ಮಣಿಪಾಲ: ಆತ್ಮಹತ್ಯೆಯೋ? ಹತ್ಯೆ ಯತ್ನವೋ? ಪ್ರೇಮಿಗಳಿಬ್ಬರೂ ಸರ್ಕಾರಿ ನೌಕರರು. ಆರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಜ್ಯೋತಿಷಿಯೊಬ್ಬರು ಯುವತಿಯ ಜಾತಕದಲ್ಲಿ ದೋಷ ಇದೆ ಎಂದು ಹೇಳಿದ. ಜ್ಯೋತಿಷಿಯ ಮಾತು ನಂಬಿದ ಯುವಕ, ಆರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಯುವತಿಯೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ. ಇದೀಗ ಯುವತಿ ಜೀವ ತೆತ್ತಿದ್ದಾಳೆ.
ಪೊಲೀಸ್ ಸಿಬ್ಬಂದಿಯಾಗಿರುವ ಯುವತಿ ಹಾಗೂ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಕುಮಾರ್ ಮೊಕಾಶಿ 6 ವರ್ಷಗಳಿಂದ ಪರಸ್ಪರ ಲವ್ ಮಾಡುತ್ತಿದ್ದರು. ಇವರಿಬ್ಬರ ಪ್ರೀತಿಗೆ ಮನೆಯಲ್ಲಿ ಮೊದಲು ಒಪ್ಪಿಗೆ ಕೂಡ ಇತ್ತು. ಆದರೆ ಮದುವೆಗೆ ಅಡ್ಡವಾಗಿದ್ದು ಹುಡುಗಿಯ ಜಾತಕ.
ಯುವತಿಯ ಜಾತಕವನ್ನು ಜೋತಿಷಿಗಳಿಗೆ ತೋರಿಸಿದ ಪ್ರವೀಣ್ ಕುಮಾರ್ ಮೊಕಾಶಿಯ ತಾಯಿ, ಈ ಮದುವೆಗೆ ವಿರೋಧ ವ್ಯಕ್ತಪಡಿಸಿದಳು. ಜಾತಕದ ಪ್ರಕಾರ ಯುವತಿಗೆ ಕುಜ ದೋಷವಿದೆ, ಮದುವೆ ಆದರೆ ಪ್ರವೀಣ್ ಬೇಗ ಸಾಯುತ್ತಾನೆ ಎಂದು ಜೋತಿಷಿ ಹೇಳಿದ್ದ. ಹಾಗಾಗಿ ಹುಡುಗನ ತಾಯಿ ಮದುವೆಯನ್ನು ತಿರಸ್ಕರಿಸಿದ್ದಳು.
ಪ್ರವೀಣನನ್ನ ಮದುವೆಯಾಗುವುದಿರಲಿ, ಆತನ ಜತೆ ಮಾತನಾಡಿಸಲೂ ಲಕ್ಷ್ಮಿಗೆ ಬಿಡುತ್ತಿರಲಿಲ್ಲ. ʼನೀನು ಸಾಯುವುದಾದರೆ ಸಾಯುʼ ಎಂದು ಫೋನಿನಲ್ಲೇ ಲಕ್ಷ್ಮಿಗೆ ಗದರಿಸುತ್ತಿದ್ದರು. ಆದರೂ ಯುವತಿಯು ಪ್ರವೀಣನನ್ನ ಕಂಡು ಈ ವಿಷಯ ಇತ್ಯರ್ಥಪಡಿಸಲು ಆತ ಕೆಲಸ ಮಾಡುತ್ತಿದ್ದ ಉಬ್ರಾಣಿಗೆ ತೆರಳಿದ್ದಳು. ಸಾವು ಎಂದರೆ ಏನೆಂದು ತೋರಿಸುತ್ತೇನೆ ಎಂದ ಪ್ರವೀಣ, ಆಕೆಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಅಡ್ಡಾದಿಡ್ಡಿ ಓಡಿಸತೊಡಗಿದ. ನಿನ್ನನ್ನು ಮದುವೆ ಆಗುವ ವಿಚಾರದಲ್ಲಿ ಪೊಲೀಸ್ ಠಾಣೆ ಆದರೂ ಸರಿ ಅಥವಾ ಕೋರ್ಟ್ ಮೆಟ್ಟಿಲು ಹತ್ತಲೂ ಸಿದ್ಧ ಎಂದಾತ ಹೇಳಿದ
ನಂತರ ಆರ್‌ಎಂಸಿ ಬಳಿ ಬಂದು ಬೈಕ್ ನಿಲ್ಲಿಸಿ ವಿಷದ ಬಾಟಲ್ ತೋರಿಸಿ, ಇಬ್ವರೂ ಸಾಯೋಣ ಎಂದ. ಮೊದಲು ನೀನು ತಗೋ ಎಂದು ಯುವತಿಯ ಕೈಗೆ ವಿಷದ ಬಾಟಲಿ ನೀಡಿದ. ಯುವತಿ ಅರ್ಧ ಬಾಟಲ್‌ನಷ್ಟು ವಿಷ ಕುಡಿದು ಬೈಕ್‌ನ ಹಿಂಬದಿ ಸೀಟಿನಲ್ಲಿ ಕುಳಿತಳು. ಆದರೆ ಪ್ರವೀಣ್ ವಿಷ ಕುಡಿದಿದ್ದು ತನಗೆ ಕಾಣಿಸಲಿಲ್ಲ ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಳು.
ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಅರಣ್ಯ ಇಲಾಖೆಯ ಪ್ರವೀಣ್ ಕುಮಾರ್ ಮೊಕಾಶಿ ಮತ್ತು ಆತನ ತಾಯಿ ಲಕ್ಷ್ಮೀ ವಿರುದ್ಧ ದೂರು ದಾಖಲಾಗಿದೆ. ಡೆಪ್ಯೂಟಿ ಆರ್ ಎಫ್ ಒ ಇಬ್ಬರನ್ನೂ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ನಂತರ ಮಣಿಪಾಲಿನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿದ್ದರು. ವಿಷ ಸೇವಿಸಿದ 16 ದಿನಗಳ ಬಳಿಕ ಯುವತಿ ಗುರುವಾರ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಇದನ್ನೂ ಓದಿ| ಉಡುಪಿಯಲ್ಲಿ ಪ್ರೇಮಿಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್: ಕೊಲೆಯಾಗಿರುವ ಶಂಕೆ