ಬೆಂಗಳೂರು: ಹಿಂದೂ ಕಾರ್ಯಕರ್ತೆ, ಉಗ್ರ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaithra Kundapura) ಹಾಗು ಗ್ಯಾಂಗ್ ಮೇಲೆ ವಂಚನೆ ಪ್ರಕರಣ (Fraud case) ದಾಖಲಾಗಿದ್ದು, ನಾಳೆ ಆರೋಪಿತರನ್ನು ಸಿಸಿಬಿ ಪೊಲೀಸರು (CCB police) ಬೆಂಗಳೂರಿಗೆ ಕರೆ ತರಲಿದ್ದಾರೆ. ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಬೈಂದೂರಿನಲ್ಲಿ ವಿಧಾನಸಭೆ ಚುನಾವಣೆಗೆ ನಿಲ್ಲಲು ಬಿಜೆಪಿಯಿಂದ ಟಿಕೆಟ್ ಕೊಡಿಸುತ್ತೇನೆ ಎಂದು ಉದ್ಯಮಿ ಗೋವಿಂದ ಪೂಜಾರಿ ಅವರಿಂದ ಕೋಟಿಗಟ್ಟಲೆ ಹಣವನ್ನು ಚೈತ್ರಾ ಕುಂದಾಪುರ ಆ್ಯಂಡ್ ಗ್ಯಾಂಗ್ ಪೀಕಿಸಿ ವಂಚಿಸಿತ್ತು. ಈಗಾಗಲೇ ಇದಕ್ಕೆ ಸಂಬಂಧಿಸಿ ಉಡುಪಿಯ ಕೃಷ್ಣಮಠದ ಪಾರ್ಕಿಂಗ್ ಬಳಿ ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಾಳೆ ನಗರಕ್ಕೆ ಕರೆ ತಂದು ಬಂಧನ ಪ್ರಕ್ರಿಯೆ ನಡೆಸಲಿದ್ದಾರೆ.
ಉದ್ಯಮಿಯಿಂದ ಹಣ ಪಡೆಯಲು ಚೈತ್ರಾ ಕುಂದಾಪುರ ಹೈಡ್ರಾಮಾ ನಡೆಸಿದ್ದು ತಿಳಿದುಬಂದಿದೆ. ಗೋವಿಂದ ಬಾಬು ಪೂಜಾರಿಯನ್ನು ಬೆಂಗಳೂರಿಗೆ ಚೈತ್ರಾ ಕರೆಸಿಕೊಳ್ಳುತ್ತಿದ್ದಳು. ಐಷಾರಾಮಿ ಖಾಸಗಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದಳು. ತನ್ನ ತಂಡದ ಕೆಲವರಿಗೆ ಈಕೆ ಒಳ್ಳೆಯ ವೇಷ ಭೂಷಣ ಹಾಕಿಸಿ, ಇವರೇ ದೆಹಲಿಯ ಹೈಕಮಾಂಡ್‌ನವರು ಎಂದು ಹೇಳಿ ನಂಬಿಸುತ್ತಿದ್ದಳು. ಇವರು ಹೇಳಿದ ಮೇಲೆ ಟಿಕೆಟ್ ನಿಮಗೇ ಎಂದು ನಂಬಿಸುತ್ತಿದ್ದಳು. ಅವರ ವೇಷಭೂಷಣ, ಠೀವಿಗೆ ಗೋವಿಂದ ಬಾಬು ಪೂಜಾರಿ ಮಾರು ಹೋಗಿದ್ದರು. ಟಿಕೆಟ್ ಸಿಗುತ್ತದೆ ಎಂಬ ಆಸೆಯಿಂದ ಕೇಳಿದಷ್ಟು ಹಣ ಕೊಟ್ಟಿದ್ದರು.
ಹೀಗೆ 4 ಕೋಟಿ ರೂಪಾಯಿಗಳಷ್ಟು ಹಣವನ್ನು ಚೈತ್ರಾ ಪೀಕಿದ್ದಾಳೆ. ಯಾವಾಗ ಟಿಕೆಟ್ ಕೈತಪ್ಪಿತೋ ಆಗ ಬಾಬು ಪೂಜಾರಿಗೆ ಜ್ಞಾನೋದಯವಾಗಿದೆ. ಕೊಟ್ಟ ಹಣ ವಾಪಸ್ಸು ನೀಡುವಂತೆ ಒತ್ತಾಯಿಸಿದ್ದಾರೆ. ಚೈತ್ರಾ ಕೈ ಎತ್ತಿದ್ದಾಳೆ. ಗೋವಿಂದ ಬಾಬು ಪೂಜಾರಿ ದೂರು ದಾಖಲಿಸಿದ್ದು, ತನಿಖೆ ನಡೆಸಿದ ಸಿಸಿಬಿ ಪೊಲೀಸರು ಚೈತ್ರಾಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Chaithra Kundapura: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ; ಚೈತ್ರಾ ಕುಂದಾಪುರ ಸಿಸಿಬಿ ವಶಕ್ಕೆ