Site icon Vistara News

Udupi Gang War: ಉಡುಪಿ ಗ್ಯಾಂಗ್ ವಾರ್ ಪ್ರಕರಣ; ಮತ್ತೆ ಮೂವರು ಆರೋಪಿಗಳ ಬಂಧನ

Udupi Gang War

ಉಡುಪಿ: ನಗರದಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣದಲ್ಲಿ (Udupi Gang War) ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಪು ಮೂಲದ ಗರುಡ ಗ್ಯಾಂಗ್‌ನ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿತ್ತು. ಇದಕ್ಕೆ ಸಂಬಂಧಪಟ್ಟಂತೆ ಈ ಮೊದಲು ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಮೂವರನ್ನು ಸೆರೆ ಹಿಡಿಯಲಾಗಿದೆ.

ಗರುಡ ಗ್ಯಾಂಗ್‌ನ ಮಜೀದ್, ಅಲ್ಫಾಜ್, ಶರೀಫ್ ಬಂಧಿತರು. ಈ ಮೊದಲು ಆಶಿಕ್, ರಾಕೀಬ್, ಸಕ್ಲೈನ್ ಎಂಬುವವರನ್ನು ಬಂಧಿಸಲಾಗಿತ್ತು. ಘಟನೆಯ ಗಂಭೀರತೆ ಮತ್ತು ಸಾರ್ವಜನಿಕರ ಆಗ್ರಹದ ನಡುವೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮತ್ತೆ ಮೂವರನ್ನು ಬಂಧಿಸಿದ್ದಾರೆ. ಇದುವರೆಗೆ ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಬಂಧಿಸಿದಂತಾಗಿದೆ.

ಇದನ್ನೂ ಓದಿ | Road Accident : ಕಾರು ಡ್ರೈವಿಂಗ್‌ ಕಲಿಯುವಾಗ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಳು; ಡೆಡ್ಲಿ ಆಕ್ಸಿಡೆಂಟ್‌ಗೆ ಬಾಲಕಿ ಬಲಿ

ಏನಿದು ಪ್ರಕರಣ?

ಮೇ 18 ರಂದು ತಡರಾತ್ರಿ ಉಡುಪಿಯ ಶಾರದಾ ಕಲ್ಯಾಣ ಮಂಟಪಕ್ಕೆ ತೆರಳುವ ರಸ್ತೆಯ ಬಳಿ ನಡೆದಿದ್ದ ಗ್ಯಾಂಗ್ ವಾರ್ (Udupi Gang War) ನಗರವನ್ನು ಬೆಚ್ಚಿಬೀಳಿಸಿತ್ತು. ಎರಡು ಕಾರುಗಳಲ್ಲಿ ಬಂದ ಯುವಕರ ನಡುವೆ ನಡುರಸ್ತೆಯಲ್ಲಿ ಮಾರಾಮಾರಿ ನಡೆದಿತ್ತು. ಎರಡು ತಂಡಗಳ 6 ಯುವಕರು ಪರಸ್ಪರ ಕಾರುಗಳಿಂದ ಡಿಕ್ಕಿ ಹೊಡೆದುಕೊಂಡು, ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿಕೊಂಡ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿಯತ್ತು.

ಎರಡು ಕಾರುಗಳಲ್ಲಿ ಬಂದ ಯುವಕರ ನಡುವೆ ನಡುರಸ್ತೆಯಲ್ಲಿ ಮಾರಾಮಾರಿ ನಡೆದಿತ್ತು. ಒಂದು ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು, ಅಡ್ಡ ಬಂದ ತಂಡದ ಒಬ್ಬ ಸದಸ್ಯನಿಗೂ ಕಾರು ಗುದ್ದಿತ್ತು. ಕಾಪು ಮೂಲದ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿತ್ತು. ಯುವಕರ ಮಾರಾಮಾರಿಯನ್ನು ಹತ್ತಿರದ ಕಟ್ಟಡ ಮೇಲಿಂದ ಸ್ಥಳೀಯರು ವಿಡಿಯೊ ಚಿತ್ರೀಕರಣ ಮಾಡಿದ್ದರು.

ಲಾಕಪ್‌ ಡೆತ್‌ ಕೇಸ್; ಸಹಜ‌ ಸ್ಥಿತಿಯತ್ತ ಚನ್ನಗಿರಿ ಪಟ್ಟಣ

ದಾವಣಗೆರೆ: ಯುವಕನ ಲಾಕಪ್‌ ಡೆತ್‌ ಪ್ರಕರಣದಿಂದ ಉದ್ವಿಗ್ನಗೊಂಡಿದ್ದ ಜಿಲ್ಲೆಯ ಚನ್ನಗಿರಿ ಪಟ್ಟಣ ಸಹಜ‌ ಸ್ಥಿತಿಯತ್ತ ಮರಳುತ್ತಿದೆ. ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದ್ದರಿಂದ ಆಯ ಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಕಲ್ಲು ತೂರಾಟ ಮಾಡಿದ ಹಿನ್ನೆಲೆಯಲ್ಲಿ ನೆನ್ನೆ ರಾತ್ರಿಯೇ ಹತ್ತು ಜನರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಪೊಲೀಸ್ ವಶದಲ್ಲಿದ್ದ ಆದಿಲ್ (32) ಎಂಬ ವ್ಯಕ್ತಿ ಸಾವಿಗೀಡಾದ ಹಿನ್ನೆಲೆಯಲ್ಲಿ ಲಾಕಪ್ ಡೆತ್ ಆರೋಪ ಕೇಳಿಬಂದಿತ್ತು. ಇದರಿಂದ ರೊಚ್ಚಿಗೆದ್ದ ಕೆಲ ಕಿಡಿಗೇಡಿಗಳು ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ವೇಳೆ ಐದು ಪೊಲೀಸ್ ವಾಹನ‌‌ ಜಖಂಗೊಂಡು, ಹನ್ನೊಂದು ಪೊಲೀಸರಿಗೆ ಗಾಯಗಳಾಗಿದ್ದವು. 200ಕ್ಕೂ ಹೆಚ್ಚು ಜನರಿಂದ ಏಕಕಾಲಕ್ಕೆ ದಾಳಿಯಾದ ಹಿನ್ನೆಲೆ ಚನ್ನಗಿರಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು.

ಈಗ ಶವ ಪರೀಕ್ಷೆ ವರದಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದಿಲ್‌ ಪೊಲೀಸ್ ಠಾಣೆಯಲ್ಲಿದ್ದದ್ದು ಕೇವಲ‌ ಏಳು ನಿಮಿಷ. ಈ ವೇಳೆ ಕಡಿಮೆ ರಕ್ತದೊತ್ತಡದಿಂದ ಹೃದಯಾಘಾತವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇಂದು ವೈದ್ಯರು ಪ್ರಾಥಮಿಕ ವರದಿ ನೀಡುವ ಸಾಧ್ಯತೆ ಇದೆ.

Exit mobile version