Site icon Vistara News

Rama Mandir : ರಾಮಲಲ್ಲಾನ ಯಾವ ವಿಗ್ರಹ ವಿಗ್ರಹ‌ ಪ್ರತಿಷ್ಠಾಪನೆ?; ಜ. 17ರಂದು ಘೋಷಣೆ

Rama mandir statue Arun Yogiraj and Pejavara seer

ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ (Rama Mandir) ಜನವರಿ 22ರಂದು ಪ್ರಾಣಪ್ರತಿಷ್ಠೆ ನಡೆಯಲಿರುವ ಶ್ರೀ ರಾಮಲಲ್ಲಾನ ಮೂರ್ತಿ (Statue of Rama lalla) ಯಾವುದು ಎಂದು ಜನವರಿ 17ಕ್ಕೆ ಘೋಷಣೆಯಾಗಲಿದೆ ಎಂದು ಪೇಜಾವರ ಮಠದ (Pejavar matt) ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ. ಮೈಸೂರಿನ ಅರುಣ್‌ ಯೋಗಿರಾಜ್‌ (Arun Yogiraj), ಬೆಂಗಳೂರಿನ ಜಿ.ಎಲ್‌ ಭಟ್‌ ಮತ್ತು ರಾಜಸ್ಥಾನದ ಶಿಲ್ಪಿಯೊಬ್ಬರು ಕೆತ್ತಿದ ಮೂರು ಸುಂದರ ಮೂರ್ತಿಗಳು ಸ್ಪರ್ಧೆಯಲ್ಲಿದ್ದು, ಅದರಲ್ಲಿ ಯಾವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದು ಜನವರಿ 17ರಂದು ತಿಳಿಯಲಿದೆ ಎಂದು ಅವರು ಹೇಳಿದರು. ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ತಯಾರಿಸಿದ ಮೂರ್ತಿ ಆಯ್ಕೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಂತಿಮ ಘೋಷಣೆ ಆಗಿಲ್ಲ.

ಅಯೋಧ್ಯೆಯಲ್ಲಿ ಮೆರವಣಿಗೆ ನಡೆಯುವ ದಿನ, ಸರಯೂ ನದಿಯ ಅಭಿಷೇಕದ ದಿನ ಮತ್ತು ಯಾವ ರಾಮಲಲ್ಲಾನ ವಿಗ್ರಹ ಯಾವುದೆಂದು ಜನವರಿ 17ರಂದು ಬಹಿರಂಗ ಆಗುತ್ತದೆ. ಟ್ರಸ್ಟಿಗಳು ಎಲ್ಲರೂ ವೋಟ್ ಮಾಡಿದ್ದೇವೆ. ಎಲ್ಲವನ್ನೂ ಪೂರ್ಣ ಪರಿಶೀಲಿಸಿ ಅಂತಿಮವಾಗಿ ನಿರ್ಧಾರವಾಗುತ್ತದೆ ಎಂದು ಶ್ರೀಗಳು ಹೇಳಿದರು.
ʻʻಮೂವರು ಶಿಲ್ಪಿಗಳು ತಯಾರಿಸಿದ ಮೂರೂ ವಿಗ್ರಹಗಳು ಸುಂದರವಾಗಿವೆ. ಎರಡು ಕರಿ, ಒಂದು ಅಮೃತಶಿಲೆ ಮೂರ್ತಿ ನಿರ್ಮಾಣ ಆಗಿದೆʼʼ ಎಂದು ಉಡುಪಿಯಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಎಲ್ಲ ಭಕ್ತರಿಗೂ ಆಮಂತ್ರಣವಿದೆ ಎಂದ ಪೇಜಾವರ ಶ್ರೀಗಳು

ರಾಮಮಂದಿರದ ಲೋಕಾರ್ಪಣೆಯ ಆಹ್ವಾನ ಪತ್ರಿಕೆಯನ್ನು ಕೆಲವರಿಗೆ ನೀಡಿಲ್ಲ, ಕೆಲವರಿಗಷ್ಟೇ ನೀಡಲಾಗಿದೆ ಎಂಬ ಆಪಾದನೆಗಳ ಬಗ್ಗೆ ಮಾತನಾಡಿದ ಅವರು, ದೇಶದಲ್ಲಿ ರಾಮನ ಭಕ್ತರು, ಸಂತರು, ಮಹಂತರು ಬಹಳ ಮಂದಿ ಇದ್ದಾರೆ. ಜನಪ್ರತಿನಿಧಿಗಳು, ದಾನಿಗಳು, ಭಕ್ತರೆಲ್ಲರೂ ಆಮಂತ್ರಿತರೇ ಆಗಿದ್ದಾರೆ. ಪ್ರಾಣಪ್ರತಿಷ್ಠೆಗೆ ಪ್ರಾತಿನಿಧ್ಯ ಇಟ್ಟುಕೊಂಡು ಆಯ್ಕೆ ಮಾಡಲಾಗಿದೆ, ಸೀಮಿತ ಸ್ಥಳ ಇರೋದರಿಂದ ಎಲ್ಲರೂ ಭಾಗಿಯಾಗೋದು ಕಷ್ಟ. ಪ್ರತಿಷ್ಠಾಪನೆ ನಂತರ ಕೋಟ್ಯಾಂತರ ಭಕ್ತರು ಬಾಲರಾಮನ ದರ್ಶನಕ್ಕೆ ಅವಕಾಶ ಇದೆ ಎಂದು ಸ್ವಾಮೀಜಿ ತಿಳಿಸಿದರು.

ʻʻನಾಡಿದ್ದು ಮೈದಾನದಲ್ಲಿ ಕಾರ್ಯಕ್ರಮ ಮಾಡಲು ಸಾದ್ಯವಿಲ್ಲ. ಮಂದಿರದ ಸ್ಥಳಾವಕಾಶ ಬಹಳ ಸೀಮಿತವಾಗಿದೆ. ಭಕ್ತರು ಯಾರೂ ತಪ್ಪು ತಿಳಿಯಬಾರದು. ಆಹ್ವಾನ ಇದ್ದವರು ಖಂಡಿತಾ ಭಾಗಿಯಾಗಬೇಕು. ಉಳಿದೆಲ್ಲರು ಮುಂದಿನ ದಿನದಲ್ಲಿ ಅಯೋಧ್ಯೆಗೆ ಬರಬೇಕುʼʼ ಎಂದು ಹೇಳಿದ ಅವರು, ʻʻಅಯೋಧ್ಯೆಯಲ್ಲಿ ಅನೇಕ ಟೆಂಟ್, ಶೆಡ್ ತಯಾರಾಗಿದೆ. ಧನುರ್ಮಾಸ ಇರೋದರಿಂದ ಹೊರಗೆ ಮಲಗಲು ಸಾಧ್ಯವಿಲ್ಲ. ಹಾಗಾಗಿ ಬರುವವರು ತುಂಬ ಯೋಚಿಸಿ ಬರಬೇಕಾಗುತ್ತದೆʼʼ ಎಂದರು.

ಅಯೋಧ್ಯೆಯಲ್ಲಿ ಇರುವುದು ಬಿಜೆಪಿ ರಾಮ ಮಂದಿರ ಎಂಬ ಮಾಜಿ ಸಚಿವ ಆಂಜನೇಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻರಾಮ ಬೇರೆಯಲ್ಲ ಕೃಷ್ಣ ಬೇರೆಯಲ್ಲ. ದೇವರು ಮಂದಿರದಲ್ಲಿ ಮಾತ್ರವಲ್ಲ, ಎಲ್ಲರೊಳಗೂ ಇದ್ದಾನೆ. ಸಿದ್ದರಾಮಯ್ಯನೊಳಗೂ ಇದ್ದಾನೆʼʼ ಎಂದು ಹೇಳಿದರು.

ʻʻಬಿಜೆಪಿ ಮಂದಿರವೆಂದು ಯಾಕೆ ಹಾಗೆ ಅಂದುಕೊಳ್ಳಬೇಕು? ನಾವು ಭಾರತೀಯರು. ಈ ಮಂದಿರ ಎಲ್ಲರದ್ದು ಕೂಡಾ. ಇದಕ್ಕೆ ಬಿಜೆಪಿಯವರು ಮಾತ್ರ ದೇಣಿಗೆ ಕೊಟ್ಟದ್ದಾ? ಇದು ಪಕ್ಷದ, ಸರಕಾರದ ದೇಣಿಗೆಯಿಂದ ಮಂದಿರ ಕಟ್ಟಿದ್ದಲ್ಲ. ಜಗತ್ತಿನ ಭಕ್ತರ ದೇಣಿಗೆಯಿಂದ ಕಾರ್ಯಕ್ರಮ ನಡೆಯುತ್ತಿದೆʼʼ ಎಂದು ರಾಜ ಜನ್ಮಭೂಮಿ ಸಮಿತಿಯ ಟ್ರಸ್ಟಿಯಾಗಿರುವ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

31 ವರ್ಷಗಳ ಹಿಂದೆ ನಡೆದ ಹುಬ್ಬಳ್ಳಿ ಗಲಭೆಯ ಪ್ರಕರಣಕ್ಕೆ ಮರು ಜೀವ ನೀಡಿ, ಕೆಲವರನ್ನು ಬಂದಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರ ಶ್ರೀಗಳು, ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಂದು ನಡೆದ ಘಟನೆಯ ಕರಸೇವಕರ ಬಂಧನ ಮಾಡಲಾಗಿದೆ. ಇದು ಹಿಂದೂಗಳನ್ನು ಮಟ್ಟ ಹಾಕುವ ಪ್ರಯತ್ನವೆಂದು ನಾವು ಭಾವಿಸುತ್ತೇವೆ. ಈ ಸಮಯದಲ್ಲಿ ಈ ಬೆಳವಣಿಗೆ ಯಾಕೆ? ಈ ಬೆಳವಣಿಗೆ ಕೋಲಾಹಲಕ್ಕೆ ಕಾರಣವಾಗುತ್ತದೆ. ಗೊಂದಲವಾಗದಂತೆ ಸರಕಾರ ಮುಂಜಾಗೃತೆ ವಹಿಸಬೇಕು ಎಂದು ಹೇಳಿದರು.

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಎನ್ನುವುದು ಜಾಗತಿಕ ಉತ್ಸವ. ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರು ಇದ್ದಾರೆ. ಎಲ್ಲರ ಭಾವನೆಯನ್ನು ಮನ್ನಿಸಿ ಗೌರವಿಸಿ ಸರ್ಕಾರಿ ರಜೆ ಘೋಷಿಸಿ ಎಂದು ಸ್ವಾಮಿ ಹೇಳಿದ್ದಾರೆ. ಈ ಮೂಲಕ ಉಡುಪಿ ಶಾಸಕ ಯಶಪಾಲ್‌ ಸುವರ್ಣ ಅವರು ಮಾಡಿದ ಮನವಿಯನ್ನು ಸಮರ್ಥಿಸಿದರು.

Exit mobile version