ಉಡುಪಿ: ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ (Udupi Nethrajyoti Paramedical college) ನಡೆದ ವಿಡಿಯೊ ಚಿತ್ರೀಕರಣ (Udupi Toilet Case) ವಿವಾದದ ಲಾಭ ಪಡೆಯಲು ಮುಂದಾಗಿದ್ದ ಬಿಜೆಪಿಗೆ ಅದರದ್ದೇ ನಾಯಕಿ ಖುಷ್ಬೂ ಸುಂದರ್ (Khusboo sundar) ಮಗ್ಗುಲಮುಳ್ಳಾಗಿದ್ದಾರೆ. ಈಗ ಈ ಮುಳ್ಳನ್ನು ನಿವಾರಿಸುವ ಶತಪ್ರಯತ್ನದಲ್ಲಿರುವ ಬಿಜೆಪಿ ಈಗ ಕಾಂಗ್ರೆಸ್‌ನ ಹಿರಿಯ ನಾಯಕರ ಸಂಬಂಧಿಯೊಬ್ಬರ ಮೇಲೆ ದೋಷಾರೋಪ ಮಾಡಿದೆ.
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ (National womens Commission) ಖುಷ್ಬೂ ಸುಂದರ್ ಅವರು ನೇತ್ರಜ್ಯೋತಿ ಕಾಲೇಜಿನಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ್ದರು. ಪೊಲೀಸರು, ಕಾಲೇಜಿನ ಆಡಳಿತ ಮಂಡಳಿ ಮತ್ತು ಸಂತ್ರಸ್ತ ವಿದ್ಯಾರ್ಥಿನಿಯನ್ನು ಮಾತನಾಡಿಸಿದ್ದರು. ಇದರ ಆಧಾರದಲ್ಲಿ ಅವರು ಕಾಲೇಜಿನ ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇಟ್ಟಿಲ್ಲ, ಯಾವುದೇ ವಿಡಿಯೊವನ್ನು ಹಂಚಿಕೊಳ್ಳಲಾಗಿಲ್ಲ ಎಂದು ಹೇಳಿದ್ದರು. ಇದು ಕಾಲೇಜಿನಲ್ಲಿ ನಡೆದ ವಿದ್ಯಮಾನದ ವಿಡಿಯೋಗಳನ್ನು ಈ ವಿದ್ಯಾರ್ಥಿನಿಯರು ಜಿಹಾದಿ ತಂಡಗಳಿಗೆ ಕಳುಹಿಸಿದ್ದಾರೆ, ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಕಾಲೇಜಿಗೆ ಸಂಬಂಧಿಸಿದ ಯಾವುದಾದರೂ ವಿಡಿಯೊ ಹರಿದಾಡುತ್ತಿರುವ ಬಗ್ಗೆ ಮಾಹಿತಿ ಇದ್ದರೆ ಕೊಡಿ ಎಂದು ಪೊಲೀಸ್ ಇಲಾಖೆಯೇ ಕೇಳಿದೆ. ಆದರೆ, ಇದುವರೆಗೆ ಯಾರೂ ಕೊಟ್ಟಿಲ್ಲ.
ಈ ನಡುವೆ ಖುಷ್ಬೂ ಅವರನ್ನು ಯಾರೋ ದಾರಿ ತಪ್ಪಿಸಿದ್ದಾರೆ ಎಂದು ಆರಂಭದಿಂದಲೇ ಹೇಳುತ್ತಿರುವ ಬಿಜೆಪಿ ಈಗ ಖುಷ್ಬೂ ಕಾಲೇಜು ಭೇಟಿಯ ವೇಳೆ ಜೊತೆಗಿದ್ದ ಮಹಿಳೆಯ ಬಗ್ಗೆ ಆಕ್ಷೇಪ ತೆಗೆದಿದೆ.
ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಆಸ್ಕರ್ ಫೆರ್ನಾಂಡಿಸ್ ನಿಕಟ ಬಂದು ಮೇರಿ ಶ್ರೇಷ್ಠ ಅವರು ಸಂತ್ರಸ್ತೆಯ ಹೇಳಿಕೆ ಪಡೆಯುವ ವೇಳೆ ಜೊತೆಗಿದ್ದರು ಎನ್ನುವುದು ಬಿಜೆಪಿ ಆರೋಪ. ಉಡುಪಿಯ ಹಿರಿಯ ವಕೀಲೆಯಾಗಿರುವ ಮೇರಿ ಶ್ರೇಷ್ಠ ಅವರು ಹಾಜರಿದ್ದ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಇತ್ತೀಚೆಗೆ ನಡೆದ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್ ಅವರು ಈ ಆಕ್ಷೇಪ ವ್ಯಕ್ತಪಡಿಸಿದ್ದರು. ʻʻಖುಷ್ಬು ಜೊತೆ ಮೇರಿ ಶ್ರೇಷ್ಠ ಹೋಗಿದ್ಯಾಕೆ? ವಿಚಾರಣೆ ವೇಳೆ ಗಂಟೆಗಟ್ಟಲೆ ಖುಷ್ಬೂ ಜೊತೆ ಹಾಜರಿದ್ದರು. ಈ ಪ್ರಕರಣದಲ್ಲಿ ಅವರ ಪಾತ್ರ ಏನು? ಆರೋಪಿತ ಮಕ್ಕಳಿಗೆ ಆಶ್ರಯ ಕೊಡಲು ಪ್ರಯತ್ನ ಮಾಡುತ್ತಿದ್ದಾರೋ? ಇದರ ಹಿಂದೆ ಏನಾದರೂ ಸಂಚು ಇದೆಯಾ? ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರಾ? ಇದು ಇದು ಕೂಡಾ ತನಿಖೆಯಲ್ಲಿ ತಿಳಿಯಬೇಕಾಗಿದೆʼʼ ಎಂದು ಗಂಭೀರ ಆರೋಪ ಮಾಡಿದ್ದಾರೆ ಕುಯಿಲಾಡಿ ಸುರೇಶ್ ನಾಯಕ್.
ಬಿಜೆಪಿ ಆರೋಪಕ್ಕೆ ಮಹಿಳಾ ಕಾಂಗ್ರೆಸ್ ಉತ್ತರ
ಮೇರಿ ಶ್ರೇಷ್ಠ ಅವರು ಹೋಗಿದ್ದೇಕೆ ಎಂಬ ಬಿಜೆಪಿ ನಾಯಕರ ಪ್ರಶ್ನೆಗೆ ಉಡುಪಿಯ ಮಹಿಳಾ ಕಾಂಗ್ರೆಸ್ ಉತ್ತರ ಕೊಟ್ಟಿದೆ. ʻʻಖುಷ್ಬು ಜೊತೆಗೆ ಇದ್ದ ಮೇರಿ ಶ್ರೇಷ್ಠ ಅವರು ತನಿಖೆಯಲ್ಲಿ ಪಾಲ್ಗೊಂಡಿದ್ದರು. ಅವರಾಗಿಯೇ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ. ಮೇರಿ ಶ್ರೇಷ್ಠ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ. ಅವರು ಪಕ್ಷಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಜನರಿಗೆ ನ್ಯಾಯ ಒದಗಿಸುವಲ್ಲಿ ಸತತ ಕಾರ್ಯ ಮಾಡುತ್ತಿದ್ದಾರೆ. ಹಾಜರಾಗಬೇಕೆಂಬ ನೋಟಿಸ್ ಬಂದ ಹಿನ್ನೆಲೆಯಲ್ಲಿ ಹೋಗಿದ್ದಾರೆʼʼ ಎಂದು ಹೇಳಿದ್ದಾರೆ.
ʻʻಖುಷ್ಬೂ ಸುಂದರ್ ಅವರ ಜೊತೆಗೆ ಸುಳ್ಯದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಕೂಡಾ ಬಂದಿದ್ದರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಬರುವಾಗ ಬಿಜೆಪಿ ಪಕ್ಷದ ಶಾಸಕಿಯನ್ನು ಕರೆದುಕೊಂಡು ಬರಬೇಕೆಂದೇನೂ ಇಲ್ಲ!ʼʼ ಎಂದು ಮಹಿಳಾ ಕಾಂಗ್ರೆಸ್ ಹೇಳಿದೆ.
ʻʻಖುಷ್ಬೂ ಅವರ ಹೇಳಿಕೆಯಿಂದ ಬಿಜೆಪಿಗೆ ಚಿಂತೆಯಾಗಿದೆ. ಚಿಂತೆ ಹೆಚ್ಚಾಗಿ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆʼʼ ಎಂದು ಕಾಂಗ್ರೆಸ್ ನಾಯಕಿ ಡಾ. ಸುನಿತಾ ಶೆಟ್ಟಿ ಹೇಳಿದ್ದಾರೆ.