Site icon Vistara News

Udupi Toilet Case : ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್‌ ; ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ

Shankuntala S

ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ (Udupi Nethrajyothi College) ನಡೆದ ಮೊಬೈಲ್‌ ಚಿತ್ರೀಕರಣ ಪ್ರಕರಣಕ್ಕೆ (Udupi Toilet case) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತೆ (BJP activist) ಶಕುಂತಲಾ ಎಸ್‌ (Shakunthala S) ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ತುಮಕೂರು ಮೂಲದ ಶಕುಂತಲಾ ಅವರನ್ನು ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ (High grounds Police station) ಕರೆದುಕೊಂಡು ಬರಲಾಗಿದೆ. ಈ ಪೋಸ್ಟ್‌ಗೆ ಸಂಬಂಧಿಸಿ ಅವರ ವಿವರಣೆ ಕೇಳಲು ಕರೆದುಕೊಂಡು ಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೆ ಶಕುಂತಲಾ ಅವರನ್ನು ಬಂಧಿಸಿಲ್ಲ.

ಶಕುಂತಲಾ ಅವರು ಏನು ಹೇಳಿದ್ದರು?

ಬಿಜೆಪಿ ಕಾರ್ಯಕರ್ತೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಶಕುಂತಲಾ ಅವರು, ಉಡುಪಿ ಕಾಲೇಜಿನಲ್ಲಿ ನಡೆದ ಘಟನೆಯ ಬಗ್ಗೆ ಕಾಂಗ್ರೆಸ್‌ ಆಡಿದ ಮಾತನ್ನು ಪ್ರಶ್ನಿಸಿ ತೀವ್ರವಾದ ಪ್ರಶ್ನೆಯನ್ನು ಕೇಳಿದ್ದರು.

ಕಾಂಗ್ರೆಸ್‌ ಹೇಳಿದ್ದೇನು?

ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ವಿಡಿಯೊ ಚಿತ್ರೀಕರಣ ಎಂದು ನಕಲಿ ಸುದ್ದಿ ಸೃಷ್ಟಿಸಿ ಕೋಮು ಪ್ರಚೋದನೆಗೆ ಮುಂದಾಗಿರುವ ಬಿಜೆಪಿ ತೀರ್ಥಹಳ್ಳಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೊ ಚಿತ್ರೀಕರಿಸಿದ ಎಬಿವಿಪಿ ಅಧ್ಯಕ್ಷನ ಅಸಲಿ ಸುದ್ದಿಯ ಬಗ್ಗೆ ಮೌನ ಮುರಿಯುವುದು ಯಾವಾಗ?

ಇದಕ್ಕೆ ಶಕುಂತಲಾ ಅವರು ಮರು ಪ್ರಶ್ನೆ ಹಾಕಿದ್ದು ಹೀಗೆ..

ಮುಸ್ಲಿಂ ಯುವತಿಯರು ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೊ ಮಾಡಿದ್ದು ಕಾಂಗ್ರೆಸ್‌ನವರ ಪ್ರಕಾರ ಮಕ್ಕಳಾಟವಂತೆ. ಸಿದ್ದರಾಮಯ್ಯನವರ ಸೊಸೆ ಅಥವಾ ಹೆಂಡ್ತಿ ಅವ್ರ ವಿಡಿಯೊವನ್ನು ಇದೇ ತರ ಮಾಡಿದರೆ ಮಕ್ಕಳಾಟ ಅಂತ ಒಪ್ಪಿಕೊಳ್ಳುತ್ತೀರಾ?

ಮುಖ್ಯಮಂತ್ರಿ, ಅವರ ಪತ್ನಿ ಮತ್ತು ಸೊಸೆಯ ವಿಚಾರದಲ್ಲಿ ಅವಹೇಳನಕಾರಿಯಾಗಿ ಟ್ವೀಟ್ ಮಾಡಿರುವ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ದೂರಿನ ಆಧಾರದಲ್ಲಿ ಶಕುಂತಲಾ ಅವರಿಗೆ ನೋಟಿಸ್‌ ನೀಡಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡು ಶಕುಂತಲಾ ಅವರನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ಶಕುಂತಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜತೆ

ಬಿಜೆಪಿ ನಾಯಕರು ಕೆಂಡಾಮಂಡಲ

ಸೋಷಿಯಲ್‌ ಮೀಡಿಯಾದಲ್ಲಿ ಬಿಜೆಪಿ ಪರವಾಗಿ ಆಕ್ಟಿವ್‌ ಆಗಿರುವವರ ವಿರುದ್ಧ ಕಾಂಗ್ರೆಸ್‌ ದ್ವೇಷ ಸಾಧನೆ ಮಾಡುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ʻʻಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದಕ್ಕೂ ಕೇಸ್ ಹಾಕುತ್ತಿದ್ದೀರಾ? ನೀವು ನಮ್ಮ ವಿರುದ್ಧ ಎಷ್ಟು ಟ್ರೋಲ್ ಮಾಡಿದ್ದೀರಾ? ಆದರೆ ನಾವು ಈ ರೀತಿ ಕ್ರಮಕ್ಕೆ ಮುಂದಾಗಲಿಲ್ಲ. ಉಡುಪಿ ಪ್ರಕರಣವನ್ನು ಒಂದು ಸಣ್ಣ ಘಟನೆ ಎನ್ನುತ್ತೀರಾ? ಇದು ಸಣ್ಣ ಘಟನೆಯಾದರೆ, ದೊಡ್ಡ ಘಟನೆ ಯಾವುದು ಹೇಳಿ? ಆಗ ಯಾವುದಕ್ಕೆ ಹೋರಾಟ ಮಾಡಬೇಕು ನಿರ್ಧರಿಸುತ್ತೇವೆʼʼ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ ಮಾಡಿದ್ದಾರೆ.

ʻʻಉಡುಪಿ ಕಾಲೇಜಿನ ಶೌಚಾಲಯದಲ್ಲಿ‌ ವಿಡಿಯೋ ಮಾಡಿದ ಘಟನೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಆದರೆ ಮೂವರನ್ನು ಇನ್ನೂ ಬಂಧನ ಮಾಡಿಲ್ಲ. ಸಾಮಾನ್ಯವಾಗಿ ಶೌಚಾಲಯ, ಬೆಡ್‌ರೂಂನಲ್ಲಿ‌ ಯಾರೂ ವಿಡಿಯೋ ಮಾಡುವುದಿಲ್ಲ. ಆದರೆ ಉಡುಪಿಯಲ್ಲಿ ಈ ರೀತಿ ನಡೆದಿರುವುದು ಅಸಮಂಜಸ. ಅದನ್ನು ಸಮರ್ಥನೆ ಮಾಡುವ ಕಾಂಗ್ರೆಸ್‌, ಸರ್ಕಾರವನ್ನು ಪ್ರಶ್ನೆ ಮಾಡಿದ್ದ ತುಮಕೂರಿನ ಕಾರ್ಯಕರ್ತೆಯನ್ನು ಬಂಧಿಸಿದ್ದಾರೆ. ರಶ್ಮಿ‌ ಸಾಮಂತ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇಷ್ಟು ತುಷ್ಟೀಕರಣ ಮಾಡುವುದು ಸರಿಯೇ?ʼʼ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.

ʻʻಬಿಜೆಪಿ ಕಾರ್ಯಕರ್ತರಿಗೆ ಸರ್ಕಾರದಿಂದ ಬೆದರಿಕೆ ಹಾಕಲಾಗುತ್ತಿದೆ. ಪೊಲೀಸ್ ಇಲಾಖೆ, ಕಾನೂನು ಕೇವಲ ಬಿಜೆಪಿ ಕಾರ್ಯಕರ್ತರ ಬಂಧನಕ್ಕೆ ಇದೆಯೇ ದ್ವೇಷದ ರಾಜಕಾರಣ ಮಾಡುವುದು ಸಮಾಜಕ್ಕೆ ಒಳ್ಳೆಯದಲ್ಲʼʼ ಎಂದು ನಾಯಕರು ಹೇಳಿದ್ದಾರೆ.

ಶಕುಂತಲಾ ಅವರ ವಿಚಾರಣೆ ಸದ್ಯ ಹೈಗ್ರೌಂಡ್‌ ಪೊಲೀಸ್‌ ಠಾಣೆಯಲ್ಲಿ ನಡೆಯುತ್ತಿದ್ದು, ಒಂದೊಮ್ಮೆ ಅವರನ್ನು ಬಂಧಿಸಿದರೆ ಜಾಮೀನು ಕೊಡಿಸುವ ಪ್ರಯತ್ನಗಳು ಬಿಜೆಪಿ ವಲಯದಲ್ಲಿ ನಡೆಯುತ್ತಿವೆ.

ಇದನ್ನೂ ಓದಿ: Udupi Toilet case : ಉಡುಪಿ ಟಾಯ್ಲೆಟ್‌ ವಿಡಿಯೊ ಪ್ರಕರಣ; ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ನಿರೀಕ್ಷಣಾ ಜಾಮೀನು

Exit mobile version