Site icon Vistara News

Udupi Toilet Case : ಟಾಯ್ಲೆಟ್‌ನಲ್ಲಿ ಹಿಡನ್‌ ಕ್ಯಾಮೆರಾ ಇರಲಿಲ್ಲ, ಹರಿದಾಡುತ್ತಿರುವ ವಿಡಿಯೊ ಫೇಕ್‌ ; ಖುಷ್ಬೂ Report

Khusboo sundar

ಉಡುಪಿ: ಇಲ್ಲಿನ ನೇತ್ರಜ್ಯೋತಿ ಪ್ಯಾರಾಮೆಡಿಕಲ್‌ ಕಾಲೇಜಿನ (Nethrajyothi Paramedical college) ಟಾಯ್ಲೆಟ್‌ನಲ್ಲಿ ಮೊಬೈಲ್‌ ಬಳಸಿ (Udupi Toilet Case) ವಿಡಿಯೊ ಚಿತ್ರೀಕರಣ ಮಾಡಲಾಗಿದೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗದ (National womans Commission) ಸದಸ್ಯೆ ಖುಷ್ಬೂ ಸುಂದರ್‌ (Khushboo Sundar) ನಡೆಸಿದ ವಿಚಾರಣೆಯ ಮೊದಲ ವರದಿ ಹೊರಬಿದ್ದಿದೆ. ಈ ಪ್ರಾಥಮಿಕ ವರದಿಯ ಪ್ರಕಾರ, ಕಾಲೇಜಿನ ಟಾಯ್ಲೆಟ್‌ನಲ್ಲಿ ಹಿಡನ್‌ ಕ್ಯಾಮೆರಾ (No hidden Camera in Toilet) ಇಡಲಾಗಿರಲಿಲ್ಲ ಮತ್ತು ಕಾಲೇಜಿನ ವಿಡಿಯೊ ಎಂಬ ಹೆಸರಿನಲ್ಲಿ ಹರಿಬಿಡಲಾಗಿರುವ ವಿಡಿಯೊಗಳು (Fake Videos) ಯಾವುದೂ ನಿಜವಲ್ಲ. ಎಲ್ಲವೂ ಫೇಕ್‌.

ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಸೇರಿ ಹಿಂದು ವಿದ್ಯಾರ್ಥಿನಿಯೊಬ್ಬಳು ಟಾಯ್ಲೆಟ್‌ ಬಳಸುವ ದೃಶ್ಯವನ್ನು ಸೆರೆ ಹಿಡಿದು ವೈರಲ್‌ ಮಾಡಲಾಗಿದೆ ಎಂಬ ಆರೋಪ ಈಗ ಭುಗಿಲೆದ್ದಿದೆ. ಕೆಲವು ದಿನಗಳ ಹಿಂದೆ ನಡೆದಿದ್ದ ಈ ಘಟನೆಯನ್ನು ಕಾಲೇಜಿನ ಹಂತದಲ್ಲಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗಿತ್ತು. ಕಾಲೇಜಿಗೆ ಮೊಬೈಲ್‌ ತಂದು ಕುಕೃತ್ಯ ನಡೆಸಿದ ಮೂವರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿತ್ತು. ಮೊಬೈಲ್‌ನಲ್ಲಿ ಯಾವುದೇ ವಿಡಿಯೊ ಇರಲಿಲ್ಲ. ಯಾರಿಗೂ ಇದನ್ನು ಹಂಚಲಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದ ಪೊಲೀಸರು ಈ ಪ್ರಕರಣವನ್ನು ಬಹುತೇಕ ಮುಕ್ತಾಯಗೊಳಿಸಿದ್ದರು.

ಇದರ ನಡುವೆ, ರಶ್ಮಿ ಸಾಮಂತ್‌ ಎನ್ನುವ ಉಡುಪಿ ಮೂಲದ ಯುವತಿ, ಉಡುಪಿಯಲ್ಲಿ ಇಷ್ಟೊಂದು ದೊಡ್ಡ ವಿದ್ಯಮಾನ ನಡೆದಿದ್ದರೂ ಯಾರೂ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಪಾದಿಸಿ ಟ್ವೀಟ್‌ ಮಾಡಿದ್ದರು. ಈ ನಡುವೆ ಉಡುಪಿ ಪೊಲೀಸರು ಅವರ ಮನೆಗೆ ಹೋಗಿ ವಿಚಾರಣೆ ನಡೆಸಿದ್ದರು. ಇದು ದೊಡ್ಡ ಮಟ್ಟದ ಸುದ್ದಿಗೆ ಕಾರಣವಾಗಿ ಪ್ರಕರಣ ಮರುಜೀವ ಪಡೆದುಕೊಂಡಿತ್ತು. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಇದರ ನಡುವೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ಮಾಜಿ ಚಿತ್ರನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ ಅವರು ಉಡುಪಿಗೆ ಭೇಟಿ ನೀಡಿ ಕಾಲೇಜಿನಲ್ಲಿ ಆಡಳಿತ ಮಂಡಳಿ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯನ್ನು ಮಾತನಾಡಿಸಿದ್ದಾರೆ. ಮೊದಲ ಹಂತದ ಮಾಹಿತಿಯನ್ನು ಪಡೆದ ಖುಷ್ಬೂ ಸುಂದರ್‌ ಅವರು ಮಾಧ್ಯಮಗಳ ಜತೆ ಮಾತನಾಡಿದ್ದಾರೆ.

ʻʻಉಡುಪಿ ಈ ವಿವಾದಿತ ಕಾಲೇಜಿನ ಶೌಚಾಲಯದಲ್ಲಿ ಯಾವುದೇ ಹಿಡನ್ ಕ್ಯಾಮೆರಾ ಇರಲಿಲ್ಲ. ಈ ರೀತಿಯ ವದಂತಿಗಳನ್ನು ಯಾರು ಹರಡಬಾರದುʼʼ ಎಂದು ಕಾಲೇಜಿನ ಭೇಟಿಯ ಬಳಿಕ ಖುಷ್ಬೂ ಸುಂದರ್‌ ಹೇಳಿದರು.

ʻʻಇನ್ನೂ ನಮ್ಮ ವಿಚಾರಣೆ ಮುಗಿದಿಲ್ಲ. ಇದು ಆರಂಭ ಮಾತ್ರ. ಇದು ಅತ್ಯಂತ ಸೂಕ್ಷ್ಮ ವಿಚಾರ. ಯಾವುದೇ ವಿಚಾರವನ್ನು ನಾನು ಬಹಿರಂಗಪಡಿಸುವುದಿಲ್ಲ. ಈಗಲೇ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಕಾಲೇಜು ಆಡಳಿತ ಮಂಡಳಿಯಿಂದ‌ ಎಲ್ಲಾ ಮಾಹಿತಿ ಪಡೆದಿದ್ದೇನೆʼʼ ಎಂದು ಖುಷ್ಬೂ ಹೇಳಿದರು.

ʻʻಈಗಷ್ಟೇ ನಾನು ತನಿಖೆಯನ್ನು ಆರಂಭ ಮಾಡಿದ್ದೇನೆ. ಯಾವುದೇ ಮಾಹಿತಿಗಳನ್ನು ಹೊರಗೆ ಹೇಳಲು ಸಾಧ್ಯವಿಲ್ಲ. ಒಳಗಡೆ ಏನು ಚರ್ಚೆ ಆಯ್ತು ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ. ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ನೀವು ಕೂಡಾ ಯಾವುದೇ ಅಂತಿಮ ತೀರ್ಮಾನಕ್ಕೆ ಬರಬೇಡಿʼʼ ಎಂದು ಹೇಳಿದ್ದಾರೆ ಖುಷ್ಬೂ.

ʻʻಪೊಲೀಸರ ಹೇಳಿಕೆ ಹೊರತಾಗಿ ಸದ್ಯ ಜನರು ಬೇರೆ ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. ಮಹಿತಿ ಸಂಗ್ರಹಕ್ಕೆ ನಮಗೆ ಇನ್ನೂ ಸ್ವಲ್ಪ ಸಮಯ ಬೇಕು. ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕೆಂದು ಪ್ರಾಮಾಣಿಕವಾಗಿ ಕೋರುತ್ತೇನೆʼʼ ಎಂದು ಖುಷ್ಬೂ ಮನವಿ ಮಾಡಿದರು.

ಹಿಡನ್‌ ಕ್ಯಾಮೆರಾ ವದಂತಿ ನಂಬಬೇಡಿ

ʻʻಟಾಯ್ಲೆಟ್ ನಲ್ಲಿ ಹಿಡನ್ ಕ್ಯಾಮೆರಾ ಇರಿಸಲಾಗಿದೆ ಎನ್ನುವ ರೂಮರ್ ನಂಬಬೇಡಿ. ಇದೊಂದು ಶೈಕ್ಷಣಿಕ ಕೇಂದ್ರ. ಇಲ್ಲಿ ಹಿಡನ್ ಕ್ಯಾಮೆರಾ ಇರಲು ಸಾಧ್ಯವಿಲ್ಲ. ಹರಿದಾಡುತ್ತಿರುವ ಸುಳ್ಳು ವಿಡಿಯೋಗಳನ್ನು ನಂಬಬೇಡಿʼʼ ಎಂದು ಖುಷ್ಬೂ ಮನವಿ ಮಾಡಿದರು.

ʻʻಯಾವುದೇ ರೂಮರ್ಗಳಿಗೆ ವಾಟ್ಸಪ್ ಮೆಸೇಜ್ ಗಳಿಗೆ ಗಮನ ಕೊಡಬೇಡಿ. ನಾವೇ ಸರಿಯಾದ ಮಾಹಿತಿಯನ್ನು ನೀಡುತ್ತೇವೆ. ಸಂಬಂಧಪಟ್ಟ ಫೋನ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದಕ್ಕೆ ಹೊರತಾಗಿ ಯಾವುದೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲʼʼ ಎಂದರು ಖುಷ್ಬೂ ಸುಂದರ್‌.

ನಮ್ಮನ್ನು ಹಿಂಬಾಲಿಸಬೇಡಿ ಎಂದ ಖುಷ್ಬೂ

ʻʻನಮಗೆ ನಮ್ಮ ಕೆಲಸ ಮಾಡಲು ಬಿಡಿ. ನಾವು ಯಾರನ್ನು ಮಾತನಾಡಿಸುತ್ತೇವೆ, ಎಲ್ಲಿಗೆ ಹೋಗುತ್ತೇವೆ ಎಂದು ಹಿಂಬಾಲಿಸಬೇಡಿ. ಎನ್ ಸಿಡಬ್ಲ್ಯೂ ಪರವಾಗಿ ನಾನು ಸ್ಥಳದಲ್ಲಿ ಇದ್ದೇನೆ. ನಮಗೆ ನಮ್ಮ ಕೆಲಸ ಮಾಡಲು ಬಿಡಿ. ಸದ್ಯ ನಿಮಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಎನ್ ಸಿ ಡಬ್ಲ್ಯೂ ಗೆ ದೂರು ಬಂದ ಕಾರಣ ನಾನು ಇಲ್ಲಿ ಇದ್ದೇನೆ. ಆರೋಪಗಳು ಅನೇಕ ಇರಬಹುದು, ಅದರ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲʼʼ ಎಂದು ಖುಷ್ಬೂ ಹೇಳಿದರು.

ಇದು ಹೆಣ್ಮಕ್ಕಳ ವಿಷಯ, ಎರಡು ನಿಮಿಷದ ನೂಡಲ್ಸ್‌ ಅಲ್ಲ.

ʻʻನಾನು ನಿಮಗೆ ಯಾವುದೇ ಬ್ರೇಕಿಂಗ್ ನ್ಯೂಸ್ ಕೊಡಲು ಇಲ್ಲಿ ಇಲ್ಲ. ಇದು ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಚಾರ. ಇದು ಮಹಿಳೆಯರಿಗೆ ಸಂಬಂಧಿಸಿದ ವಿಚಾರ, ಕಾಯಬೇಕು. ಇದು ಎರಡು ನಿಮಿಷದ ನೂಡಲ್ಸ್ ಥರ ಅಲ್ಲʼʼ ಎಂದು ಕಟುವಾಗಿ ಹೇಳಿದರು ಖುಷ್ಬೂ.

ʻʻಪೊಲೀಸರ ಜೊತೆಗೆ ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಪೊಲೀಸರ ಸಹಕಾರದೊಂದಿಗೆ ನಮ್ಮ ತನಿಖೆ ಮುಂದುವರಿಯಲಿದೆʼʼ ಎಂದು ಖುಷ್ಬೂ ಸುಂದರ್‌ ಅವರು ಹೇಳಿದರು.

ಇದನ್ನೂ ಓದಿ: Udupi Toilet Case : ವಿಡಿಯೊ ಚಿತ್ರೀಕರಣ ಪ್ರಕರಣ; ಉಡುಪಿ ಕಾಲೇಜಿನೊಳಗೆ ಖುಷ್ಬೂ ವಿಚಾರಣೆ, ಹೊರಗಡೆ ABVP ಪ್ರತಿಭಟನೆ

Exit mobile version