ಉಡುಪಿ: ಯಾವ ಕಾರಣಕ್ಕೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ (Udupi Chikkamagaluru Constituency) ಕಾಂಗ್ರೆಸ್ ಟಿಕೆಟನ್ನು ಅವರಿಗೆ ಕೊಡಬಾರದು ಎಂಬ ಗೋಬ್ಯಾಕ್ ಅಭಿಯಾನದ ನಡುವೆಯೇ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ (Jayaprakash Hegde) ಹೆಗ್ಡೆ ಅವರು ಮಂಗಳವಾರ ಕಾಂಗ್ರೆಸ್ ಪಕ್ಷವನ್ನು (Jayaprakash Hegde to Join Congress) ಸೇರಲಿದ್ದಾರೆ. ಅವರಿಗೆ ಲೋಕಸಭಾ ಚುನಾವಣಾ (Parliament Election) ಟಿಕೆಟ್ ಪಕ್ಕಾ ಎಂದು ಹೇಳಲಾಗುತ್ತಿದೆ.
ಆರಂಭದಲ್ಲಿ ಪಕ್ಷೇತರರಾಗಿ, ನಂತರ ಜನತಾದಳದಲ್ಲಿ ಗುರುತಿಸಿಕೊಂಡು ಮುಂದೆ ಕಾಂಗ್ರೆಸ್ ಸೇರಿ, 2017ರಲ್ಲಿ ಬಿಜೆಪಿಯ ಜತೆ ಕೈಜೋಡಿಸಿದ್ದ ಜಯಪ್ರಕಾಶ್ ಹೆಗ್ಡೆ(Jayaprakash Hegde) ಅವರ ಘರ್ ವಾಪ್ಸಿ ಕಾರ್ಯಕ್ರಮ ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ. ಈ ನಡುವೆ ಕರಾವಳಿ ಅಭಿವೃದ್ಧಿಯ ಗುರಿ ಸಾಧನೆಗೆ ಕಾಂಗ್ರೆಸ್ ಸೇರುತ್ತಿರುವುದಾಗಿ ಜಯಪ್ರಕಾಶ್ ಹೆಗ್ಡೆ ಅವರೇ ದೃಢಪಡಿಸಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಾತಿಗಣತಿ ವರದಿಯನ್ನು ಸಲ್ಲಿಸಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಮರಳಿ ಕಾಂಗ್ರೆಸ್ ತೆಕ್ಕೆಗೆ ಸೆಳೆಯಲು ಹಿಂದಿನಿಂದಲೇ ಭಾರಿ ಪ್ರಯತ್ನಗಳು ನಡೆಯುತ್ತಿದ್ದವು. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಈಗ ಚುನಾವಣಾ ಟಿಕೆಟ್ ನೀಡಬೇಕಾಗಿರುವುದರಿಂದ ಪಕ್ಷ ಸೇರಲಿದ್ದಾರೆ. ಆದರೆ, ಅವರಿಗೆ ಟಿಕೆಟ್ ನೀಡಬಾರದು, ಆಗಾಗ ಪಕ್ಷ ಬದಲಿಸುವ ಹೆಗ್ಡೆಯವರಿಗಿಂತ ಪಕ್ಷ ನಿಷ್ಠೆಯಿಂದ ದುಡಿಯುವ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಟಿಕೆಟ್ ನೀಡಬೇಕು ಎಂಬ ಆಗ್ರಹ ಕ್ಷೇತ್ರದಲ್ಲಿ ಜೋರಾಗಿದೆ. ಹೀಗಾಗಿಯೇ ಗೋಬ್ಯಾಕ್ ಹೆಗ್ಡೆ ಅಭಿಯಾನವನ್ನು ಬಹಿರಂಗವಾಗಿಯೇ ನಡೆಸಲಾಗುತ್ತಿದೆ.
Jayaprakash Hegde: ಪಕ್ಷೇತರ, ಜನತಾದಳ, ಕಾಂಗ್ರೆಸ್: ಹೇಗೆ ಸ್ಪರ್ಧಿಸಿದರೂ ಗೆಲುವೆ!
ಕೊರ್ಗಿ ಜಯಪ್ರಕಾಶ್ ಹೆಗ್ಡೆ ಅವರು ಒಂದು ರೀತಿಯಲ್ಲಿ ಪಕ್ಷಾತೀತ ನಾಯಕ. ಅವರು ಪಕ್ಷೇತರರಾಗಿಯೂ ಗೆಲ್ಲಬಲ್ಲ ತಾಕತ್ತನ್ನು ತೋರಿಸಿದವರು. ಜನತಾದಳ, ಕಾಂಗ್ರೆಸ್, ಬಿಜೆಪಿ ಎಲ್ಲ ಪಕ್ಷಗಳಲ್ಲೂ ಸೇವೆ ಸಲ್ಲಿಸಿದವರು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರ್ಗಿಯಲ್ಲಿ 1952ರಲ್ಲಿ ಜನಿಸಿದ ಜಯಪ್ರಕಾಶ್ ಹೆಗ್ಡೆ ಅವರು ವೃತ್ತಿಯಲ್ಲಿ ವಕೀಲರು. 1994ರಲ್ಲಿ ಜನತಾಳದಿಂದ ಬ್ರಹ್ಮಾವರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿ ಶಾಸಕರಾಗಿದ್ದಾರೆ.
ಮುಂದೆ 1999 ಮತ್ತು 2004ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬ್ರಹ್ಮಾವರ ಕ್ಷೇತ್ರದ ಶಾಸಕರಾಗಿ ಗೆದ್ದು ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಬಂದರು ಮತ್ತು ಮೀನುಗಾರಿಕೆ ಖಾತೆಯನ್ನು ನಿರ್ವಹಿಸಿದ್ದಾರೆ. ಅವರು 1994ರಲ್ಲಿ ಗೆದ್ದಾಗ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಅವರ ಹೋರಾಟದಿಂದಾಗಿಯೇ 1997ರಲ್ಲಿ ಉಡುಪಿ ಹೊಸ ಜಿಲ್ಲೆಯಾಗಿ ರೂಪುಗೊಂಡಿತು.
2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ಕಾರಣದಿಂದ ಬ್ರಹ್ಮಾವರ ಕ್ಷೇತ್ರ ಕಣ್ಮರೆಯಾಯಿತು. ಹೀಗಾಗಿ ಜಯಪ್ರಕಾಶ್ ಹೆಗ್ಡೆ ಅವರು ಸ್ವಲ್ಪ ಅತಂತ್ರರಾದರು. ಆಗ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸಲಾಯಿತು. ಕೊನೆಗೂ ಅವರು 2012ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
2012ರಲ್ಲಿ ರಾಜ್ಯ ಬಿಜೆಪಿ ಸರ್ಕಾರದಲ್ಲಿ ವಿಪ್ಲವಗಳು ಸಂಭವಿಸಿ ಡಿ.ವಿ. ಸದಾನಂದ ಗೌಡ ಅವರನ್ನು ಮುಖ್ಯಮಂತ್ರಿ ಮಾಡಿದಾಗ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಆಗ ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕಿಳಿಸಿತು. ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿ ಅಭ್ಯರ್ಥಿ ವಿ ಸುನಿಲ್ ಕುಮಾರ್ ಅವರ ಎದುರು 45 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಆದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿಯ ಶೋಭಾ ಕರಂದ್ಲಾಜೆ ವಿರುದ್ಧ ಸೋಲನುಭವಿಸಿದರು.
ಇದನ್ನೂ ಓದಿ : Lok Sabha Election 2024: ಮುರೊಳ್ಳಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಹೆಚ್ಚಿದ ಒತ್ತಡ; ಹೆಗ್ಡೆ ವಿರುದ್ಧ ಗೋ ಬ್ಯಾಕ್ ಅಭಿಯಾನ
ವಿಧಾನ ಪರಿಷತ್ ಚುನಾವಣೆಯ ಭುಗಿಲು
2015ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆದಿತ್ತು. ಆಗ ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ನೀಡಿ ಗೆಲ್ಲಿಸಬೇಕು ಎನ್ನುವುದು ಹೆಚ್ಚಿನವರ ಕೂಗಾಗಿತ್ತು. ಆದರೆ, ಆಗ ಪ್ರಭಾವಿಯಾಗಿದ್ದ ಆಸ್ಕರ್ ಫರ್ನಾಂಡಿಸ್ ಮತ್ತಿತರರು ಅವಕಾಶ ನಿರಾಕರಿಸಿದ್ದರು. ಇದರಿಂದ ಕೆರಳಿದ ಜಯಪ್ರಕಾಶ್ ಹೆಗ್ಡೆ ಅವರು ಪಕ್ಷೇತರರಾಗಿ ಕಣಕ್ಕಿಳಿದರು. ಅವರು ಚುನಾವಣೆಯಲ್ಲಿ ಗೆಲ್ಲಲಿಲ್ಲವಾದರೂ ಅರ್ಧಕ್ಕಿಂತ ಹೆಚ್ಚು ಮಂದಿ ಸ್ಥಳೀಯ ಸಂಸ್ಥೆಗಳ ಸದಸ್ಯರು ಜಯಪ್ರಕಾಶ್ ಹೆಗ್ಡೆ ಅವರನ್ನು ಬೆಂಬಲಿಸಿದ್ದರು. ಈ ನಡುವೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಗಮನಿಸಬೇಕಾದ ಅಂಶವೆಂದರೆ ಅವರ ನಿರ್ಗಮನದ ಬಳಿಕ ಕಾಂಗ್ರೆಸ್ ಕರಾವಳಿಯಲ್ಲಿ ಗೆಲುವು ಸಾಧಿಸಿಲ್ಲ.
ಮುಂದೆ ಭಾರತೀಯ ಜನತಾಪಕ್ಷವನ್ನು ಸೇರಿದ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಬಿಜೆಪಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಇತ್ತೀಚೆಗಷ್ಟೇ ಆಯೋಗದ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರು ಸ್ವೀಕರಿಸಿದ್ದಾರೆ.
ಇದೀಗ ಅವರು ಮರಳಿ ಕಾಂಗ್ರೆಸ್ ಸೇರಲಿದ್ದಾರೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಿಚಾರದಲ್ಲಿ ದೊಡ್ಡ ಒಳಜಗಳ ಸೃಷ್ಟಿಯಾಗಿದೆ. ಅದರ ಲಾಭವನ್ನು ಪಡೆಯಲು ಹವಣಿಸಿ ಕಾಂಗ್ರೆಸ್ ಕೆ.ಜಯಪ್ರಕಾಶ್ ಹೆಗ್ಡೆ ಅವರ ಪಕ್ಷಾತೀತ ಜನಪ್ರಿಯತೆಯನ್ನು ಬಳಸಿಕೊಳ್ಳಲು ಮುಂದಾಗಿದೆ. ಆದರೆ, ಅದಕ್ಕೆ ಕಾಂಗ್ರೆಸ್ ಪಕ್ಷದೊಳಗೂ ವಿರೋಧವಿದೆ. ಇದನ್ನು ಕಾಂಗ್ರೆಸ್ ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕಾಗಿದೆ.