Site icon Vistara News

ಸಿದ್ದು ವಿರುದ್ಧ ಪ್ರತಿಭಟನೆಗೆ ಖಂಡನೆ; ರಾಜ್ಯ ಸರ್ಕಾರದ ಪದಚ್ಯುತಿಗೆ ಶಾಸಕ ಯು.ಬಿ. ವೆಂಕಟೇಶ್ ಆಗ್ರಹ

ಶಾಸಕ ಯು.ಬಿ. ವೆಂಕಟೇಶ್

ಬೆಂಗಳೂರು: ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪ್ರತಿಭಟಿಸುತ್ತಿರುವ ರೀತಿ ಶಿಲಾಯುಗದ ಮನೋಧರ್ಮವನ್ನು ನೆನಪಿಸುವಂತಿದೆ. ಇದಕ್ಕೆ ಕುಮ್ಮಕ್ಕು ನೀಡುವ ರಾಜ್ಯ ಸರ್ಕಾರವನ್ನು ರಾಜ್ಯಪಾಲರು ಪದಚ್ಯುತಗೊಳಿಸಬೇಕು ಎಂದು ಕಾಂಗ್ರೆಸ್ ಶಾಸಕ ಯು.ಬಿ. ವೆಂಕಟೇಶ್ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜಕಾರಣ ಯಾವತ್ತಿಗೂ ವೈಚಾರಿಕತೆಯ ಲಕ್ಷ್ಮಣ ರೇಖೆಯನ್ನು ಮೀರಬಾರದು. ವೈಯಕ್ತಿಕ ತೆವಲುಗಳಿಗೆ ಇಲ್ಲಿ ಅವಕಾಶವೂ ಇರಬಾರದು. ಪ್ರವಾಹಪೀಡಿತ ಸಂತ್ರಸ್ತ ದುಃಖ, ದುಮ್ಮಾನಗಳನ್ನು ಆಲಿಸಲು ಕೊಡಗಿಗೆ ಸಿದ್ದರಾಮಯ್ಯ ಅವರು ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ವಿನಾಕಾರಣ ಅವರ ಕಾರಿನ ಮೇಲೆ ನುಗ್ಗಿ, ಮೊಟ್ಟೆ ಎಸೆದಿರುವ ರೀತಿ ರಾಕ್ಷಸ ಪ್ರವೃತ್ತಿಯನ್ನು ತೋರಿಸುತ್ತದೆ. ಈ ಬೆಳವಣಿಗೆ ನೋಡಿದರೆ ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕತೆ ಎಂಬ ಅನುಮಾನ ಕಾಡುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Congress Protest | ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ; ರಾಜ್ಯಾದ್ಯಂತ ಭುಗಿಲೆದ್ದ ಕೈ ಕಾರ್ಯಕರ್ತರ ಆಕ್ರೋಶ

ಇದರ ಜತೆಗೆ ಬಿಜೆಪಿ ಶಾಸಕರಾದ ರೇಣುಕಾಚಾರ್ಯ ಹಾಗೂ ಮತ್ತಿತರ ಮುಖಂಡರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ವಿವೇಚಿಸಿ ನೋಡಿದಾಗ ಸತ್ಯವನ್ನು ಮತ್ತು ಆಗಿರುವ ಪ್ರಮಾದವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬಿಜೆಪಿ ಅವರಿಗಿಲ್ಲ ಎಂಬುದು ಖಚಿತವಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷ್ಯಾಧಾರ ಇನ್ನೊಂದು ಬೇಕಿಲ್ಲ. ರಾಜ್ಯಾಂಗದ ರಕ್ಷಕರಾದ ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ಸರ್ಕಾರವನ್ನು ಉಚ್ಚಾಟಿಸುವುದೊಂದೇ ರಾಜಮಾರ್ಗ ಎಂದು ಆಗ್ರಹಿಸಿದ್ದಾರೆ.

ಶಾಸನಸಭೆಯ ಪ್ರತಿಪಕ್ಷದ ನಾಯಕರು ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿಗಳಷ್ಟೇ ಸರಿಸಮಾನರು. ಹೀಗಿದ್ದಾಗಲೂ ಪ್ರತಿಪಕ್ಷದ ನಾಯಕರಿಗೆ ಭದ್ರತೆಯನ್ನು ಒದಗಿಸುವಲ್ಲಿ ಲೋಪ ಜರುಗಿರುವುದು ಪಿತೂರಿಯೋ ಅಥವಾ ಕಿತಾಪತಿಯೋ? ಎಂಬುದು ಗೊತ್ತಾಗುತ್ತಿಲ್ಲ. ಪೊಲೀಸರ ವೈಫಲ್ಯವಂತೂ ಈ ಬೆಳವಣಿಗೆಯಲ್ಲಿ ಎದ್ದು ಕಾಣುವ ಸಂಗತಿ. ಪ್ರತಿಪಕ್ಷದ ಮುಖಂಡರ ಮೇಲೆ ಮೊಟ್ಟೆ ಎಸೆಯುವಂತಹ ಅಧಿಕಾರದ ಮದ ಬಿಜೆಪಿಯವರ ನೆತ್ತಿಗೇರಿರುವ ಎಲ್ಲಾ ಸಾಧ್ಯತೆಗಳು ಇರುವಾಗ ಬಡಪಾಯಿ ಜನರ ಗತಿ ಏನು? ಎಂಬುವುದನ್ನು ರಾಜ್ಯದ ಜನತೆ ತಿಳಿಯಬೇಕಿದೆ ಎಂದು ಎಚ್ಚರಿಸಿದ್ದಾರೆ.

ರಾಜಕಾರಣ ಯಾವತ್ತಿಗೂ ವೈಚಾರಿಕತೆಯ ಸಂಘರ್ಷದ ವೇದಿಕೆ ಆಗಬೇಕು. ಸ್ವಂತ ಅಹಮಿಕೆಗೆ ವೇದಿಕೆ ಆಗಬಾರದು. ಈಗಿನ ಪರಿಸ್ಥಿತಿ ನೋಡಿದರೆ ಅಧಿಕಾರದಲ್ಲಿ ಇರುವ ಬಿಜೆಪಿ ಮುಖಂಡರು ಸ್ವಂತ ಅಹಮಿಕೆಯನ್ನು ಪ್ರದರ್ಶನಕ್ಕೆ ಇಟ್ಟಂತೆ ಕಾಣುತ್ತಿದೆ. ಇಂತಹ ದುರ್ವರ್ತನೆಗೆ ಜನ ಪಾಠ ಕಲಿಸಲು ಕಾಲ ಸಮೀಪಿಸುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬುದ್ಧಿ ಕಲಿಯದ ಬಿಜೆಪಿಗೆ ಮತದಾರರು ಸರಿಯಾದ ರೀತಿಯಲ್ಲಿ ಬುದ್ಧಿ ಕಲಿಸಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಅನೇಕ ಬಿಜೆಪಿಯ ಹಿರಿಯ ಮುಖಂಡರು, ಮೊಟ್ಟೆ ಎಸೆಯುವ ಕ್ರಮ ಸರಿಯಲ್ಲ ಎಂದು ಹೇಳುವ ಮೂಲಕ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಅದೇ ಪಕ್ಷದ ಮಾಜಿ ಸ್ಪೀಕರ್ ಬೋಪಯ್ಯ, ಶಾಸಕ ಅಪ್ಪಚ್ಚು ರಂಜನ್ ಅವರು ಬಂಧಿತ ಆರೋಪಿಗಳಿಗೆ ಜಾಮೀನುಕೊಟ್ಟು ಬಿಡಿಸಿಕೊಂಡು ಬರುವ ಕ್ರಮ, “ನೀನು ಅತ್ತಂತೆ ಮಾಡು-ನಾನು ಸತ್ತಂತೆ ಆಡುತ್ತೇನೆ” ಎಂಬಂತಾಗಿದೆ ಎಂದು ಹಂಗಿಸಿದ್ದಾರೆ.

ಇದನ್ನೂ ಓದಿ | ಇನ್ನೂ ಹಲವು ವಿಚಾರಗಳಿಗೆ ಪಶ್ಚಾತ್ತಾಪಪಡುವ ದಿನಗಳು ಬರಲಿವೆ: ಸಿದ್ದರಾಮಯ್ಯಗೆ ಕುಟುಕಿದ ರಾಜೀವ್‌

Exit mobile version