ಉಡುಪಿ: ನಗರದಲ್ಲಿರುವ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ (Udupi Nethrajyothi College) ಟಾಯ್ಲೆಟ್‌ನಲ್ಲಿ ಮೊಬೈಲ್ (Udupi Toilet Case) ಇಟ್ಟು ಹಿಂದು ವಿದ್ಯಾರ್ಥಿನಿಯೊಬ್ಬಳ (Hindu Student) ದೃಶ್ಯಗಳನ್ನು ಸೆರೆ ಹಿಡಿದ ಆರೋಪ ಎದುರಿಸುತ್ತಿರುವ ಅದೇ ಕಾಲೇಜಿನ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ತನಿಖೆ ವೇಳೆ ಮೂವರು ವಿದ್ಯಾರ್ಥಿನಿಯರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ವಿಡಿಯೊ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರೂ ವಿದ್ಯಾರ್ಥಿನಿಯರ ವಿಚಾರಣೆ ನಡೆಸಿದ್ದು, ಇದೇ ವೇಳೆ ಅವರು ಹಲವು ಮಾಹಿತಿ ನೀಡಿದ್ದಾರೆ. “ನಾವು ತಮಾಷೆಗಾಗಿ ವಿಡಿಯೊ ಮಾಡಿದ್ದೇವೆ. ವಿಡಿಯೊ ಮಾಡಿದ ನಂತರ ಅದನ್ನು ಡಿಲೀಟ್ ಮಾಡಿದ್ದೇವೆ. ಬೇರೊಬ್ಬ ವಿದ್ಯಾರ್ಥಿನಿಯ ವಿಡಿಯೊ ಮಾಡಲು ಹೋಗಿ, ಮತ್ತೊಬ್ಬ ವಿದ್ಯಾರ್ಥಿನಿಯ ವಿಡಿಯೊ ಮಾಡಿದ್ದೇವೆ. ಬಳಿಕ ಅದನ್ನು ಡಿಲೀಟ್ ಮಾಡಿದ್ದೇವೆ” ಎಂಬುದಾಗಿ ವಿದ್ಯಾರ್ಥಿನಿಯರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
“ನಾವು ಉದ್ದೇಶಪೂರ್ವಕಾಗಿ ವಿಡಿಯೊ ಮಾಡಿಲ್ಲ. ನಾವು ಬೇರೊಬ್ಬ ವಿದ್ಯಾರ್ಥಿನಿಯ ವಿಡಿಯೊ ಮಾಡಿದ್ದೇವೆ ಎಂಬುದು ಗೊತ್ತಾದ ಕೂಡಲೇ ವಿಡಿಯೊ ಡಿಲೀಡ್ ಮಾಡಿದ್ದೇವೆ. ವಿಡಿಯೊ ರಿಟ್ರೈವ್ ಮಾಡಿದರೆ ಎಲ್ಲವೂ ಗೊತ್ತಾಗುತ್ತದೆ” ಎಂಬ ಅಭಿಪ್ರಾಯವನ್ನೂ ವಿದ್ಯಾರ್ಥಿನಿಯರು ವ್ಯಕ್ತಪಡಿಸಿದ್ದಾರೆ. ಆ ಮೂಲಕ ವಿಡಿಯೊ ಮಾಡಿದ್ದು ನಿಜ, ಆದರೆ ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ. ಆದರೂ, ಪೊಲೀಸರು ಎಸ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದಾರೆ. ಇದಾದ ಬಳಿಕವೇ ಪ್ರಕರಣದ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Udupi Toilet Case: ಉಡುಪಿಯ ಆ 3 ಮುಸ್ಲಿಂ ವಿದ್ಯಾರ್ಥಿನಿಯರನ್ನು ಜಿಹಾದಿ ರಕ್ಕಸಿಯರಿಗೆ ಹೋಲಿಸಿದ ಶರಣ್ ಪಂಪ್‌ವೆಲ್
ಜುಲೈ 18ರಂದು ಕಾಲೇಜಿನ ಟಾಯ್ಲೆಟ್‌ನಲ್ಲಿ ವಿಡಿಯೊ ರೆಕಾರ್ಡ್ ಮಾಡಿದ ಘಟನೆಗೆ ಸಂಬಂಧಿಸಿ ಕಾಲೇಜು ಆಡಳಿತ ಮಂಡಳಿ ಈ ವಿದ್ಯಾರ್ಥಿನಿಯರನ್ನು ಆಗಲೇ ಅಮಾನತು ಮಾಡಿತ್ತು. ಸಂತ್ರಸ್ತ ವಿದ್ಯಾರ್ಥಿನಿ ಯಾವುದೇ ದೂರು ನೀಡಿಲ್ಲ ಮತ್ತು ಇದು ತಮಾಷೆಗಾಗಿ ಮಾಡಿದ್ದರಿಂದ ಪ್ರಕರಣ ಬೇಡ ಎಂದು ಹೇಳಿದ್ದರಿಂದ ಕಾಲೇಜು ಆಡಳಿತ ಮಂಡಳಿ ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದು ಆಲ್ಲೇ ಮುಕ್ತಾಯಗೊಳಿಸಿತ್ತು. ಪೊಲೀಸರು ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಆದರೆ, ಯಾವಾಗ ಈ ಪ್ರಕರಣ ದೇಶ ಮಟ್ಟದಲ್ಲಿ ಚರ್ಚೆಯಾಗಲು ಆರಂಭವಾಯಿತೋ, ಪ್ರಕರಣದ ತನಿಖೆ, ಮುಸ್ಲಿಂ ವಿದ್ಯಾರ್ಥಿನಿಯರ ಬಂಧನಕ್ಕೆ ಒತ್ತಡ ಹೆಚ್ಚಾಯಿತೋ ತಕ್ಷಣ ಎಚ್ಚೆತ್ತ ಪೊಲೀಸರು ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿದ್ದರು. ಅಲ್ಲದೆ, ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು ಎಂಬ ಆಗ್ರಹಗಳು ಕೂಡ ಕೇಳಿಬಂದಿವೆ.