು ಯು.ಬಿ.ಬಣಕಾರ್.​​ 1994 ಹಾಗೂ 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ೨೦೧೮ರ ಚುನಾವಣೆಯಲ್ಲಿ ಯು.ಬಿ. ಬಣಕಾರ್‌ ಅವರು ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಿ.ಸಿ. ಪಾಟೀಲ್‌ ಎದುರು ಸೋಲು ಕಂಡಿದ್ದರು. ಈ ನಡುವೆ ಸ್ವತಃ ಬಿ.ಸಿ. ಪಾಟೀಲ್‌ ಅವರೇ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದರು. ಉಪಚುನಾವಣೆಯಲ್ಲಿ ಅವರೇ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

ಈ ನಡುವೆ, ಬಿ.ಸಿ. ಪಾಟೀಲ್‌ ಅವರನ್ನು ಪಕ್ಷಕ್ಕೆ ಕರೆಸಿಕೊಂಡಿದ್ದು ಬಣಕಾರ್‌ ಅವರನ್ನು ಕೆರಳಿಸಿತ್ತು. ತಾಲೂಕಿನಲ್ಲಿ ಮತ್ತು ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅವರು ತೀವ್ರ ನೋವನ್ನೂ ತೋಡಿಕೊಂಡಿದ್ದರು. ಈ ನಡುವೆ, ಯು.ಬಿ. ಬಣಕಾರ್‌ ಅವರನ್ನು ಸಮಾಧಾನ ಮಾಡಲು ಅವರನ್ನು ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಯಿತು. ಜತೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ಮಾಡುವ ಮೂಲಕ ಬಿಜೆಪಿ ಅವರನ್ನು ಶಾಂತಗೊಳಿಸಿತ್ತು. ಆದರೆ, ಶಾಸಕರಾಗುವ ಪ್ರಯತ್ನಿಸುತ್ತಿರುವ ಯು.ಬಿ. ಬಣಕಾರ್‌ ಅವರಿಗೆ ಈ ಬಾರಿ ಬಿಜೆಪಿಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ ಎಂದು ಖಚಿತವಾಗುತ್ತಲೇ ಪಕ್ಷ ಬದಲಾಯಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ರಾಜಕೀಯ ಜೀವನಕ್ಕಾಗಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದೆ.

ಇದನ್ನೂ ಓದಿ | ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ: ಬಿಜೆಪಿ ಸೇರ್ಪಡೆ ಹಾದಿ ಸುಗಮ

Exit mobile version