Site icon Vistara News

ಪರೀಕ್ಷೆಗಿಂತ ಹಿಜಾಬ್‌ ಮುಖ್ಯವೆಂದ ವಿದ್ಯಾರ್ಥಿನಿಯರು: ದ್ವಿತೀಯ ಪಿಯು ಪರೀಕ್ಷೆಗೆ ಗೈರು

ಬೆಂಗಳೂರು: ರಾಜ್ಯದಲ್ಲಷ್ಟೆ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗುವಂತೆ ಮಾಡಿದ ಹಿಜಾಬ್‌ (Hijab) ವಿವಾದ ಆರಂಭವಾದ ಉಡುಪಿಯ ಸರ್ಕಾರಿ ಕಾಲೇಜಿನ ಆರು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅವಕಾಶ ನೀಡದ ಪರೀಕ್ಷೆ ಬೇಡವೆಂಬ ತೀರ್ಮಾನಕ್ಕೆ ಬಂದಿದ್ದಾರೆ.

ರಾಜ್ಯಾದ್ಯಂತ ಶುಕ್ರವಾರದಿಂದ ದ್ವಿತೀಯ ಪಿಯು ಪರೀಕ್ಷೆಗಳು ಸುಸೂತ್ರವಾಗಿ ಆರಂಭಗೊಂಡಿವೆ. 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಗೊಂಡಿದ್ದರು. 6,00,519 ಸಾಮಾನ್ಯ, 61,808 ಪುನರಾವರ್ತಿತ ಹಾಗೂ 21,928 ಖಾಸಗಿ ವಿದ್ಯಾರ್ಥಿಗಳಿದ್ದಾರೆ.

ಪರೀಕ್ಷೆ ಕುರಿತು ಏಪ್ರಿಲ್‌ 19ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ (B.C. Nagesh) ಸುದ್ದಿಗೋಷ್ಠಿ ನಡೆಸಿದ್ದರು. ಪರೀಕ್ಷಾ ಕೊಠಡಿಯಲ್ಲಿ ಯಾವುದೇ ಕಾರಣಕ್ಕೆ ಹಿಜಾಬ್‌ಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಸಮವಸ್ತ್ರ ಇರುವ ಕಾಲೇಜುಗಳ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಬರಬೇಕು. ಸಮವಸ್ತ್ರ ಇಲ್ಲದ ಸಂಸ್ಥೆಗಳ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗುವುದಿಲ್ಲ. ಆದರೆ ಹಿಜಾಬ್‌ ಸೇರಿ ಯಾವುದೇ ಧಾರ್ಮಿಕ ಉಡುಪುಗಳನ್ನು ಧರಿಸಲು ಅವಕಾಶ ಇರುವುದಿಲ್ಲ ಎಂದಿದ್ದರು.

ಶುಕ್ರವಾರದಿಂದ ಪರೀಕ್ಷೆಗಳು ಆರಂಭವಾಗಬೇಕಿದ್ದರೂ, ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿನಿಯರು ಗುರುವಾರದವರೆಗೆ ಹಾಲ್‌ ಟಿಕೆಟ್‌ ಪಡೆದಿರಲಿಲ್ಲ. ಹಿಜಾಬ್‌ ಧರಿಸಲು ಅವಕಾಶ ನೀಡಬೇಕೆಂದು ಈ ಆರು ವಿದ್ಯಾರ್ಥಿನಿಯರಿಂದಲೇ ಪ್ರಯತ್ನ ಆರಂಭವಾಗಿತ್ತು. ನಂತರ ಇದು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಆರು ವಿದ್ಯಾರ್ಥಿನಿಯರಲ್ಲಿ ಆಲಿಯಾ ಅಸಾದಿ ಹಾಗೂ ರೇಷಂ ಎಂಬ ಇಬ್ಬರು ವಿದ್ಯಾರ್ಥಿನಿಯರು ಕೊನೆ ಕ್ಷಣದಲ್ಲಿ ಹಾಲ್‌ ಟಿಕೆಟ್‌ ಪಡೆದಿದ್ದರು.

ದ್ವಿತೀಯ ಪರೀಕ್ಷೆಯಾಗಿರುವ ಕಾರಣ ಭವಿಷ್ಯದ ದೃಷ್ಟಿಯಿಂದ ಪ್ರಮುಖವಾದದ್ದು. ಇದರ ಅರಿವಾಗಿ ಬಹುಶಃ ಪರೀಕ್ಷೆ ಬರೆಯಲು ಮನಸ್ಸು ಮಾಡಿದ್ದಾರೆ ಎಂದು ಭಾವಿಸಲಾಗಿತ್ತು. ಪರೀಕ್ಷೆ ಬರೆಯಬೇಕಿದ್ದ ವಿದ್ಯೋದಯ ಶಿಕ್ಷಣ ಸಂಸ್ಥೆಗೆ ಇಬ್ಬರು ವಿದ್ಯಾರ್ಥಿನಿಯರೂ ಶುಕ್ರವಾರ ಆಗಮಿಸಿದ್ದಾರೆ. ಆದರೆ ಹಿಜಾಬ್‌ ಧರಿಸಿಯೇ ಪರೀಕ್ಷೆ ಬರೆಯುತ್ತೇವೆ ಎಂದಿದ್ದಾರೆ. ನ್ಯಾಯಾಲಯ ಹಾಗೂ ಸರ್ಕಾರದ ಆದೇಶದ ಮೇರೆಗೆ ಇದಕ್ಕೆ ಅವಕಾಶ ಇಲ್ಲ ಎಂದು ಪರೀಕ್ಷಾ ಮೇಲ್ವಿಚಾರಕರು ತಿಳಿಸಿದ್ದಾರೆ. ಸುಮಾರು ಅರ್ಧಗಂಟೆ ಮಾತುಕತೆ ನಂತರವೂ ವಿದ್ಯಾರ್ಥಿನಿಯರು ಒಪ್ಪಿಲ್ಲ. ಕೊನೆಗೆ, ಪರೀಕ್ಷೆ ಬರೆಯುವುದಿಲ್ಲ ಎಂದು ತೀರ್ಮಾನಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಆಟೊ ಏರಿ ಮನೆಗೆ ತೆರಳಿದ್ದಾರೆ.

ಹಿಜಾಬ್‌ ವಿಚಾರದಲ್ಲಿ ಪರೀಕ್ಷೆಗೆ ಗೈರಾದರೆ ಮತ್ತೆ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಸಚಿವ ನಾಗೇಶ್ಉ‌ ಉತ್ತ್ತತರಿಸಿದ್ರದರು. ಗೈರು ಹಾಜರು ಎಂದರೆ ಗೈರು ಹಾಜರು ಅಷ್ಟೆ. ಅದರಲ್ಲಿ ಹಿಜಾಬ್‌ಗಾಗಿ ಗೈರು, ಮತ್ತೊಂದಕ್ಕೆ ಗೈರು ಎನ್ನುವಂತಿಲ್ಲ. ಸಾಮಾನ್ಯ ನಿಯಮಗಳ ಪ್ರಕಾರ, ಗೈರು ಹಾಜರಾದ ವಿದ್ಯಾರ್ಥಿಗಳು ಪುನಃ ಪರೀಕ್ಷೆ ತೆಗೆದುಕೊಳ್ಳಬೇಕು. ಇಲ್ಲಿಯೂ ಅದು ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಹಾಗಾಗಿ ಇಂದು ಗೈರಾಗಿರುವ ವಿದ್ಯಾರ್ಥಿನಿಯರು, ಸಾಮಾನ್ಯವಾಗಿ ನಡೆಯುವ ಮರುಪರೀಕ್ಷೆಯಲ್ಲಿ ಹಾಜರಾಗುವ ಕುರಿತು ತೀರ್ಮಾನಿಸಲು ಅವಕಾಶವಿದೆ.

ಕೋವಿಡ್‌ ರಹಿತ ಪರೀಕ್ಷೆ !

ಕಳೆದೆರಡು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳನ್ನು ಕಾಡಿದ್ದ ಕೊರೋನಾ ಕರಿನೆರಳು ಈ ಬಾರಿ ಸರಿದಿದೆ. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೋವಿಡ್‌-19 ಸೋಂಕಿಗೆ ಒಳಗಾದವರು ಪ್ರಮಾಣಪತ್ರ ನೀಡಿದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿತ್ತು. ಕಳೆದೆರಡು ವರ್ಷವೂ ವಿದ್ಯಾರ್ಥಿಗಳು ಈ ರೀತಿ ನೋಂದಾಯಿಸಿ ಪರೀಕ್ಷೆ ಬರೆದಿದ್ದರು. ಆದರೆ ಈ ವರ್ಷ ರಾಜ್ಯದಲ್ಲಿ ಯಾರೂ ನೋಂದಣಿ ಮಾಡಿಕೊಂಡಿಲ್ಲ.

ಹೆಚ್ಚಿನ ಓದಿಗಾಗಿ: CET 2022 | ಸಿಇಟಿ ಅರ್ಜಿ ಸಲ್ಲಿಕೆಗೆ ಹೊಸ ಲಿಂಕ್‌

ಪರೀಕ್ಷೆ ಅಂಕಿ ಅಂಶಗಳು
Exit mobile version