ಕುಂದಾಪುರ: ಶಿಲ್ಪಾ ದೇವಾಡಿಗ ಎಂಬ ಯುವತಿ ಲವ್ ಜಿಹಾದ್ ಬಲೆಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಕಾರ್ಯಕರ್ತರು ಮಂಗಳವಾರ ಸಂಜೆ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿಯ ಶಾಸ್ತ್ರಿ ಸರ್ಕಲ್ ಮುಂಭಾಗದಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಸಿ, ಈ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.
ಸಂತ್ರಸ್ತ ಕುಟುಂಬಕ್ಕೆ ಸರಕಾರ 10 ಲಕ್ಷ ರೂ. ಪರಿಹಾರ ನೀಡಬೇಕು. ಲವ್ ಜಿಹಾದ್ ಬಲೆಯಲ್ಲಿ ಸಿಲುಕಿಸಿ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಆರೋಪಿಗಳಿಗೆ ಮರಣದಂಡನೆ ಆಗುವಂತೆ ಮಾಡಬೇಕು ಎಂದು ಹಿಂದೂ ಸಂಘಟನೆಗಳ ಪ್ರಮುಖರು ಒತ್ತಾಯಿಸಿದರು. ಆರೋಪಿ ಅಜೀಜ್ ನ ಪತ್ನಿ ಸಲ್ಮಾಳನ್ನೂ ಬಂಧಿಸಬೇಕು ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ”ಕರಾವಳಿಯ ಭಾಗದಲ್ಲಿ ಲವ್ ಜಿಹಾದ್ ಗೆ ಹೆಣ್ಮಕ್ಕಳ ಬಲಿ ಹೆಚ್ಚುತ್ತಿದೆ. ಹಿಂದೂ ಸಮಾಜ ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ. ನಮ್ಮ ಕುಟುಂಬವನ್ನು ಲವ್ ಜಿಹಾದ್ ಭೂತ ಸೇರುವ ಮೊದಲೇ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ” ಎಂದು ಕರೆ ನೀಡಿದರು.
”ಕೇರಳ, ಕಾಶ್ಮೀರ, ಉಳ್ಳಾಲದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಅಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕುಂದಾಪುರದಲ್ಲೂ ಈ ಪರಿಸ್ಥಿತಿ ಬರದಂತೆ ಹಿಂದೂಗಳು ಈಗಲೇ ಜಾಗೃತಗೊಳ್ಳಬೇಕು” ಎಂದು ಶರಣ್ ಹೇಳಿದರು.
”ಕೇವಲ ಸಂಘ ಪರಿವಾರದವರು ಪ್ರತಿಭಟನೆಗಳನ್ನು ಮಾಡಿದರೆ ಸಾಲದು. ಇಡೀ ಹಿಂದೂ ಸಮಾಜ ಎದ್ದು ನಿಲ್ಲಬೇಕು. ಇನ್ನು ಮುಂದೆಂದೂ ಹಿಂದೂ ಯುವತಿಯರ ಮೇಲೆ ದೌರ್ಜನ್ಯ ಆಗದಂತೆ ಎಚ್ಚರಗೊಳ್ಳಬೇಕು” ಎಂದವರು ಹೇಳಿದರು.
”ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂ ಯುವತಿಯರನ್ನು ಸೆಳೆದು ಮೋಸ ಮಾಡಲಾಗುತ್ತಿದೆ. ಯುವತಿಯರು ಈ ಬಗ್ಗೆ ಎಚ್ಚರಗೊಳ್ಳಬೇಕು. ಲವ್ ಜಿಹಾದ್ ಮತ್ತು ಗೋ ಹತ್ಯೆ ತಡೆಯಲು ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು” ಎಂದರು.
”ಹಿಜಾಬ್ ವಿಷಯದಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ಕೊಟ್ಟಿದೆ. ಇದೇ ರೀತಿ ವ್ಯವಸ್ಥಿತವಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆದರೆ ಕುಂದಾಪುರದಲ್ಲೂ ಆರ್ಥಿಕ ಬಹಿಷ್ಕಾರ ಮಾಡಬೇಕಾದೀತು. ಹಿಂದೂ ಸಮಾಜಕ್ಕೆ ದ್ರೋಹ ಬಗೆದರೆ ಹಿಂದೂ ಸಮಾಜ ಉತ್ತರ ಕೊಡುತ್ತದೆ” ಎಂದವರು ಎಚ್ಚರಿಕೆ ನೀಡಿದರು.
ಬೃಹತ್ ಪ್ರತಿಭಟನಾ ಸಭೆಯಲ್ಲಿ ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ ಆರ್ ಮತ್ತಿತರರು ಭಾಗಿಯಾಗಿದ್ದರು.
ಇದನ್ನೂ ಓದಿ: LOVE JIHAD | ಶಿಲ್ಪಾ ದೇವಾಡಿಗ ಸಾವಿನ ಆರೋಪದಲ್ಲಿ ನಾಲ್ವರ ಬಂಧನ