ಉಡುಪಿ: ಉಡುಪಿ ಶ್ರೀ ಪೇಜಾವರ ಮಠದ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ಶ್ರೀಗಳು ಹಲಸಿನ ಮರ ಏರಿ ಹಲಸಿನ ಹಣ್ಣುಗಳನ್ನು ಉದುರಿಸಿದ ಫೋಟೋ ಹಾಗೂ ವಿಡಿಯೋಗಳು ಇದೀಗ ವೈರಲ್ ಆಗಿವೆ.
ಉಡುಪಿ ಶ್ರೀಮಠದ ಸಮೀಪವಿರುವ ಗೋಶಾಲೆಗೆ ಅವರು ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಗೋಶಾಲೆಯಲ್ಲಿದ್ದ ಹಲಸಿನ ಮರದಲ್ಲಿ ಸಾಕಷ್ಟು ಹಲಸು ಇರುವುದನ್ನು ಗಮನಿಸಿದ ವಿಶ್ವಪ್ರಸನ್ನ ಸ್ವಾಮೀಜಿ ಸ್ವತಃ ತಾವೇ ಚಕಚಕನೆ ಮರವೇರಿ ಹಲಸಿನ ಹಣ್ಣುಗಳನ್ನು ನೆಲಕ್ಕುರುಳಿಸಿದರು. ನಂತರ ಹಲಸಿನ ಹಣ್ಣುಗಳನ್ನು ಬಿಡಿಸಿ ಗೋವುಗಳಿಗೆ ನೀಡಿ ಆನಂದ ಪಟ್ಟರು ಎಂದು ತಿಳಿದುಬಂದಿದೆ.
ಸದ್ಯ ಶ್ರೀಗಳು ಮರವೇರಿದ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ವಿಶ್ವಪ್ರಸನ್ನ ಶ್ರೀಗಳು ನಿತ್ಯ ಯೋಗಾಭ್ಯಾಸದ ಮೂಲಕ ದೇಹವನ್ನು ಚುರುಕಾಗಿ ಇಟ್ಟುಕೊಂಡಿದ್ದಾರೆ. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಕೆಲ ವರ್ಷಗಳ ಹಿಂದೆ ಬ್ರಹ್ಮಾವರ ತಾಲೂಕಿನ ನೀಲಾವರ ಗೋಶಾಲೆಯ ಆವರಣದಲ್ಲಿ ಹಾವಿನ ಮರಿಯೊಂದು ಕಾಣಿಸಿಕೊಂಡಿತ್ತು. ಈ ವೇಳೆ ಹಾವನ್ನು ಸರಳವಾಗಿ ಹಿಡಿಯುವ ವಿಧಾನ ವಿವರಿಸಿ, ಪ್ರಾತ್ಯಕ್ಷಿಕೆ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಉಡುಪಿಯ ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಈಜುವಿಕೆ ಸೇರಿದಂತೆ ಹಲವು ದೈಹಿಕ ವ್ಯಾಯಾಮಗಳನ್ನು ಸಲೀಸಾಗಿ ಮಾಡಬಲ್ಲವರಾಗಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇದನ್ನೂ ಓದಿ: Karnataka Cabinet: ಡಾ.ಜಿ. ಪರಮೇಶ್ವರ್ ಮನೆಗೆ ಪೇಜಾವರ ಶ್ರೀ ಭೇಟಿ: ಬಜರಂಗದಳ ನಿಷೇಧ ಇಲ್ಲ ಎಂದ ಸಚಿವ