ಉಡುಪಿ ಹುಟ್ಟು ಹಬ್ಬ ಅಂದರೆ ಹೊಸ ಬದುಕಿನ ಆರಂಭ ಆಗಬೇಕು ಅಂತ ಎಲ್ಲರೂ ಬಯಸುತ್ತಾರೆ. ನಾಳೆಯಿಂದ ಬದುಕು ಬದಲಾಗುತ್ತದೆ, ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವ ನಿರೀಕ್ಷೆ ಅದಕ್ಕೆ ಹೊಂದಿಕೊಂಡಿರುತ್ತದೆ. ಹಾಗಾಗಿ ಮನೆ ಮಂದಿ ಖುಷಿಪಡುತ್ತಾರೆ, ಗೆಳೆಯರೂ ಸಂಭ್ರಮಪಡುತ್ತಾರೆ. ಆದರೆ, ಕೆಲವರು ಹುಟ್ಟುಹಬ್ಬದ ದಿನವೂ ಆಟಾಟೋಪಗಳನ್ನು ಮಾಡಿ ಹುಟ್ಟುಹಬ್ಬದ ನಿಜ ಸಂಭ್ರಮವನ್ನೇ ಸಾಯಿಸುತ್ತಾರೆ.
ಪಡುಬಿದ್ರಿಯಲ್ಲೂ ಆಗಿದ್ದು ಅದೇ. ಇಲ್ಲಿ ನಿರಂಜನ್ ಶೆಟ್ಟಿಗಾರ್ ಎಂಬಾತನ ಹುಟ್ಟುಹಬ್ಬವನ್ನು ಕಳೆದ ಮೇ 30ರಂದು ಅದ್ಧೂರಿಯಾಗಿ ಆಚರಿಸಲಾಗಿತ್ತು. ಈ ಹುಟ್ಟುಹಬ್ಬ ನಡೆದಿದ್ದು ಸ್ವಲ್ಪ ಕ್ರಿಮಿನಲ್ ಹಿನ್ನೆಲೆ ಇರುವ ಜಿತೇಂದ್ರ ಶೆಟ್ಟಿ ಎಂಬಾತನ ಮನೆಯಲ್ಲಿ. ಹುಟ್ಟುಹಬ್ಬದ ಕೇಕ್ ಕತ್ತರಿಸುವಾಗ ಸಾಮಾನ್ಯವಾಗಿ ಚೂರಿ ಬಳಸುತ್ತಾರಲ್ಲಾ, ಇಲ್ಲಿ ಜಿತೇಂದ್ರ ಶೆಟ್ಟಿ ಅದರ ಬದಲು ತಲವಾರನ್ನೇ ಬಳಸಿದ್ದ! ಮಾತ್ರವಲ್ಲ ಈ ರೀತಿ ಆಚರಿಸಿಕೊಂಡ ಅಬ್ಬರವನ್ನು ಆ ತಂಡದವರೇ ವಿಡಿಯೊ ತುಣುಕಿನ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ! ಇದು ಈಗ ಅವರಿಗೇ ಮುಳುವಾಗಿದೆ.
ಇದನ್ನೂ ಓದಿ | ಪ್ರಶಾಂತ್ ಹತ್ಯೆ ಪ್ರಕರಣ: ರೇವಣ್ಣ ಹಾಗೂ ಪ್ರೀತಂ ನಡುವೆ ವಾರ್
ಈ ವಿಡಿಯೋ ವೀಕ್ಷಿಸಿದ ಉನ್ನತ ಪೊಲೀಸ್ ಅಧಿಕಾಗಳು ಉಡುಪಿ ಎಸ್ಪಿಗೆ ಕಾನೂನು ಕ್ರಮಕ್ಕಾಗಿ ಆದೇಶಿಸಿದ್ದಾರೆ. ಪಡುಬಿದ್ರಿ ನಿವಾಸಿಗಳಾದ ಜಿತೇಂದ್ರ ಶೆಟ್ಟಿ, ಗಣೇಶ್ ಪೂಜಾರಿ ಹಾಗೂ ಶರತ್ ಶೆಟ್ಟಿ ಎಂಬರನ್ನು ವಶಕ್ಕೆ ಪಡೆಯಲಾಗಿದೆ.
ಬರ್ತ್ ಡೇ ಆಚರಿಸಿಕೊಂಡ ಯುವಕ ನಿರಂಜನ್ ಶೆಟ್ಟಿಗಾರ್, ತನುಜ್, ಸೂರಜ್ ಹಾಗೂ ಅನಿಶ್ ಸದ್ಯ ತಲೆಮರೆಸಿಕೊಂಡಿದ್ದಾರೆ. ಇವರುಗಳ ಬಂಧನಕ್ಕೆ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಪಡುಬಿದ್ರಿ ಎಸ್ಸೈ ಪುರುಷೋತ್ತಮ್ ತಂಡ ಬಲೆ ಬೀಸಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯ ವಿರುದ್ಧ ಉಡುಪಿ ಎಸ್ಪಿ ವಿಷ್ಣುವರ್ಧನ್ ಆದೇಶದಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಕೋವಿಡ್ ಸಮಯದಲ್ಲಿ ಬೆದರಿಕೆ ಎಂದು ಈಗ ದೂರು: ಅಧಿಕಾರಿಗಳ ವಿರುದ್ಧ ಪ್ರಕರಣ