Site icon Vistara News

Udupi Toilet Case : ಮಕ್ಕಳಾಟ ಪರಮೇಶ್ವರ್‌ ಮಗಂದು; ಉಡುಪಿ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಯಶ್ಪಾಲ್‌ ಸುವರ್ಣ ಆಕ್ರೋಶ

Yashpal suvarna statement

ಉಡುಪಿ: ಇಲ್ಲಿನ ನೇತ್ರಜ್ಯೋತಿ ಪ್ಯಾರಾಮೆಡಿಕಲ್‌ ಕಾಲೇಜಿನಲ್ಲಿ (Nethrajyothi Paramedical College) ನಡೆದ ಘಟನೆಯನ್ನು ಮಕ್ಕಳಾಟ ಎಂದು ನಿರ್ಲಕ್ಷ್ಯದಿಂದ ಪ್ರತಿಕ್ರಿಯಿಸಿದ ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್‌ (G Parameshwar) ವಿರುದ್ಧ ಉಡುಪಿ ಬಿಜೆಪಿ ಶಾಸಕ ಯಶ್‌ಪಾಲ್‌ ಸುವರ್ಣ (Udupi MLA Yashpal Suvarna) ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳಾಟ ಉಡುಪಿಯಲ್ಲಿ ನಡೆದಿದ್ದಲ್ಲ, ಪರಮೇಶ್ವರ್‌ ಮಗಂದು (Son of Parameshwar) ಎಂದಿದ್ದಾರೆ.

ಉಡುಪಿ ಕಾಲೇಜಿನಲ್ಲಿ ನಡೆದ ವಿದ್ಯಮಾನದ ಸಂಪೂರ್ಣ ತನಿಖೆಗೆ ಆಗ್ರಹಿಸಿದ ಬಿಜೆಪಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನಾ ಮೆರವಣಿಗೆಯ (BJP Protest in Udupi) ಸಂದರ್ಭದಲ್ಲಿ ಅವರು ಮಾತನಾಡಿದರು.

ಕಡಿಯಾಳಿ ಬಿಜೆಪಿ ಕಚೇರಿಯಿಂದ ಆರಂಭವಾದ ಪಾದಯಾತ್ರೆ ಉಡುಪಿ ಎಸ್‌ಪಿ ಕಚೇರಿಯವರೆಗೆ ನಡೆದಿದ್ದು, ಸಾವಿರಾರು ಮಂದಿ ಇದರಲ್ಲಿ ಭಾಗವಹಿಸಿದ್ದರು. ಶಾಸಕರಾದ ಯಶ್ ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕೊಡ್ಗಿ ಮತ್ತು ಗುರುರಾಜ್‌ ಗಂಟಿಹೊಳೆ ಅವರು ಎಸ್‌ಪಿ ಕಚೇರಿಯ ಎದುರು ನಡೆದ ಹಕ್ಕೊತ್ತಾಯ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು.

ಉಡುಪಿಯ ಈ ಪ್ರಕರಣ ಅತ್ಯಂತ ಗಂಭೀರವಾಗಿದೆ. ಇದರ ಬಗ್ಗೆ ಲಘುವಾಗಿ ಮಾತನಾಡಬಾರದು. ಈ ಪ್ರಕರಣವನ್ನು ಗೃಹ ಸಚಿವ ಜಿ. ಪರಮೇಶ್ವರ್ ಮಕ್ಕಳಾಟ ಅಂತಾ ಹೇಳಿದರು. ಇದು ಮಕ್ಕಳಾಟವಲ್ಲ. ಮಕ್ಕಳಾಟ ಯಾವುದು ಅಂದರೆ ಅವರ ಮಗ ಲಿಂಗ ಬದಲಾಯಿಸಿರುವುದು ಮಕ್ಕಳಾಟ ಎಂದು ಯಶ್‌ಪಾಲ್‌ ಸುವರ್ಣ ಹೇಳಿದರು. ಸಚಿವ ಜಿ. ಪರಮೇಶ್ವರ್‌ ಅವರ ಪುತ್ರ ಲಿಂಗ ಪರಿವರ್ತನೆ ಮಾಡಿಕೊಂಡು ಹೆಣ್ಣಾಗಿದ್ದಾರೆ.

ʻʻಶೌಚಾಲಯದಲ್ಲಿ ಕ್ಯಾಮೆರಾ ಇಟ್ಟವರು ನಾಳೆ ಬಾಂಬ್ ಇಡುವುದಕ್ಕೂ ಹಿಂಜರಿಯುವುದಿಲ್ಲʼʼ ಎಂದು ಹೇಳಿದ ಅವರು, ಮೊಬೈಲ್ ವಿಡಿಯೋ ಮಾಡಿದರಿಗೆ ಸಹಕಾರ ನೀಡಿದವರ ತನಿಖೆ ಆಗಬೇಕು ಎಂದರು.

ʻʻಪಿಎಫ್ಐ ಬ್ಯಾನ್ ಆಗಿದ್ದ ಸಂದರ್ಭದಲ್ಲಿ ಕೆಲವರ ತನಿಖೆಯಾಗಿಲ್ಲ. ಅವರು ಈ ಪ್ರಕರಣದಲ್ಲಿ ಸಹಕಾರ ನೀಡುತ್ತಿದ್ದಾರೆ. ಅವರ ಮೇಲೆಯೂ ಪೊಲೀಸ್ ತನಿಖೆ ಆಗಬೇಕುʼʼ ಎಂದು ಯಶ್‌ಪಾಲ್‌ ಸುವರ್ಣ ಹೇಳಿದರು.

ಖುಷ್ಬೂ ಅಕ್ಕನಿಗೆ ಸ್ವಲ್ಪ ಗಡಿಬಿಡಿಯಾಗಿದೆ ಎಂದ ಗುರುರಾಜ್‌ ಗಂಟಿಹೊಳೆ

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ಖುಷ್ಬೂ ಸುಂದರ್‌ ಅವರಿಗೆ ಸ್ವಲ್ಪ ಗಡಿಬಿಡಿಯಾಗಿದೆ. ಅವರು ಟಾಯ್ಲೆಟ್‌ನಲ್ಲಿ ಹಿಡನ್‌ ಕ್ಯಾಮೆರಾ ಇಟ್ಟಿರಲಿಲ್ಲ ಎಂದು ಹೇಳಿದ್ದಾರೆ. ನಾವೂ ಹಿಡನ್ ಕ್ಯಾಮೆರಾ ಇತ್ತು ಅಂತಾ ಹೇಳಿಲ್ಲ. ಅವರಿಗೆ ಮಾಹಿತಿ ನೀಡಿದವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ʻʻಹಿಂದೂ ಸಂಘಟನೆಗಳು 25 ವರ್ಷಗಳಿಂದ ಜಿಹಾದಿ ನೆಟ್ ವರ್ಕ್ ಬಗ್ಗೆ ಹೇಳುತ್ತಿವೆ. ಈಗ ನಾವು ಹೇಳಿದ ಮಾತುಗಳೆಲ್ಲಾ ನಿಜವಾಗಿದೆʼʼ ಎಂದು ಹೇಳಿದ ಅವರು, ಉಡುಪಿ ಮೊಬೈಲ್ ಚಿತ್ರೀಕರಣ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಬೇಕು. ಎನ್ಐಎ ಈ ಪ್ರಕರಣದ ಸತ್ಯ ಬಯಲಿಗೆಳೆಯಲಿದೆʼʼ ಎಂದು ಹೇಳಿದರು.

ಇದನ್ನೂ ಓದಿ : Udupi Toilet Case : ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್‌ ; ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ

Exit mobile version