Site icon Vistara News

Chaitra Kundapura : ಚೈತ್ರಾ ಕುಂದಾಪುರ ನನ್ನ ಮನೆಯಲ್ಲಿರಲಿಲ್ಲ, ವರ್ಷದಿಂದ ನೋಡಿಲ್ಲ; ಕಾಂಗ್ರೆಸ್‌ ವಕ್ತಾರೆ ಸುರಯ್ಯ ಅಂಜುಂ

Suraiah and Chaitra kundapura

ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ (Govinda Poojari) ಅವರಿಂದ ಐದು ಕೋಟಿ ರೂ. ಪಡೆದು ವಂಚನೆ ಮಾಡಿದ ಆರೋಪದಲ್ಲಿ ಚೈತ್ರಾ ಕುಂದಾಪುರ (Chaitra Kundapura) ಮತ್ತು ಇತರ ಐವರ ಬಂಧನವಾಗಿದೆ. ಚೈತ್ರಾ ಕುಂದಾಪುರ ಅವರು ಬಂಧನಕ್ಕೆ ಒಳಗಾಗುವ ಮುನ್ನ ಉಡುಪಿ ಕಾಂಗ್ರೆಸ್‌ನ ಮಾಧ್ಯಮ ವಕ್ತಾರೆ (Congress Spokesperson) ಸುರಯ್ಯ ಅಂಜುಂ (Suraiah Anjum) ಅವರ ಮನೆಯಲ್ಲಿದ್ದರು ಎಂಬ ಮಾತು ಕೇಳಿಬಂದಿತ್ತು. ಆದರೆ, ಸುರಯ್ಯ ಅವರು ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಹೇಳಿಕೇಳಿ ಚೈತ್ರಾ ಕುಂದಾಪುರ ಫೈರ್‌ ಬ್ರಾಂಡ್‌ ಹಿಂದೂ ನಾಯಕಿ. ಆದರೆ ಸಿಕ್ಕಿಬೀಳುವ ಹಂತದಲ್ಲಿ ಮುಸ್ಲಿಂ ಫ್ರೆಂಡ್‌ ಮನೆಯಲ್ಲಿ ರಕ್ಷಣೆ ಪಡೆಯುವ ಪರಿಸ್ಥಿತಿ ಅವರಿಗೆ ಎದುರಾಯಿತು ಎಂಬ ಮಾತುಗಳು ಜಾಲತಾಣದಲ್ಲಿ ಕೇಳಿಬಂದಿತ್ತು. ಆದರೆ, ಇದೊಂದು ಸುಳ್ಳು ಸುದ್ದಿ. ಆಕೆ ನಮ್ಮ ಮನೆಗೆ ಬಂದೇ ಇರಲಿಲ್ಲ. ಆಕೆಯನ್ನು ನಾನು ಭೇಟಿಯಾಗದೆ ಒಂದು ವರ್ಷವೇ ಆಯಿತು ಎಂದು ಹೇಳಿದ್ದಾರೆ ಸುರಯ್ಯ ಅಂಜುಂ ಅವರು. ಜತೆಗೆ ಸುಳ್ಳು ಸುದ್ದಿ ಹರಡದಂತೆ ಆಕೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಚೈತ್ರಾ ಕುಂದಾಪುರ ಅವರಿಗೆ ಆಶ್ರಯ ನೀಡಿರಲಿಲ್ಲ. ನಾನು ಆಶ್ರಯ ನೀಡಿದ್ದರೆ ಪೊಲೀಸರು ವಿಚಾರಣೆಗೆ ಕರೆಯಬೇಕಿತ್ತಲ್ಲವೇ? ಸಿಸಿಬಿ ಪೊಲೀಸರಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಚೈತ್ರಾ ಕುಂದಾಪುರ ಭೇಟಿಯಾಗಿ ಒಂದು ವರ್ಷ ಆಗಿದೆ. ಕೆಲವರು ಐದು ವರ್ಷದ ಹಿಂದಿನ ಫೋಟೋವನ್ನು ವೈರಲ್ ಮಾಡಿ ನಾನು ಆಕೆ ಜತೆಯಾಗಿದ್ದೆವು ಎನ್ನುತ್ತಿದ್ದಾರೆ. ಇದೆಲ್ಲ ಸುಳ್ಳು ಎಂದಿದ್ದಾರೆ.

Chaitra kundapura

ಹಿಂದು ಅಜೆಂಡಾದ ಪ್ರಬಲ ಪ್ರತಿಪಾದಕಿಯಾಗಿರುವ ಚೈತ್ರಾ ಮತ್ತು ಕಾಂಗ್ರೆಸ್‌ನ ವಕ್ತಾರೆಯಾಗಿದ್ದು ಎಲ್ಲರೊಂದಿಗೆ ಸ್ನೇಹ ಭಾವ ಹೊಂದಿರುವ ಸುರಯ್ಯ ಅಂಜುಂ ನಿಜ ಜೀವನದಲ್ಲಿ ಗೆಳತಿಯರಾಗಿರುವುದು ನಿಜ ಎನ್ನಲಾಗುತ್ತಿದೆ. ನಿಜವೆಂದರೆ ಹಲವಾರು ವಿಷಯಗಳಲ್ಲಿ ಸುರಯ್ಯ ಮತ್ತು ಚೈತ್ರಾ ಕುಂದಾಪುರ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡುತ್ತಾರೆ. ಆದರೆ, ಮಾನವೀಯ ಸಂಬಂಧ ಬಂದಾಗ ಗೆಳತಿಯರಾಗಿರುತ್ತಾರೆ ಎನ್ನಲಾಗಿದೆ. ಈ ಹಿಂದೆ ಅವರಿಬ್ಬರು ಒಂದೇ ಮಾಧ್ಯಮ ಸಂಸ್ಥೆಯಲ್ಲಿ ಜತೆಯಾಗಿ ಕೆಲಸ ಮಾಡಿದಾಗ ಹುಟ್ಟಿದ ಸಂಬಂಧ. ಬಳಿಕ ಅವರು ಸಿದ್ಧಾಂತ ಆಧರಿತವಾಗಿ ಭಿನ್ನ ದಾರಿ ಹಿಡಿದರೂ ಅದು ಆತ್ಮೀಯತೆಗೆ ತೊಡಕಾಗದಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Chaithra Kundapura : ಅಬ್ಬಾ ಇವಳೆಂಥಾ ವಂಚಕಿ! 5 ಕೋಟಿ ವಂಚಿಸಿದ್ದಷ್ಟೇ ಅಲ್ಲ, ಮರ್ಡರ್‌ ಕೂಡಾ ಮಾಡಿದ್ದಾಳೆ ಚೈತ್ರಾ ಕುಂದಾಪುರ!

ಸುರಯ್ಯ ಅಂಜುಂ ಅವರು ಆಕೆಯನ್ನು ತಮ್ಮ ಮನೆಯಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಸುಳ್ಳು ಎನ್ನುವುದಕ್ಕೆ ಇನ್ನೊಂದು ನಿದರ್ಶನವನ್ನು ಕೊಡುತ್ತಾರೆ. ಆಕೆಯನ್ನು ಬಂಧಿಸಿದ್ದು ಕೃಷ್ಣ ಮಠದ ಸಮೀಪ ಎನ್ನುವುದನ್ನು ಎಲ್ಲರೂ ನೋಡಿದ್ದಾರೆ. ಹಾಗಿದ್ದರೂ ಆಕೆ ನನ್ನ ಮನೆಯಲ್ಲಿ ಆಶ್ರಯ ಪಡೆದಿದ್ದಳು ಎಂಬ ಸುಳ್ಳು ಸುದ್ದಿ ಹರಡುವುದು ಯಾಕೆ ಎಂದು ಆಕೆ ಪ್ರಶ್ನಿಸಿದ್ದಾರೆ.

Exit mobile version