ಮಂಗಳೂರು/ ಉಡುಪಿ: ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ (Nethrajyothi Paramedical College) ನಡೆದ ವಿಡಿಯೊ ಚಿತ್ರೀಕರಣ (Udupi Toilet Case) ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡದಿಂದ (Special Investigation team -SIT) ತನಿಖೆ ಮಾಡಿಸುವ ಅಗತ್ಯ ಈಗ ಕಂಡುಬರುತ್ತಿಲ್ಲ. ಸದ್ಯಕ್ಕೆ ಡಿವೈಎಸ್‌ಪಿ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಅದರ ವರದಿ ಬಂದ ಮೇಲೆ ಪರಿಶೀಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಮಂಗಳವಾರ ಒಂದು ದಿನದ ಪ್ರವಾಸಕ್ಕಾಗಿ ಸಿಎಂ ಉಡುಪಿಗೆ ಆಗಮಿಸಿದ್ದಾರೆ. ಉಡುಪಿಗೆ ಬರುವ ದಾರಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವರು ಮಾತನಾಡಿ, ʻʻಉಡುಪಿ ಕೇಸ್‌ನಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್ಐಆರ್ ಮಾಡಿದ್ದಾರೆ, ಡಿವೈಎಸ್ಪಿ ಅವರ ನೇತೃತ್ವದಲ್ಲಿ ತನಿಖೆ ಆಗುತ್ತಿದೆ. ಅದು ಮೊದಲು ನಡೆಯಲಿದೆ. ರಾಷ್ಟ್ರೀಯ ಮಹಿಳಾ ಆಯೋಗವೇ ಅಲ್ಲಿ ಕ್ಯಾಮರಾ ಇಟ್ಟಿರಲಿಲ್ಲ ಎಂದಿದೆ. ಅವರ ತನಿಖಾ ವರದಿಯೂ ಬರಲಿ. ಆಮೇಲೆ ಈ ಬಗ್ಗೆ ಮಾತಾಡೋಣʼʼ ಎಂದು ಸಿದ್ದರಾಮಯ್ಯ ಹೇಳಿದರು.
ʻʻಕಾಲೇಜ್‌ನಲ್ಲಿ ವಿದ್ಯಾರ್ಥಿಗಳು ತಮಾಷೆ ಮಾಡಿರಬಹುದು ಅಂತ ಹೋಂ ಮಿನಿಸ್ಟರ್ ಜಿ. ಪರಮೇಶ್ವರ್ ಅವರು ಹೇಳಿರಬಹುದು. ಈಗ ಅದೆಲ್ಲದರ ಬಗ್ಗೆ ತನಿಖೆ ಆಗುತ್ತಿದೆ. ಎಫ್‌ಐಆರ್ ಆಗಿದೆ. ಡಿವೈಎಸ್ಪಿ ಮಟ್ಟದ ತನಿಖೆ ಆಗುತ್ತಿರುವಾಗ ಎಸ್ ಐಟಿ ಪ್ರಶ್ನೆ ಉದ್ಭವಿಸುವುದಿಲ್ಲʼʼ ಎಂದು ಸಿದ್ದರಾಮಯ್ಯ ಹೇಳಿದರು.
ಉಡುಪಿ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ
ʻʻನೈತಿಕ ಪೊಲೀಸ್ ಗಿರಿ ಯಾರೇ ಮಾಡಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ನಾನು ಪೊಲೀಸರಿಗೆ ಹೇಳಿದ್ದೇನೆ. ಕಾನೂನು ಕೈಗೆತ್ತಿಕೊಳ್ಳಲು ಇಲ್ಲಿ ಯಾರಿಗೂ ಅವಕಾಶ ಇಲ್ಲ. ಪೊಲೀಸರು ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದಿದ್ದೇನೆʼʼ ಎಂದು ಹೇಳಿದರು ಸಿದ್ದರಾಮಯ್ಯ.
ಸೌಜನ್ಯಾ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಯುವುದೇ?
12 ವರ್ಷದ ಹಿಂದೆ ಧರ್ಮಸ್ಥಳದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣದಲ್ಲಿ ಸಿಬಿಐ ಆರೋಪಿತ ಸಂತೋಷ್ ರಾವ್‌ನನ್ನು ದೋಷಮುಕ್ತ ಮಾಡಿದೆ. ಇದರ ಬಗ್ಗೆ ಮರು ತನಿಖೆ ಮಾಡಬೇಕು ಎಂದು ಸೌಜನ್ಯ ಪೋಷಕರು ಮನವಿ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ʻʻಸೌಜನ್ಯ ಕೇಸನ್ನು ಸಿಬಿಐಗೆ ವಹಿಸಲಾಗಿತ್ತು. ಈಗ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಸೌಜನ್ಯ ಪೋಷಕರು ಮರು ತನಿಖೆಗೆ ಮನವಿ ಮಾಡಿದ್ದಾರೆ. ಕಾನೂನು ಪ್ರಕಾರ ಏನಾಗಬೇಕು ಅಂತ ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ʻʻನಾನು ಲಾಯರ್ ಆಗಿ ಹೇಳೋದಾದ್ರೆ ಇದರ ಬಗ್ಗೆ ಹೈಕೋರ್ಟ್ ಗೆ ಅಪೀಲ್ ಹೋಗಬೇಕು. ನಾನು ಸಿಬಿಐ ಕೋರ್ಟ್ ಜಡ್ಜ್ ಮೆಂಟ್ ನೋಡಿಲ್ಲ. ಅದರ ಜಡ್ಜ್ ಮೆಂಟ್ ಓದಿ ನೋಡ್ತೇನೆ, ಅಪೀಲ್‌ಗೆ ಅವಕಾಶ ಇದೆಯಾ ಎಂದು ಗಮನಿಸುತ್ತೇನೆ. ಅವರ ಪೋಷಕರು ಜಡ್ಜ್ ಮೆಂಟ್ ಕಾಪಿ ತಂದು ಕೊಟ್ಟಿದ್ದಾರೆʼʼ ಎಂದು ಹೇಳಿದರು ಸಿದ್ದರಾಮಯ್ಯ.
ನಿಮ್ಮ ಫ್ಯಾಮಿಲಿ ಬಗ್ಗೆ ಯಾರಾದರೂ ಏನಾದರೂ ಹೇಳಬಹುದಾ?
ಬಿಜೆಪಿಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಶಕುಂತಲಾ ಅವರನ್ನು ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕಾರಣಕ್ಕೆ ಬಂಧಿಸಿ ವಿಚಾರಣೆ ನಡೆಸಿದ ಪ್ರಕರಣವನ್ನು ಉಲ್ಲೇಖಿಸಿದಾಗ ಸಿದ್ದರಾಮಯ್ಯ ಅವರು ʻʻನಿಮ್ಮ ಫ್ಯಾಮಿಲಿ ಬಗ್ಗೆ ಯಾರಾದ್ರೂ ಏನಾದ್ರೂ ಹೇಳಬಹುದಾʼ ಎಂದು ಮರುಪ್ರಶ್ನಿಸಿದರು.
ʻʻಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ನಾವು ಟೀಕೆ ಮಾಡಿದರೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿಲ್ಲ. ಸುಳ್ಳು ಸುದ್ದಿಗೆ ಕ್ರಮ ಎಂದು ಸ್ಪಷ್ಟವಾಗಿ ಹೇಳಲಾಗಿದೆʼʼ ಎಂದು ಹೇಳಿದ ಸಿದ್ದರಾಮಯ್ಯ, ʻʻಫ್ಯಾಮಿಲಿ ಬಗ್ಗೆ ಮಾತನಾಡುವುದು ಟೀಕೇನಾ? ಯಾರು ಏನು ಬೇಕಾದರೂ ಹೇಳಬಹುದಾ? ನಿಮ್ಮ ಫ್ಯಾಮಿಲಿ ಬಗ್ಗೆ ಯಾರಾದ್ರೂ ಏನು ಬೇಕಾದರೂ ಹೇಳಬಹುದು. ಟೀಕೆ ಬೇರೆ, ಸುಳ್ಳು ಸುದ್ದಿ ಹಬ್ಬಿಸೋದು ಬೇರೆ. ವೈಯಕ್ತಿಕವಾಗಿ ತೇಜೋವಧೆ ಮಾಡೋದು ಕೂಡ ಬೇರೆʼʼ ಎಂದು ವಿಶ್ಲೇಷಿಸಿದರು.
ʻʻಬಿಟ್ ಕಾಯಿನ್ ವಿಚಾರದಲ್ಲಿ ಎಸ್ ಐಟಿ ತನಿಖೆ ಆಗುತ್ತಿದೆ. ತನಿಖಾ ತಂಡಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆʼʼ ಎಂದು ಹೇಳಿದರು.
ಉಡುಪಿಯಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮ ಏನೇನು?
ಉಡುಪಿ ಜಿಲ್ಲೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಬೆಳಗ್ಗೆ 11.30ರ ಹೊತ್ತಿಗೆ ಪಡುಬಿದ್ರಿ ಸಮುದ್ರ ತೀರದಲ್ಲಿ ಇತ್ತೀಚೆಗೆ ಚಂಡಮಾರುತ ಪ್ರಭಾವದಿಂದ ಆಗಿರುವ ಹಾನಿಗಳ ವೀಕ್ಷಣೆ ಮಾಡಿದರು. ಚಂಡಮಾರುತದಿಂದಾಗಿ ಪಡುಬಿದ್ರಿ ಬೀಚ್‌ನ ಹೆಚ್ಚಿನ ಭಾಗ ಕೊಚ್ಚಿ ಹೋಗಿದೆ. ವಾಚ್ ಟವರ್, ಇಂಟರ್ ಲಾಕ್, ತೆಂಗಿನ ಕಟ್ಟೆಗಳು ಸಮುದ್ರ ಪಾಲಾಗಿವೆ. ಈ ಬಗ್ಗೆ ಸಿದ್ದರಾಮಯ್ಯ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ
ಮಧ್ಯಾಹ್ನದ ಉಡುಪಿಯ ಮಣಿಪಾಲದಲ್ಲಿರುವ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿರುವ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಪ್ರಗತಿ ಪರಿಶೀಲನ ಸಭೆಯಲ್ಲಿ ಉಡುಪಿಯ ಐದು ಬಿಜೆಪಿ ಶಾಸಕರು ಭಾಗಿಯಾಗಲಿದ್ದು, ಇಲ್ಲಿ ಮಳೆ ಹಾನಿ ಜತೆಗೆ ಉಡುಪಿ ವಿಡಿಯೊ ಪ್ರಕರಣ ಕೂಡಾ ಚರ್ಚೆಯಾಗುವ ಸಾಧ್ಯತೆ ಇದೆ.
ಮಂಗಳೂರು/ ಉಡುಪಿ: ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ (Nethrajyothi Paramedical College) ನಡೆದ ವಿಡಿಯೊ ಚಿತ್ರೀಕರಣ (Udupi Toilet Case) ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡದಿಂದ (Special Investigation team -SIT) ತನಿಖೆ ಮಾಡಿಸುವ ಅಗತ್ಯ ಈಗ ಕಂಡುಬರುತ್ತಿಲ್ಲ. ಸದ್ಯಕ್ಕೆ ಡಿವೈಎಸ್‌ಪಿ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಅದರ ವರದಿ ಬಂದ ಮೇಲೆ ಪರಿಶೀಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.