Site icon Vistara News

Udupi Toilet Case : ಖುಷ್ಬೂ ಉಡುಪಿ ಭೇಟಿಯಿಂದ ಬಿಜೆಪಿಗೆ ಇರಸುಮುರಸು; ಬೈಯೋ ಹಾಗಿಲ್ಲ, ಒಪ್ಪೋ ಹಾಗೂ ಇಲ್ಲ!

Kushbu Sundar BL Santosh

ಬೆಂಗಳೂರು: ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್‌ ಕಾಲೇಜಿನಲ್ಲಿ (Udupi Nethrajyoti Paramedical college) ಮೂವರು ಮುಸ್ಲಿಂ ವಿದ್ಯಾರ್ಥಿನಿಯರು (Three Muslim students) ಹಿಂದು ಹುಡುಗಿಯೊಬ್ಬಳ (Hindu girl student) ಟಾಯ್ಲೆಟ್‌ ಬಳಕೆಯ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ (Udupi Toilet Case) ವಿದ್ಯಮಾನದಲ್ಲಿ ಬಿಜೆಪಿ ನಡೆಸುತ್ತಿರುವ ಹೋರಾಟಕ್ಕೆ ಅದರ ನಾಯಕಿಯೇ ಮಗ್ಗುಲಮುಳ್ಳಾಗಿದ್ದಾರೆ. ತಮಿಳುನಾಡು‌ ಬಿಜೆಪಿ ನಾಯಕಿಯೂ ಆಗಿರುವ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ (National Womans commission) ಖುಷ್ಬೂ ಸುಂದರ್ (Khushboo Sundar) ಆಗಮಿಸಿದ್ದು ಮತ್ತು ಅವರು ನೀಡಿರುವ ಹೇಳಿಕೆ ಬಿಜೆಪಿಗೆ (BJP Karnataka) ಇರಸುಮುರಸು ಉಂಟುಮಾಡಿದೆ. ಉಡುಪಿ ಕ್ಯಾಮೆರಾ ಪ್ರಕರಣದಲ್ಲಿ ತಮ್ಮ ಹೋರಾಟಕ್ಕೆ ಬಲ ಬರುತ್ತದೆ ಎಂದು ತಿಳಿದಿದ್ದ ಬಿಜೆಪಿಗೆ ಇದು ಆಘಾತ ನೀಡಿದೆ.

ಉಡುಪಿ ಕ್ಯಾಮೆರಾ ಪ್ರಕರಣದ ವಿಚಾರದಲ್ಲಿ ದೊಡ್ಡ ಹೋರಾಟಕ್ಕೆ ಬಿಜೆಪಿ ಅಣಿಯಾಗಿದೆ. ಅದರ ಭಾಗವಾಗಿ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿದೆ. ಇದರ ನಡುವೆ ಕಳೆದ ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೂ ಆಗಿರುವ ಬಿಜೆಪಿ ನಾಯಕಿ ಕಾಲೇಜಿಗೆ ಬಂದು ಪರಿಶೀಲನೆ ಮತ್ತು ಸಭೆ ನಡೆಸಿದ್ದರು. ಸುಮಾರು ಐದು ಗಂಟೆಗಳ ಕಾಲ ಸಂತ್ರಸ್ತ ವಿದ್ಯಾರ್ಥಿನಿ, ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸ್‌ ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಕೊನೆಗೆ ಹೊರಡುವ ಹೊತ್ತಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಖುಷ್ಬೂ ಅವರು, ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇರಲಿಲ್ಲ, ಇದು ಸುಳ್ಳು ಸುದ್ದಿ, ಜತೆಗೆ ಇಲ್ಲಿನದು ಎಂಬ ಹೆಸರಿನಲ್ಲಿ ಹಂಚಲಾಗುತ್ತಿರುವ ಎಲ್ಲ ವಿಡಿಯೊಗಳು ನಕಲಿ ಎಂದು ಹೇಳಿದ್ದರು. ಜತೆಗೆ ಇದೊಂದು ಹೆಣ್ಮಕ್ಕಳ ವಿಷಯ. ಹೀಗಾಗಿ ಪ್ರಕರಣಕ್ಕೆ ಕೋಮು ಬಣ್ಣ ಬಳಿಯಬಾರದು ಎಂದಿದ್ದರು. ಈ ಹೇಳಿಕೆಗಳಿಂದ ಬಿಜೆಪಿಯಲ್ಲಿ ಗಲಿಬಿಲಿ ಉಂಟಾಗಿದೆ.

ನಿಜವೆಂದರೆ, ಖುಷ್ಬೂ ಸುಂದರ್‌ ಆಗಮನದಿಂದ ತಮ್ಮ ಹೋರಾಟಕ್ಕೆ ಬಲ ಬರುತ್ತದೆ ಎಂಬ ನಿರೀಕ್ಷೆ ಬಿಜೆಪಿಯಲ್ಲಿತ್ತು. ಆದರೆ, ಖುಷ್ಬೂ ಹೋರಾಟದ ದಿಕ್ಕನ್ನೇ ಬದಲಿಸಿದ್ದಾರೆ. ಹಿಡನ್ ಕ್ಯಾಮೆರಾ ಬಗ್ಗೆ ಎಲ್ಲಿಯೂ ಬಿಜೆಪಿ ಮಾತನ್ನೇ ಆಡಿರಲಿಲ್ಲ. ಆದರೆ ಹಿಡನ್ ಕ್ಯಾಮೆರಾ ಇರಲಿಲ್ಲ ಎಂದು ಖುಷ್ಬೂ ಹೇಳಿದ್ದೇಕೆ? ಅವರನ್ನು ದಾರಿತಪ್ಪಿಸಿದ್ದು ಯಾರು? ಎಂಬ ಚರ್ಚೆ ಬಿಜೆಪಿಯಲ್ಲಿ ನಡೆದಿದೆ. ಹಿಡನ್ ಕ್ಯಾಮೆರಾ ಇಲ್ಲ ಎಂದಿದ್ದನ್ನು, ಪ್ರಕರಣವೇ ನಡೆದಿಲ್ಲ ಎನ್ನುವಂತೆ ಕಾಂಗ್ರೆಸ್ ಬಿಂಬಿಸುತ್ತಿದೆ. ಈ ಬಗ್ಗೆ ಪಕ್ಷದಲ್ಲಿ ಭಾರೀ‌ ಅಸಮಾಧಾನ ಉಂಟಾಗಿದೆ. ಕೇಂದ್ರದ ನಾಯಕರಿಗೂ ರಾಜ್ಯ ನಾಯಕರು ದೂರು ನೀಡಿದ್ದಾರೆ.

ಗುರುರಾಜ್‌ ಗಂಟಿಹೊಳೆ ಅಸಮಾಧಾನ

ಸ್ಥಳೀಯ ‌ವಿಚಾರ ತಿಳಿಯದೇ ಬಂದು ಮಾತಾಡುವುದರಿಂದ ತನಿಖೆ ದಾರಿ ತಪ್ಪುತ್ತದೆ. ಇಂತಹ ತರಾತುರಿಯಲ್ಲಿ ಮಾತಾಡುವುದು ಬೇಡ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಈ ಬಗ್ಗೆ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಹಿಡನ್ ಕ್ಯಾಮೆರಾ ಇತ್ತು ಎಂದು ನಾವೆಲ್ಲೂ ಹೇಳಿಯೇ ಇರಲಿಲ್ಲ. ಇದು ಪ್ರಕರಣವನ್ನು ದಾರಿತಪ್ಪಿಸಲು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ತಪ್ಪು ಎಂದಿದ್ದಾರೆ.
ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಸಹಿತ ಅಸಮಾಧಾನ ಹೊರಹಾಕಿದ್ದಾರೆ. ವಿಡಿಯೋ ಮಾಡಿದ ಹುಡುಗಿಯರೇ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಇದಕ್ಕಿಂತ ದೊಡ್ಡ ಸಾಕ್ಷಿ ಇನ್ನೇನು‌ ಬೇಕು? ಇವರಿಗೆ ಏನಾದರೂ‌ ಬುದ್ಧಿ ಇದೆಯ? ಎಂದಿದ್ದಾರೆ.

ಇದನ್ನೂ ಓದಿ: Udupi Toilet Case : ಮಕ್ಕಳಾಟ ಪರಮೇಶ್ವರ್‌ ಮಗಂದು; ಉಡುಪಿ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಯಶ್ಪಾಲ್‌ ಸುವರ್ಣ ಆಕ್ರೋಶ

ತಪ್ಪು ತಿದ್ದಿಕೊಳ್ಳಲು ಮುಂದಾದ ಖುಷ್ಬೂ

ತಮ್ಮ ಹೇಳಿಕೆ ಪ್ರಕರಣದ ದಿಕ್ಕು ತಪ್ಪಿಸುತ್ತಿದೆ ಎಂದು ಅರಿತ ಖುಷ್ಬೂ ಈಗ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಇದು ಹಿಡನ್ ಕ್ಯಾಮೆರಾ ಪ್ರಕರಣ ಅಲ್ಲ, ಮೊಬೈಲ್‌ ಕ್ಯಾಮರಾದಲ್ಲಿ ವಿಡಿಯೋ ಮಾಡಿದ್ದರ ಕುರಿತು ಎಂದು ಟ್ವೀಟ್ ಮಾಡಿದ್ದಾರೆ.

ತನಿಖೆಗೆ ಖುಷ್ಬೂ‌ ಬರುವವರೆಗೂ ಅಲ್ಲಿ ಕ್ಯಾಮೆರಾ ಬಿಟ್ಟಿರುತ್ತಾರ? ಎಂಬ ಬಿಜೆಪಿ‌ ರಾಷ್ಟ್ರೀಯ ‌ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ‌ಸಂತೋಷ್ ಅವರ ಟ್ವೀಟನ್ನು ರಿಟ್ವೀಟ್ ಸಹ ಮಾಡಿದ್ದಾರೆ. ತಮ್ಮ ಹೇಳಿಕೆಯಿಂದ ಯಡವಟ್ಟು ಆಗಿದೆ ಎಂದು ತಿಳಿದು ಈಗ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

Exit mobile version