Site icon Vistara News

Prajadhwani : ಕರಾವಳಿಯಲ್ಲಿ ಶಿಕ್ಷಣಕ್ಕೆ ಮಕ್ಕಳನ್ನು ಕಳಿಸಲು ಪೋಷಕರು ಹೆದರುತ್ತಾರೆ : ಡಿ.ಕೆ. ಶಿವಕುಮಾರ್‌ ಹೇಳಿಕೆ

prajadhwani many parents fearing admitting their kins to coastal educational institutions

ಉಡುಪಿ: ಕರಾವಳಿಯಲ್ಲಿ ಬಿಜೆಪಿಯು ಕೋಮು ವಿಷಬೀಜ ಬಿತ್ತುತ್ತಿದ್ದು, ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಕಳಿಸಲು ಪೋಷಕರು ಹೆದರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಉಡುಪಿಯಲ್ಲಿ ಆಯೋಜನೆಯಾಗಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಶಿವಕುಮಾರ್‌, ನಾನು ದಕ್ಷಿಣ ಕನ್ನಡದ ಕಾರ್ಯಕರ್ತರಿಗೆ ವಿಶೇಷ ಧನ್ಯವಾದ ಅರ್ಪಿಸುತ್ತೇನೆ. ಕಾರಣ, ಈ ಭಾಗದಲ್ಲಿ ಪಕ್ಷವನ್ನು ಸಂಘಟಿಸಲು ಮೊದಲ ಬಾರಿಗೆ ಶಾಸಕರಾದ ಪ್ರಮೋದ್ ಮಧ್ವರಾಜ್ ಅವರಿಗೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಲಾಗಿತ್ತು. ಆದರೂ ಅವರು ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ಆದರೆ ಅವರ ಜತೆ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತರು ಹೋಗಿಲ್ಲ. ಹೀಗಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದರು.

ತಂದೆ, ತಾಯಿ ಹಾಗೂ ಮಗನಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡಿತ್ತು. ಇದಕ್ಕಿಂತ ಹೆಚ್ಚಿನದನ್ನು ಕಾಂಗ್ರೆಸ್ ಏನು ನೀಡಲು ಸಾಧ್ಯ? 2023ರ ಚುನಾವಣೆಯಲ್ಲಿ ಆತ ಯಾವುದೇ ಪಕ್ಷದಿಂದ ನಿಂತರೂ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಿ, ಆತನನ್ನು ಸೋಲಿಸುವ ಕೆಲಸ ಮಾಡಬೇಕು. ಆತ ನಮ್ಮ ಪಕ್ಷದಲ್ಲಿದ್ದಾಗ ವೇದಿಕೆ ಮೇಲೆ ಕೂರುತ್ತಿದ್ದರು. ಈಗ ಬಿಜೆಪಿಗೆ ಹೋಗಿ ಕೆಳಗೆ ಕೂರುವ ಸ್ಥಿತಿ ಬಂದಿದೆ.

ಈ ಜಿಲ್ಲೆಯಲ್ಲಿ ನಾವು ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುತ್ತಿದ್ದೆವು. ಆದರೆ ಈಗ ಎರಡೂ ಜಿಲ್ಲೆಗಳಲ್ಲಿ ಕೇವಲ ಓರ್ವ ಶಾಸಕರು ಮಾತ್ರ ಇದ್ದಾರೆ. ಈ ವಿಚಾರಕ್ಕೆ ನಮ್ಮ ಮನಸಿಗೆ ನೋವಿದೆ. ನಾವು ನುಡಿದಂತೆ ನಡೆದಿದ್ದೇವೆ. ಉದ್ಯೋಗ ಸೃಷ್ಟಿಗೆ ಖಾಸಗಿಕರಣ ಬಿಟ್ಟು ರಾಷ್ಟ್ರೀಕರಣ ಮಾಡಿ ಎಲ್ಲ ಸಂಘ ಸಂಸ್ಥೆಗಳನ್ನು ನಿರ್ಮಾಣ ಮಾಡಿದ್ದರು. ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ.

ಆಸ್ಕರ್ ಫರ್ನಾಂಡೀಸ್ ಅವರು ಈ ಭಾಗದಲ್ಲಿ ಒಂದು ಕಾರ್ಖಾನೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದರು. ನಾನು ಸಹಕಾರ ಸಚಿವನಾಗಿದ್ದಾಗ ಸಹಾಯ ಮಾಡಿದ್ದೆ. ಈಗ ಎಲ್ಲವನ್ನು ಮಾರಿಕೊಂಡು ಸ್ಕ್ರಾಪ್ ಮಾರಲು ಮುಂದಾಗಿದ್ದಾರಂತೆ. ಎಲ್ಲೆಡೆ ಅರ್ಜಿ ಹಾಕುವ ನಿರಾಣಿ ಅವರು ಇಲ್ಲಿಗೆ ಯಾಕೋ ಅರ್ಜಿ ಹಾಕಿಲ್ಲ. ಇದು ಬಿಜೆಪಿಯ ವ್ಯವಹಾರ.

ಇದನ್ನೂ ಓದಿ | ಪ್ರಮೋದ್ ಮಧ್ವರಾಜ್ ಮೇಲೆ ಡಿಕೆಶಿ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು ಎಂದ ಧ್ರುವನಾರಾಯಣ್‌

ನನಗೆ ಈ ಭಾಗದ ಅನೇಕ ಶಿಕ್ಷಣ ಸಂಸ್ಥೆಗಳ ಸ್ನೇಹಿತರಿದ್ದಾರೆ. ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಹೊರ ರಾಜ್ಯ, ದೇಶಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದರು. ಆದರೆ ಕೋಮುಗಲಭೆ ವಿಷ ಬೀಜ ಬಿತ್ತುತ್ತಿರುವುದನ್ನು ನೋಡಿ ಹೆಚ್ಚಿನ ಜನ ಇಲ್ಲಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿಲ್ಲ.

ಈ ಸರ್ಕಾರದ ಆಡಳಿತದಲ್ಲಿ ಅಮಾಯಕ ಅಲ್ಪಸಂಖ್ಯಾತರು, ಬಿಜೆಪಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಕೊಲೆಯಾಗಿದ್ದಾರೆ, ಇಲ್ಲಿ ಕೇವಲ ಅಮಾಯಕರು ಮಾತ್ರ ಬಲಿಯಾಗುತ್ತಿದ್ದು, ಬಿಜೆಪಿ ನಾಯಕರ ಮಕ್ಕಳು ಯಾಕೆ ಪಕ್ಷ ಸಂಘಟನೆ ಮಾಡಲು ತ್ರಿಶೂಲ, ದೊಣ್ಣೆ ಹಿಡಿದು ಮುಂದೆ ಬರುತ್ತಿಲ್ಲ? ಕೇವಲ ಬಡವರ ಮಕ್ಕಳನ್ನು ಮಾತ್ರ ಬಲಿ ಕೊಡುತ್ತಿದ್ದಾರೆ ಎಂದರು.

Exit mobile version