Site icon Vistara News

Prajadhwani : ನಾನು ಅಪ್ಪಟ ಹಿಂದು; ಆದರೆ ಹಿಂದುತ್ವವಾದಿ ಅಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ

Former cm siddaramaiah speech in udupi prajadhwani

ಉಡುಪಿ: ತಮ್ಮನ್ನೂ ಸೇರಿ ಕಾಂಗ್ರೆಸ್‌ನಲ್ಲಿ ಅನೇಕ ಅಪ್ಪಟ ಹಿಂದುಗಳಿದ್ದು, ಹಿಂದುತ್ವವಾದಿಗಳಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಉಡುಪಿಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ (Prajadhwani) ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು.

ಬಿಜೆಪಿಯವರು ಹಿಂದೂಗಳ ಪರವಾಗಿರುವವರಲ್ಲ. ಹಿಂದುತ್ವದ ಪರವಾಗಿರುವವರು. ನಾನು ಕೂಡ ಅಪ್ಪಟ ಹಿಂದೂ, ಡಿ.ಕೆ. ಶಿವಕುಮಾರ್, ಸುರ್ಜೆವಾಲ, ಬಿ.ಕೆ. ಹರಿಪ್ರಸಾದ್, ವೀರಪ್ಪ ಮೋಯ್ಲಿ ಇವರೆಲ್ಲರೂ ಅಪ್ಪಟ ಹಿಂದೂಗಳೇ. ಆದರೆ ನಾವು ಹಿಂದುತ್ವವಾದಿಗಳಲ್ಲ. ನಾವು ಹಿಂದೂ ಧ್ರರ್ಮ, ಹಿಂದೂಗಳ ಪರವಾಗಿರುವವರು. ಅಂದರೆ ಮನುಷ್ಯತ್ವದ ಪರವಾಗಿರುವವರು ಎಂದರ್ಥ ಎಂದರು.

ಮನುಷ್ಯ, ಮನುಷ್ಯನನ್ನು ದ್ವೇಷಿಸಬಾರದು, ಪ್ರೀತಿಸಬೇಕು. ಯಾವುದೇ ಧರ್ಮ, ಜಾತಿಯವರಾದರೂ ಎಲ್ಲರೂ ಮನುಷ್ಯರು. ಯಾವ ಧರ್ಮ ಮನುಷ್ಯರನ್ನು ಕೊಲ್ಲು, ಹಿಂಸೆ ನೀಡು ಎಂದು ಹೇಳುತ್ತದೆಯೇ? ಈ ಬಿಜೆಪಿಯವರು ಹಿಂದೂ ಧರ್ಮದ ಹೆಸರಲ್ಲಿ ಕಿಚ್ಚು ಹಚ್ಚುತ್ತಿದ್ದಾರೆ.

ಹಿಂದುತ್ವ ಎಂದರೆ, ಮನುವಾದ, ಮನುಷ್ಯತ್ವ ವಿರೋಧಿ ವಾದ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಅನೇಕ ಜನ ಕರಾವಳಿ ಭಾಗದಲ್ಲಿ ಹತ್ಯೆಯಾಗಿದ್ದರೆ ಅದರಲ್ಲಿ ಸತ್ತಿರುವವರು ಹಿಂದುಳಿದ ಜಾತಿಗೆ ಸೇರಿರುವವರು. ಯಾರಾದರೂ ಕೂಡ ಆರ್‌ಎಸ್‌ಎಸ್‌ ಪ್ರಮುಖ ನಾಯಕ, ಶಾಸಕನ ಮಗ ಕೊಲೆ ಆಗಿದ್ದಾರಾ? ಕೊಲೆ ಮಾಡುವವರು, ಕೊಲೆ ಆಗುವವರು, ಜೈಲಿಗೆ ಹೋಗುವವರು ಹಿಂದುಳಿದ ವರ್ಗದ ಜನ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದರು.

ಕೊಲೆಯಾದರೆ ಹೆಣಗಳ ಮೇಲೆ ರಾಜಕೀಯ ಮಾಡುತ್ತಾರೆ. ನಿಮಗೆ ಪರೇಶ್ ಮೇಸ್ತಾ ಎಂಬಾತ ಆಕಸ್ಮಿಕವಾಗಿ ಸತ್ತಿದ್ದು, ಅದನ್ನು ಕೊಲೆ ಎಂದು ಬಿಂಬಿಸಿ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದು ಲೋಕಸಭಾ ಸದಸ್ಯರು. ಇವರು ಲೋಕಸಭಾ ಸದಸ್ಯರಾಗಲು ಲಾಯಕ್ಕಾ, ನಾಲಾಯಕ್ಕಾ ಎಂದು ಜನ ಅರ್ಥ ಮಾಡಿಕೊಳ್ಳಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದೆ, ಅದರ ತನಿಖೆ ವರದಿಯಲ್ಲಿ ಏನಿದೆ? ಪರೇಶ್ ಮೇಸ್ತಾ ಸಾವು ಸಹಜ. ಅದು ಕೊಲೆಯಲ್ಲ ಎಂದು ಹೇಳಿದೆ. ಸಿಬಿಐ ಯಾರ ನಿಯಂತ್ರಣದಲ್ಲಿದೆ ಅಮಿತ್ ಶಾ, ಮೋದಿ ಅವರ ನಿಯಂತ್ರಣದಲ್ಲಿ. ಅದನ್ನು ನೀವು ವಿವಾದ ಮಾಡುತ್ತೀರಲ್ಲಾ, ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ? ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ವಿದೂಷಕ

ಬಿಜೆಪಿ ಅಧ್ಯಕ್ಷ ದಕ್ಷಿಣ ಕನ್ನಡ ಜಿಲ್ಲೆಯವನು, ನಾನು ಅವನ್ನು ವಿದೂಷಕ ಎನ್ನುತ್ತೇನೆ. ಅವನು ಬಿಜೆಪಿ ಅಧ್ಯಕ್ಷನಾಗಲು ಲಾಯಕ್ಕಲ್ಲ. ಆತ ಇತ್ತೀಚೆಗೆ ರಸ್ತೆ, ಚರಂಡಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾನೆ. ನೀವು ಈ ಹೇಳಿಕೆ ಕೇಳಿದ ಮೇಲೂ ಎಚ್ಚೆತ್ತುಕೊಳ್ಳದಿದ್ದರೆ ಏನು ಹೇಳಬೇಕು? ಈ ಕರಾವಳಿ ಪ್ರದೇಶದ ಜನರನ್ನು ಹೇಗೆ ಮನವಿ ಮಾಡಬೇಕು? ನಿಮಗೆ ಕ ಮುಗಿದು ಕೇಳಿಕೊಳ್ಳುತ್ತೇನೆ, ಅವರ ಮಾತಿಗೆ ಮರುಳಾಗಬೇಡಿ, ಅವರು ನಿಮ್ಮ ದಾರಿ ತಪ್ಪಿಸುತ್ತಾರೆ. ನಿಮ್ಮ ಭವಿಷ್ಯ ನಾಶ ಮಾಡುತ್ತಾರೆ. ಇಲ್ಲಿ ಹಿಂದುಳಿದ ಜಾತಿ, ಬಡವರು ಇದ್ದಾರೆ.

ನಾವು ಮೀನುಗಾರರಿಗೆ ದಿನಕ್ಕೆ ನಾಡದೋಣಿಗಳಿಗಾಗಿ 300 ಲೀಟರ್ ಸೀಮೆಎಣ್ಣೆ ನೀಡುತ್ತಿದ್ದೆವು. ಬಿಜೆಪಿಯವರು ಬಂದು ಅದನ್ನು ಯಾಕೆ ನಿಲ್ಲಿಸಿದ್ದಾರೆ? ಬಿಜೆಪಿಯವರಿಗೆ ನೀವು ಪ್ರಶ್ನಿಸಬೇಕು. ನಾನು ಈ ವಿಚಾರವಾಗಿ ಸದನದಲ್ಲಿ ಪ್ರಶ್ನೆ ಮಾಡಿದೆ. ಆಗ ಶ್ರೀನಿವಾಸ್ ಪೂಜಾರಿ ಅವರು ನಾಳೆಯಿಂದಲೇ ಆರಂಭಿಸುತ್ತೇವೆ ಎಂದರು. ಅಧಿವೇಶನ ಮುಗಿದು ಎಷ್ಟು ದಿನವಾಯಿತು, ಇದುವರೆಗೂ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ | Prajadhwani : ಕರಾವಳಿಯಲ್ಲಿ ಶಿಕ್ಷಣಕ್ಕೆ ಮಕ್ಕಳನ್ನು ಕಳಿಸಲು ಪೋಷಕರು ಹೆದರುತ್ತಾರೆ : ಡಿ.ಕೆ. ಶಿವಕುಮಾರ್‌ ಹೇಳಿಕೆ

ರಾಜ್ಯದಲ್ಲಿ ಎಸ್‌ಡಿಪಿಐ ಜತೆ ಸ್ನೇಹ ಸಂಬಂಧ ಹೊಂದಿದ್ದರೆ ಅದು ಬಿಜೆಪಿಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ. ನಾವು ಅಧಿಕಾರಕ್ಕೆ ಬಂದರೆ ಪಿಎಫ್ಐ ಹಾಗೂ ಎಸ್‌ಡಿಪಿಐ ನಿಷೇಧ ಮಾಡುತ್ತೇವೆ ಎಂದಿದ್ದರು. ಆದರೆ ಕೇವಲ ಪಿಎಫ್‌ಐ ರದ್ದು ಮಾಡಿರುವುದು ಯಾಕೆ? ಪಿಎಫ್ಐ ಆರ್‌ಎಸ್ಎಸ್, ಎಸ್‌ಡಿಪಿಐ ಬಿಜೆಪಿ ಇದ್ದಂತೆ. ಇವರು ಮತ ವಿಭಜನೆ ಆಗಲಿ ಎಂದು ಎಸ್‌ಡಿಪಿಐ ಅನ್ನು ಇಟ್ಟುಕೊಂಡಿದ್ದಾರೆ. ನಾವು ಇವರ ಹತ್ತಿರ ಪಾಠ ಕಲಿಯಬೇಕಾ? ಈ ದೇಶದಲ್ಲಿ ನೂರಕ್ಕೆ ನೂರರಷ್ಟು ಜಾತ್ಯಾತೀತ ಪಕ್ಷ ಇದ್ದರೆ, ಅದು ಕಾಂಗ್ರೆಸ್ ಪಕ್ಷ ಮಾತ್ರ. ನಾವು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಮೋದಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎನ್ನುತ್ತಾರೆ. ಅವರು ಹೇಳೋದು ಮಾತ್ರ ಬದನೆಕಾಯಿ. ಆದರೆ ಆಚರಣೆ ಇಲ್ಲ. ಆದರೆ ಕಾಂಗ್ರೆಸ್ ಹೇಳಿದಂತೆ ನಡೆಯುತ್ತದೆ. ಕೊಟ್ಟ ವಚನವನ್ನು ಉಳಿಸಿಕೊಳ್ಳುತ್ತದೆ. ನಾವು ಕೊಟ್ಟ ವಚನ ಎಷ್ಟೇ ಕಷ್ಟವಾದರೂ ಅದರ ಪರಿಪಾಲನೆಗೆ ಪ್ರಯತ್ನಿಸುತ್ತೇವೆ ಎಂದರು.

Exit mobile version