ಶಶಿಧರ ಮೇಟಿ, ವಿಸ್ತಾರ ನ್ಯೂಸ್ ಬಳ್ಳಾರಿ
ದೇಶದ ಸಾಮಾನ್ಯ ನಾಗರಿಕರೂ ವಿಮಾನದಲ್ಲಿ ಹಾರಾಟ ಮಾಡಬೇಕು ಮತ್ತು ಸಣ್ಣ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಬೇಕು ಎಂಬ ಉದ್ದೇಶದಿಂದ ಆರಂಭವಾದ ಉಡಾನ್ ಯೋಜನೆ ಅಡಿಯಲ್ಲಿ ಗಣಿ ಜಿಲ್ಲೆ ವಿದ್ಯಾನಗರದಿಂದ ಬೆಂಗಳೂರು ಮತ್ತು ಹೈದರಾಬಾದ್‌ಗೆ ವಿಮಾನ ಸಂಚಾರ ಆರಂಭವಾಗಿತ್ತು. ಆದರೆ, ಇದು ಕಳೆದ ಮಾರ್ಚ್‌ನಿಂದ ಸಂಚಾರ ಸ್ಥಗಿತಗೊಳಿಸಿದೆ.
ಉಡಾನ್ ಯೋಜನೆ ಅಡಿಯಲ್ಲಿ ಈ ಭಾಗದಲ್ಲಿ ವಿಮಾನ ಹಾರಾಟಕ್ಕೆ ಗುತ್ತಿಗೆ ಪಡೆದಿರುವುದು ಟ್ರೂಜೆಟ್ ಕಂಪನಿ. ಅದು 2017ರ ಮಾರ್ಚ್‌ನಿಂದ ವಿದ್ಯಾನಗರದಿಂದ ಬೆಂಗಳೂರು ಹಾಗೂ ಹೈದರಾಬಾದ್‌ಗೆ ವಿಮಾನ ಹಾರಾಟವನ್ನು ಆರಂಭಿಸಿತ್ತು. ಆರಂಭದಲ್ಲಿ ವಾರದ ಏಳು ದಿನ ವಿಮಾನ ಹಾರುತ್ತಿತ್ತು. ನಂತರದಲ್ಲಿ ಅದು ಮೂರು ದಿನಕ್ಕೆ ಇಳಿಯಿತು. ಕಳೆದ ಐದು ತಿಂಗಳಿಂದ ಒಂದು ದಿನವೂ ಇಲ್ಲ!
ವಿಮಾನ ಹಾರಾಟ ಸ್ಥಗಿತಕ್ಕೆ ಕಾರಣ
ಈ ಭಾಗದಲ್ಲಿ ಗುತ್ತಿಗೆ ಪಡೆದಿರುವ ಟ್ರೂಜೆಟ್ ಕಂಪನಿಯು ಉಡಾನ್ ಯೋಜನೆ ಅಡಿಯಲ್ಲಿ ಹೈದರಾಬಾದ್, ಕಡಪಾ, ತಿರುಪತಿ, ಬೀದರ್, ಚೆನ್ನೈ, ಅಹಮದಾಬಾದ್, ಬೀದರ್, ಗೋವಾ, ರಾಜಮಂಡ್ರಿ ಸೇರಿದಂತೆ ಇತರ ನಗರಗಳಿಗೆ ವಿಮಾನ ಹಾರಾಟವನ್ನು ಗುತ್ತಿಗೆ ಪಡೆದಿತ್ತು. ಆದರೆ ಕಂಪನಿಯ ಕೆಲವೊಂದು ತಾಂತ್ರಿಕ ಕಾರಣದಿಂದಾಗಿ ಕೆಲವೊಂದು ವಿಮಾನ ಗ್ರೌಂಡ್ ಆಗಿರುವುದು, ಬಾಡಿಗೆ ಪಡೆದಿರುವ ವಿಮಾನಗಳ ಅವಧಿ ಮುಗಿದಿರುವುದು ಸೇರಿದಂತೆ ಕೆಲವೊಂದು ಕಾರಣದಿಂದಾಗಿ ಕೆಲವೊಂದು ವಿಮಾನಗಳ ಹಾರಾಟವನ್ನು ಕಂಪನಿ ಸ್ಥಗಿತಗೊಳಿಸಿದೆ, ಅದರಲ್ಲಿ ವಿದ್ಯಾನಗರದಿಂದ ಬೆಂಗಳೂರು, ಹೈದ್ರಾಬಾದ್ ವಿಮಾನವೂ ಸೇರಿದೆ ಎಂದು ಹೇಳಲಾಗುತ್ತಿದೆ.
ಬೇರೊಂದು ಕಂಪನಿಯಿಂದ ಗುತ್ತಿಗೆ ಸಾಧ್ಯತೆ
ಉಡಾನ್ ಯೋಜನೆ ಅಡಿಯಲ್ಲಿ ಐದು ವರ್ಷದ ಗುತ್ತಿಗೆ ಪದ್ಧತಿ ಇದ್ದು, ಅದು ಮುಗಿಯುವ ಹಂತಕ್ಕೆ ಬಂದಿರುವುದರಿಂದ ಬೇರೊಂದು ವಿಮಾನ ಕಂಪನಿಗಳು ಗುತ್ತಿಗೆ ಪಡೆಯಲು ಮುಂದಾಗಿವೆ. ಇಂಡಿಗೋ, ಫಯರ್ ಜೆಟ್ ಸೇರಿದಂತೆ ಇತರ ಕಂಪನಿಗಳು ಉಡಾನ್ ಯೋಜನೆ ಅಡಿಯಲ್ಲಿ ವಿಮಾನ ಹಾರಾಟಕ್ಕೆ ಗುತ್ತಿಗೆ ಪಡೆಯಲು ಮುಂದಾಗಿದ್ದು,ಈಗಾಗಲೇ ನಿಗದಿಪಡಿಸಿರುವ ರೂಟ್‌ಗಳಲ್ಲಿ ಉಡಾನ್ ಯೋಜನೆ ಅಡಿಯಲ್ಲಿ ವಿಮಾನ ಹಾರಾಟ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿಮಾನ ಹಾರಾಟಕ್ಕೆ ಉತ್ತಮ ಪ್ರತಿಕ್ರಿಯೆ ಇತ್ತು
ವಿದ್ಯಾನಗರದಿಂದ ಬೆಂಗಳೂರು, ಹೈದರಾಬಾದ್ ವಿಮಾನ ಹಾರಾಟಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಶೇ.80 ರಿಂದ 90ರಷ್ಟು ಸೀಟ್‌ಗಳು ಭರ್ತಿ ಆಗುತ್ತಿದ್ದವು. ಆದರೆ ವಿಮಾನ ಹಾರಾಟ ಸ್ಥಗಿತವಾಗಿರುವುದು ಈ ಭಾಗದ ಪ್ರಯಾಣಿಕರಿಗೆ ನಿರಾಸೆಯಾಗಿದೆ. ಕೆಲವೊಂದು ಪ್ರಯಾಣಿಕರು ವಾಸ್ತವತೆ ತಿಳಿಯದೆ ವಿದ್ಯಾನಗರದಲ್ಲಿರುವ ಜೆಎಸ್‌ಡಬ್ಲ್ಯು ಏರ್‌ಪೋರ್ಟ್‌ಗೆ ಹೋಗಿ ಮರಳಿ ಬರುತ್ತಿದ್ದಾರೆ. ಇನ್ನು ವಿದ್ಯಾನಗರದ ಏರ್ಪೋರ್ಟ್‌ನಲ್ಲಿ ರನ್‌ವೇಯನ್ನು 1.6 ಕಿ.ಮೀ. ನಿಂದ 2.0 ಕಿ.ಮೀ.ಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿರುವುದರಿಂದ ವಿಮಾನ ಹಾರಾಟಕ್ಕೆ ಹೊಸ ಕಂಪನಿಗೆ ಗುತ್ತಿಗೆ ಸಿಕ್ಕರೂ, ಇನ್ನು ಐದಾರು ತಿಂಗಳಲ್ಲಿ ಉಡಾನ್ ಅಡಿಯಲ್ಲಿ ವಿಮಾನ ಹಾರಾಟ ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.