Site icon Vistara News

Udupi Murder: ಗಗನಸಖಿ ಅಯ್ನಾಜ್‌ ಕುಟುಂಬದ ಸಾಮೂಹಿಕ ಹತ್ಯೆಯ ನೈಜ ಕಾರಣ ಬಯಲು; ಇದು Chargesheet

Udupi murder Case inside story Chargesheet

ಉಡುಪಿ: ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು (Four of Family murdered) ಅತ್ಯಂತ ಬರ್ಬರವಾಗಿ ಚೂರಿಯಿಂದ ಇರಿದು ಕೊಲೆ (Udupi Murder) ಮಾಡಿದ ಘಟನೆಯ ಹಿಂದಿನ ನಿಜವಾದ ಕಾರಣ ಏನು ಎನ್ನುವುದು ಈಗ ಬಯಲಾಗಿದೆ. ಕೊಲೆಗಾರ ಪ್ರವೀಣ್‌ ಅರುಣ್‌ ಚೌಗುಲೆಗೆ (Praveen Arun Chougule) ತನ್ನ ಜತೆ ಕೆಲಸ ಮಾಡುತ್ತಿದ್ದ ಗಗನಸಖಿ ಅಯ್ನಾಜ್‌ (Airhostess Aynaz) ಬಗ್ಗೆ ಇದ್ದ ಪೊಸೆಸಿವ್‌ನೆಸ್‌ ಕಾರಣದಿಂದ ಕೊಲೆ ಮಾಡಲಾಗಿದೆ ಎಂದು ಹಿಂದಿನಿಂದಲೂ ಸ್ಪಷ್ಟವಿತ್ತು. ಆದರೆ, ಕೊಲೆ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಬರಲು ಇನ್ನೂ ಒಂದು ಬದಲಾದ ಕಾರಣವಿತ್ತು ಎನ್ನುವುದು ಜಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ. ಅದುವೇ ಕೊಲೆಯಾದ ಗಗನಸಖಿ ಅಯ್ನಾಜ್‌ ಮದುವೆ!

‌2023ರ ನವೆಂಬರ್‌ 12ರಂದು ಉಡುಪಿಯ ನೇಜಾರಿನಲ್ಲಿ ಈ ಕೊಲೆ ನಡೆದಿತ್ತು. ಭಾನುವಾರ ಮುಂಜಾನೆ ಪ್ರವೀಣ್‌ ಅರುಣ್‌ ಚೌಗುಲೆ ನೇಜಾರಿನ ತೃಪ್ತಿ ನಗರದಲ್ಲಿರುವ ನೂರ್‌ ಮಹಮ್ಮದ್‌ ಅವರ ಮನೆಗೆ ನುಗ್ಗಿ ನೂರ್‌ ಮಹಮದ್‌ ಎಂಬವರ ಪತ್ನಿ ಹಸೀನಾ (45), ಪುತ್ರಿಯರಾದ ಅಫ್ನಾನ್‌ (23), ಅಯ್ನಾಜ್‌ (21) ಮತ್ತು ಮಗ ಅಸೀಮ್‌ (14)ನನ್ನು ಕೊಂದು ಹಾಕಿದ್ದ.

ಕೊಲೆಯಾದವರಲ್ಲಿ ಒಬ್ಬಳಾದ ಅಯ್ನಾಜ್‌ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು, ಪ್ರವೀಣ್‌ ಅರುಣ್‌ ಚೌಗುಲೆ 2009ರಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಫ್ಲೈಟ್‌ ಅಟೆಂಡೆಂಟ್‌ ಆಗಿದ್ದ. ಒಂದೇ ಜಾಗದಲ್ಲಿ ಕೆಲಸ ಮಾಡುತ್ತಿದ್ದ ಪರಿಣಾಮವಾಗಿ ಚೌಗುಲೆ ಮತ್ತು ಅಯ್ನಾಜ್‌ ನಡುವೆ ಆತ್ಮೀಯತೆ ಬೆಳೆದಿತ್ತು. ಚೌಗುಲೆ ಕೆಲವೊಂದು ವಿಚಾರಗಳಲ್ಲಿ ಸಹಾಯ ಮಾಡುತ್ತಿದ್ದ ಪರಿಣಾಮವಾಗಿ ಅಯ್ನಾಜ್‌ ಕೂಡಾ ಆತನ ಮೇಲೆ ನಂಬಿಕೆ ಇಟ್ಟಿದ್ದಳು. ಆದರೆ, ಚೌಗುಲೆ ಮಾತ್ರ ಇದೆಲ್ಲವನ್ನೂ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿ ಪೊಸೆಸಿವ್‌ ನೆಸ್‌ ಬೆಳೆಸಿಕೊಂಡಿದ್ದ. ಅಂತಿಮವಾಗಿ ಆಕೆ ದೂರವಾಗುತ್ತಿದ್ದಾಳೆ ಎಂಬುದು ತಿಳಿಯುತ್ತಿದ್ದಂತೆಯೇ ಕೊಲೆ ಮಾಡಲು ನಿರ್ಧಾರ ಮಾಡಿದ್ದ.

Udupi Murder : ಅಯ್ನಾಜ್‌ ದೂರವಾಗಲು ಮೊದಲ ಕಾರಣ ಚೌಗುಲೆ ಪತ್ನಿ!

ನವೆಂಬರ್‌ 12ರಂದು ಕೊಲೆ ಮಾಡಿದ ಆತ ಅದಕ್ಕಿಂತ ಮೊದಲು ಹಲವಾರು ತಂತ್ರಗಳನ್ನು ಬಳಸಿದ್ದ. ಕೊಲೆ ಮಾಡಿದ ಬಳಿಕ ಸಿಕ್ಕಿ ಹಾಕಿಕೊಳ್ಳಬಾರದು ಎನ್ನುವ ಜಾಣ್ಮೆ ಪ್ರಯೋಗ ಮಾಡಿದ್ದ. ಅಂದರೆ ಆತ ಮಂಗಳೂರಿನಿಂದ ಹೊರಟು ಹೆಜಮಾಡಿ ಟೋಲ್ ಗೇಟ್ ವರೆಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ. ಟೋಲ್ ಗೇಟ್‌ನ ಸಿಸಿ ಕ್ಯಾಮೆರಾಕ್ಕೆ ಗೊತ್ತಾಗದಂತೆ ದೂರದಲ್ಲಿ ಎಲ್ಲೋ ವಾಹನ ಪಾರ್ಕ್‌ ಮಾಡಿ ಬೇರೆ ದಾರಿಯಲ್ಲಿ ಗೇಟ್‌ ದಾಟಿದ್ದ. ಅಲ್ಲಿಂದ ಉಡುಪಿಗೆ ಬಂದು ತೃಪ್ತಿ ನಗರಕ್ಕೆ ಬಂದಿದ್ದ.

ತೃಪ್ತಿ ನಗರದ ಮನೆಗೆ ಬಂದವನೇ ಮೊದಲು ಅಯ್ನಾಜ್‌ಗೆ ಚಾಕುವಿನಿಂದ ಇರಿದಿದ್ದಾನೆ. ಅಯ್ನಾಜ್‌ ಕೂಗು ಕೇಳಿ ಬಂದ ತಾಯಿಗೆ ಮತ್ತು ಅಕ್ಕ, ಅಫ್ನಾನ್‌ಗೆ ಚೂರಿಯಿಂದ ಇರಿದಿದ್ದ. ಬಳಿಕ ಮನೆಗೆ ಬಂದ ಅಸೀಮ್‌ಗೆ ಚೂರಿ ಹಾಕಿದ್ದಾನೆ. ಅಲ್ಲಿಂದ ಬೇರೆ ಬೇರೆ ಮಾರ್ಗವಾಗಿ ಮರಳಿ ಮಂಗಳೂರಿನ ಮನೆಗೆ ಹೋಗಿದ್ದ.

ಕೊಲೆಯ ಸಂದರ್ಭ ಧರಿಸಿದ್ದ ಬಟ್ಟೆಯನ್ನು ದಾರಿ ಮಧ್ಯೆ ಎಲ್ಲೋ ಸುಟ್ಟು ಹಾಕಿದ್ದ ಆತ ಕೃತ್ಯಕ್ಕೆ ಬಳಸಿದ್ದ ಮನೆಯ ಕಿಚನ್ ಚೂರಿಯನ್ನು ಮರಳಿ ಅಲ್ಲಿಯೇ ತಂದು ಇಟ್ಟಿದ್ದ! ಕೊಲೆಯ ಸಂದರ್ಭದಲ್ಲಿ ಅವನಿಗೂ ಗಾಯವಾಗಿತ್ತು. ಗಾಯದ ಕುರಿತು ಪತ್ನಿ ವಿಚಾರಿಸಿದಾಗ ಬೇರೆ ಸಬೂಬು ಹೇಳಿದ್ದ. ಮನೆಯಿಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಊರಿಗೆ ತೆರಳಿದ್ದ. ಪೊಲೀಸರಿಗೆ ಆರಂಭದಲ್ಲೇ ಆತನ ಮೇಲೆ ಸಂಶಯ ಬಂದಿತ್ತು. ಹೀಗಾಗಿ ಆತನ ಮೊಬೈಲ್‌ ಲೊಕೇಶನ್‌ ಬೆನ್ನು ಹತ್ತಿ ಬೆಳಗಾವಿಯಲ್ಲಿ ಬಂಧಿಸಿದ್ದರು.

ಇದನ್ನೂ ಓದಿ : ಅವಳು ಮಾತುಬಿಟ್ಟಿದ್ದನ್ನು ಸಹಿಸಲಾಗದೆ ಕೊಂದೇಬಿಟ್ಟ; ಗಗನಸಖಿ ಹತ್ಯೆ Inside story

ನಿಜವೆಂದರೆ ಅಯ್ನಾಜ್‌ ಚೌಗುಲೆಯಿಂದ ದೂರ ಸರಿಯಲು ಆತನ ಪತ್ನಿಯೂ ಒಂದು ಕಾರಣ ಎಂಬ ವಿಚಾರಕ್ಕೆ ಜಾರ್ಜ್‌ಶೀಟ್‌ ಬೆಳಕಿಗೆ ತಂದಿದೆ.

ಎಂಟು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಅಯ್ನಾಜ್‌ ಜತೆಗೆ ಪ್ರವೀಣ್‌ ಚೌಗುಲೆ ವಿಪರೀತ ಆಸಕ್ತಿ ಬೆಳೆಸಿಕೊಂಡಿದ್ದ. ಆತ ಆಕೆಗೆ ತನ್ನ ವಾಹನವನ್ನು ಕೊಡುತ್ತಿದ್ದ, ಆಹಾರ ತಂದುಕೊಡುತ್ತಿದ್ದ, ಮನೆ ಹುಡುಕಲು ಸಹಾಯ ಮಾಡಿದ್ದ. ಹೀಗೆ ಅವರಿಬ್ಬರೂ ಆತ್ಮೀಯವಾಗಿಯೇ ಇದ್ದರು.

ಆದರೆ, ಅವರಿಬ್ಬರ ಆತ್ಮೀಯತೆಯ ಬಗ್ಗೆ ಪ್ರವೀಣ್ ಪತ್ನಿಗೆ ಅನುಮಾನ ಬಂದಿತ್ತು. ಆಕೆ ಹಲವಾರು ಬಾರಿ ಗಂಡನ ಜತೆ ಜಗಳ ಮಾಡಿದ್ದಳು. ಈ ವಿಚಾರ ಅಯ್ನಾಜ್‌ಗೆ ಗೊತ್ತಾಗಿತ್ತು. ಹಾಗಾಗಿ ಆಕೆ ಸಾಧ್ಯವಾದಷ್ಟು ಮಟ್ಟಿಗೆ ಪ್ರವೀಣನಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಪಟ್ಟಿದ್ದಳು. ಇದು ಪ್ರವೀಣನಿಗೆ ಬೇಸರ ಮೂಡಿಸಿತ್ತು.

ನಿಜವೆಂದರೆ, ಪ್ರವೀಣ್ ಈ ಹಿಂದೆಯೂ ಮದುವೆಯಾಗಿದ್ದು ಮುಸ್ಲಿಂ ಯುವತಿಯನ್ನು. ಫ್ಯಾಮಿಲಿ ಫ್ರೆಂಡ್ ಆಗಿದ್ದ ಮುಸ್ಲಿಂ ಯುವತಿಯನ್ನೇ ಆಗ ಮದುವೆಯಾಗಿದ್ದ. 2009ರಲ್ಲಿ ಕದ್ರಿ ದೇವಸ್ಥಾನದಲ್ಲಿ ರಿಯಾಳನ್ನು ಕೈ ಹಿಡಿದಿದ್ದ ಪ್ರವೀಣ್ ಮದುವೆಯ ನಂತರ ಆಕೆಯನ್ನು ಪ್ರಿಯಾ ಆಗಿ ಹೆಸರು ಬದಲಾಯಿಸಿದ್ದ.

Udupi murder : ಅಯ್ನಾಜ್‌ ಪ್ರಿಯಕರ ಬಂದಿದ್ದೇ ಕೊಲೆಗೆ ಪ್ರಮುಖ ಕಾರಣ

ಇದರ ನಡುವೆ ಅಯ್ನಾಜ್‌ಗೆ ಒಬ್ಬ ಪ್ರಿಯಕರನಿದ್ದಾನೆ ಎನ್ನಲಾಗಿದೆ. ಅಥವಾ ಅವಳು ಹೀಗೊಬ್ಬ ಪ್ರಿಯಕರನಿದ್ದಾನೆ ಎಂದು ಪ್ರವೀಣ್‌ಗೆ ಹೇಳಿದ್ದಾಳೆ. ತನ್ನ ಪ್ರಿಯಕರ ಕತಾರ್‌ನಲ್ಲಿದ್ದು 2023 ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ವಾಪಸ್ ಆಗಿದ್ದ ಎನ್ನಲಾಗಿದೆ. ಮುಂದೆ ಪ್ರಿಯಕರನ ಜೊತೆ ಮದುವೆಯಾಗುವುದಾಗಿ ಹೇಳಿದ್ದಳು ಅಯ್ನಾಜ್. ಅಯ್ನಾಜ್ ಪ್ರಿಯಕರನ ವಿಷಯ ಹೇಳಿದ ಬಳಿಕ ಪ್ರವೀಣ್ ಚೌಗುಲೆ ವಿಪರೀತ ಸಿಟ್ಟಾಗಿದ್ದ ಎನ್ನಲಾಗಿದೆ.

ಹೀಗಾಗಿ ತನಗೆ ಸಿಗದೆ ಇರುವ ಆಕೆ ಯಾರಿಗೂ ಸಿಗಬಾರದು ಎಂದು ಕೊಲೆಗೈಯ್ಯಲು ನಿರ್ಧಾರ ಮಾಡಿದ್ದು ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿರುವ ವಿಚಾರ.

Udupi murder : ಇಬ್ಬರ ಕೊಲೆಗೆ ಪ್ಲ್ಯಾನ್‌ ಮಾಡಿದ್ದ ಹಂತಕ, ಕೊನೆಗೆ ನಾಲ್ಕಾಯ್ತು!

ಪ್ರವೀಣ್‌ ಚೌಗುಲೆ ಮೂಲತಃ ಕೊಲೆ ಮಾಡಲು ಸ್ಕೆಚ್‌ ಹಾಕಿದ್ದು ಇಬ್ಬರನ್ನು. ಅಯ್ನಾಜ್‌ ಮತ್ತು ಪ್ರವೀಣ್‌ ನಡುವೆ ಇದ್ದ ಸ್ನೇಹದ ಬಗ್ಗೆ ಅಯ್ನಾಜ್‌ಳ ಹಿರಿಯ ಸಹೋದರಿ ಅಫ್ನಾನ್ ಗೆ ಗೊತ್ತಿತ್ತು. ಹಾಗಾಗಿ ಇಬ್ಬರನ್ನೂ ಮುಗಿಸಬೇಕು ಎಂದುಕೊಂಡು ಅವನು ಬಂದಿದ್ದ. ಆದರೆ, ಅಯ್ನಾಜ್‌ ತಾಯಿ ಮತ್ತು ತಮ್ಮ ಕೂಡಾ ಕೊಲೆಯಾಗಿ ಹೋದರು.

ಸ್ನ್ಯಾಪ್ ಚಾಟ್ ಮೂಲಕ ಮನೆಯ ವಿಳಾಸ ತಿಳಿದುಕೊಂಡಿದ್ದ ಆರೋಪಿ ಪ್ರವೀಣ್ ಚೌಗುಲೆ ಮೊಬೈಲನ್ನು flight modeಗೆ ಹಾಕಿ ಮನೆಯಲ್ಲಿ ಇಟ್ಟು ಕೃತ್ಯ ಎಸಗಿ ಮರಳಿ ಮಂಗಳೂರಿಗೆ ಬಂದಿದ್ದ ಎನ್ನಲಾಗಿದೆ.

ಪೊಲೀಸ್‌ ವೃತ್ತಿ ಬಿದ್ದು ವಿಮಾನದ ಕ್ಯಾಬಿನ್‌ ಕ್ರ್ಯೂ ಆಗಿದ್ದ

ಪ್ರವೀಣ್‌ ಚೌಗುಲೆ ಮೊದಲು ಪೊಲೀಸ್‌ ಆಗಿದ್ದ,. ಬಳಿಕ ಅದನ್ನು ಬಿಟ್ಟು ವಿಮಾನದ ಕ್ಯಾಬಿನ್ ಕ್ರೂ ಆಗಿದ್ದ. ಪ್ರವೀಣ್ 2007ರಲ್ಲಿ ಪುಣೆ ಸಿಟಿ ಪೊಲೀಸ್ ಆಗಿ ಆಯ್ಕೆಯಾಗಿದ್ದ ಆತ ಮಹಾರಾಷ್ಟ್ರದ ವಿದರ್ಭ, ಅಂಕೋಲಾ ಪೊಲೀಸ್ ಶಾಲೆಯಲ್ಲಿ 9 ತಿಂಗಳು ತರಬೇತಿ ಪಡೆದಿದ್ದ. ಮುಂದೆ ಏರ್ ಇಂಡಿಯಾ ಕ್ಯಾಬಿನ್ ಕ್ರ್ಯೂ ಪರೀಕ್ಷೆ ಬರೆದಿದ್ದ. ಅದರಲ್ಲಿ ಆಯ್ಕೆಯಾಗುತ್ತಿದ್ದಂತೆಯೇ ಪೊಲೀಸ್ ಕೆಲಸ ಬಿಟ್ಟು 2009ರಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೆಲಸಕ್ಕೆ ಸೇರಿದ್ದ. ಇದೀಗ ಕೊಲೆಗಾರ ಜೈಲಿನಲ್ಲಿದ್ದು, ಪೊಲೀಸರು ಸಲ್ಲಿಸಿರುವ ಜಾರ್ಜ್‌ಶೀಟ್‌ ಆಧಾರದಲ್ಲಿ ಮುಂದಿನ ವಿಚಾರಣೆ ಕೋರ್ಟ್‌ನಲ್ಲಿ ನಡೆಯಲಿದೆ.

Exit mobile version