Site icon Vistara News

Vistara News Polling Booth: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯೇ ದೊಡ್ಡಣ್ಣ!

Udupi-Chikkamagaluru constituency has the highest number of voters in favour of BJP.

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ (Vistara News) ಸೋಮವಾರ (ಮಾ.18) ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಡೆಸಿದ ಪೋಲಿಂಗ್‌ ಬೂತ್‌ ಸಮೀಕ್ಷೆಯಲ್ಲಿ (Vistara news polling booth) ಬಿಜೆಪಿ ಮೇಲುಗೈ ಸಾಧಿಸಿದೆ. ಕ್ಷೇತ್ರದಿಂದ ಸಾವಿರಾರು ಕರೆಗಳು ಬಂದಿದ್ದು, ಅವುಗಳಲ್ಲಿ ಒಟ್ಟು 5861 ಕರೆಗಳನ್ನು ಸ್ವೀಕಾರ ಮಾಡಲಾಗಿದೆ. ಇದರಲ್ಲಿ ಶೇ. 58ರಷ್ಟು ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದರೆ, ಶೇಕಡಾ 42ರಷ್ಟು ಜನರು ಕಾಂಗ್ರೆಸ್‌ ಪರ ಒಲವು ತೋರಿದ್ದಾರೆ.

ವಿಸ್ತಾರ ಪೋಲಿಂಗ್‌ ಬೂತ್‌ನಲ್ಲಿ ಸಂಗ್ರಹಿಸಿದ ಜನಾಭಿಪ್ರಾಯದ ಪ್ರಕಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಗೆ 3423 ಮತದಾರರು ಬೆಂಬಲ ನೀಡಿದ್ದು, ಕಾಂಗ್ರೆಸ್‌ ಪಕ್ಷಕ್ಕೆ 2438 ಮತಗಳು ಬಂದಿವೆ. ಹೀಗಾಗಿ ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿಗೆ ಜನ ಬೆಂಬಲ ವ್ಯಕ್ತವಾಗಿರುವುದು ಕಂಡು ಬಂದಿದೆ.

ಕರೆಗಳ ಶೇಕಡಾವಾರು ವಿವರ

ಒಟ್ಟು ಕರೆಗಳು: 5861
ಬಿಜೆಪಿ-3423 (ಶೇ.58)
ಕಾಂಗ್ರೆಸ್-2438 (ಶೇ.42)
ಇತರೆ: 00

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಣಕ್ಕಿಳಿಯುತ್ತಿದ್ದಾರೆ. ಜಯಪ್ರಕಾಶ್‌ ಹೆಗ್ಡೆ ಅವರು ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಸುಧೀರ್‌ ಕುಮಾರ್‌ ಮುರೊಳ್ಳಿ, ವಿನಯ್‌ ಕುಮಾರ್‌ ಸೊರಕೆ, ಡಾ. ಅಂಶುಮಂತ್ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಇದನ್ನೂ ಓದಿ | Vistara News Polling Booth: ತುಮಕೂರು ಕ್ಷೇತ್ರದಲ್ಲಿ ಮತ್ತೆ ಬಿಜೆಪಿಗೆ ಜೈ ಎಂದ ಮತದಾರರು!

ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಮತ್ತೊಮ್ಮೆ ಟಿಕೆಟ್‌ ಸಿಗಲಿದೆ ಎನ್ನಲಾಗುತ್ತಿತ್ತು. ಆದರೆ, ಅವರಿಗೆ ಟಿಕೆಟ್‌ ನೀಡೋದಕ್ಕೆ ಕಾರ್ಯಕರ್ತರು, ಮುಖಂಡರ ವಿರೋಧ ವ್ಯಕ್ತವಾಗಿತ್ತು. ಸ್ಥಳೀಯರಿಗೇ ಟಿಕೆಟ್‌ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದ್ದರಿಂದ ವಿಧಾನ ಪರಿಷತ್​ ವಿರೋಧ ಪಕ್ಷದ ನಾಯಕ, ಮಾಜಿ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಬಿಜೆಪಿ ಟಿಕೆಟ್‌ ದೊರಕಿದೆ. ಕ್ಷೇತ್ರದಲ್ಲಿ ಗೋ ಬ್ಯಾಕ್‌ ಶೋಭಾ ಅಭಿಯಾನ ಆರಂಭವಾಗಿದ್ದರಿಂದ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರು ಉತ್ತರಕ್ಕೆ ಶಿಫ್ಟ್‌ ಮಾಡಲಾಗಿದೆ.

ಕೋಟ ಶ್ರೀನಿವಾಸ ಪೂಜಾರಿ ಅವರು ಹಿಂದುಳಿದ ವರ್ಗಗಳ ಬಿಲ್ಲವ ಸಮುದಾಯದ ನಾಯಕರಾಗಿದ್ದು, ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬಿಜೆಪಿ ಮಣೆ ಹಾಕಿದೆ. ಜನರ ನಡುವಿನ ನಾಯಕ ಹಾಗೂ ಅತ್ಯಂತ ಸರಳ ವ್ಯಕ್ತಿತ್ವದ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್​ ನೀಡಿರುವುದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳ ಪಾಲಿಗೆ ಸಂತಸದ ಸಂಗತಿಯಾಗಿದೆ. ಇನ್ನು ಕಾಂಗ್ರೆಸ್‌ನ ಜಯಪ್ರಕಾಶ್‌ ಹೆಗ್ಡೆ ಅವರು ಬಂಟ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಅವರು ಒಂದು ರೀತಿಯಲ್ಲಿ ಪಕ್ಷಾತೀತ ನಾಯಕರಾಗಿದ್ದು, ಪಕ್ಷೇತರರಾಗಿಯೂ ಗೆಲ್ಲಬಲ್ಲ ತಾಕತ್ತನ್ನು ತೋರಿಸಿದವರು. ಜನತಾದಳ, ಕಾಂಗ್ರೆಸ್‌, ಬಿಜೆಪಿ ಎಲ್ಲ ಪಕ್ಷಗಳಲ್ಲೂ ಸೇವೆ ಸಲ್ಲಿಸಿದ್ದಾರೆ.

2009ರಲ್ಲಿ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ, 2014 ಹಾಗೂ 2019ರಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು ಗೆಲುವು ದಾಖಲಿಸಿದ್ದರು. ಇದೀಗ ಉಡುಪಿ-ಚಿಕ್ಕಮಗಳೂರು ಭವಿಷ್ಯದ ಸಂಸದ ಯಾರು ಎಂಬ ಬಗ್ಗೆ ವಿಸ್ತಾರ ಪೋಲಿಂಗ್‌ ಬೂತ್‌ ಸಮೀಕ್ಷೆ ಫಲಿತಾಂಶದಲ್ಲಿ ತಿಳಿದುಬಂದಿದ್ದು, ಮತ್ತೊಮ್ಮೆ ಕಮಲ ಅರಳಲಿದೆ ಎಂದು ಮತದಾರರು ತಿಳಿಸಿದ್ದಾರೆ.

ಪೋಲಿಂಗ್‌ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?

ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್‌ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್‌ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್‌ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.

ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್‌ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ | Vistara News Polling Booth: ಹಾವೇರಿ-ಗದಗ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಪಾರುಪತ್ಯ!

ಈಗಾಗಲೇ ಮಂಡ್ಯ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಸಮೀಕ್ಷೆ ಮುಕ್ತಾಯಗೊಂಡಿವೆ.

ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488

Exit mobile version