Site icon Vistara News

Big boss | ಬಿಗ್‌ ಬಾಸ್‌ ಸ್ಪರ್ಧಿ ರೂಪೇಶ್‌ ಶೆಟ್ಟಿಗೆ ಸೋಷಿಯಲ್‌ ಮೀಡಿಯಾದಲ್ಲಿ ಬೆದರಿಕೆ: ಪೋಷಕರಿಂದ ದೂರು

roopesh shetty

ಮಂಗಳೂರು: ಈಗ ನಡೆಯುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ‌ನಲ್ಲಿ ಸ್ಪರ್ಧಿಯಾಗಿರುವ ರೂಪೇಶ್ ಶೆಟ್ಟಿ ಅವರು ನೀಡಿದ ಹೇಳಿಕೆಯೊಂದರ ವಿಚಾರವಾಗಿ ಕರಾವಳಿಯಲ್ಲಿ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಸಾಮಾಜಿಕ ತಾಣಗಳಲ್ಲಿ ರೂಪೇಶ್‌ ಶೆಟ್ಟಿ ಅವರಿಗೆ ಪರೋಕ್ಷ ಬೆದರಿಕೆ ಒಡ್ಡಿದ್ದರ ಹಿನ್ನೆಲೆಯಲ್ಲಿ ರೂಪೇಶ್ ಪೋಷಕರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಕನ್ನಡ ರಾಜ್ಯೋತ್ಸವದ ದಿ‌ನ ಬಿಗ್‌ ಬಾಸ್ ಶೋನಲ್ಲಿ ಮಾತನಾಡಿದ ರೂಪೇಶ್ ಶೆಟ್ಟಿ, ನಾನು ಗಡಿನಾಡ ಕನ್ನಡಿಗ ಅಂತ ಹೇಳಿದ್ದರು. ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಮಾತನಾಡಿದ್ದರು. ಆದರೆ, ಇದು ಕೆಲವು ತುಳು ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ತುಳುನಾಡಿನ ಸಿನೆಮಾ ಮೂಲಕ ಹೆಸರು ಗಳಿಸಿ ಇದೀಗ ಗಡಿನಾಡ ಕನ್ನಡಿಗ ಅಂತ ಹೇಳಿರುವುದು ಎಷ್ಟು ಸರಿ ಎನ್ನುವುದು ಅವರ ಪ್ರಶ್ನೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿತ್ತು. ಹಲವು ತುಳುವರು ರೂಪೇಶ್ ಬೆಂಬಲಕ್ಕೆ ನಿಂತರೂ ಮತ್ತೆ ಕೆಲವರು ರೂಪೇಶ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ರೂಪೇಶ್ ಪೋಷಕರಿಗೂ ಕೆಲವರು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೋಷಕರು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಕಮಿಷನರ್ ಶಶಿಕುಮಾರ್, ಸೆನ್ ಪೊಲೀಸ್ ಠಾಣೆಗೆ ಕಳುಹಿಸಿ ಕೋರ್ಟ್ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಬಿಗ್ ಬಾಸ್‌ನಲ್ಲಿ ರೂಪೇಶ್ ಶೆಟ್ಟಿ ಹೇಳಿದ್ದೇನು?
‘ನಾನು ಕಲಿತದ್ದು ಕನ್ನಡ ಮೀಡಿಯಂನಲ್ಲಿ. ಆದರೆ ನಾನು ಗಡಿನಾಡ ಕನ್ನಡಿಗ. ನಾನು ಹುಟ್ಟಿದ್ದು ಮಂಗಳೂರಿನಿಂದ 30 ಕಿ.ಮೀ ದೂರದ ಕೇರಳದ ಕಾಸರಗೋಡಿನಲ್ಲಿ. ನಾವು ಗಡಿನಾಡ ಕನ್ನಡಿಗರು. ಕನ್ನಡ ಕಲಿಯಲು ಆಸೆ ಇದ್ದರೂ ಅಲ್ಲಿ ಕಲಿಯೋದು ಕಷ್ಟ. ಅಲ್ಲಿ ಶಾಲೆಯಲ್ಲಿ ಕನ್ನಡ ಕಲಿಸೋ ಮಾಸ್ಟರ್ ಇಲ್ಲ. ‌ಆದರೆ ನಾನು ‌ಕೇರಳದಲ್ಲಿ ಇದ್ದರೂ ಕನ್ನಡ ಮೀಡಿಯಂನಲ್ಲಿ ಕಲಿತಿದ್ದು. ಅಷ್ಟು ಆತ್ಮವಿಶ್ವಾಸವನ್ನು ಕನ್ನಡ ಕಲಿಸಿ ಅಲ್ಲಿನ ಶಿಕ್ಷಕರು ನಮಗೆ ಕೊಟ್ಟಿದ್ದಾರೆ’ ಎಂದು ರೂಪೇಶ್ ಶೆಟ್ಟಿ ಬಿಗ್ ಬಾಸ್‌ನಲ್ಲಿ ಹೇಳಿದ್ದರು.

ಆದರೆ, ಈ ಹಿಂದೆ ತುಳುವ ಅಂತ ಹೇಳಿಕೊಳ್ಳುತ್ತಿದ್ದ ಇದ್ದ ರೂಪೇಶ್ ಶೆಟ್ಟಿ ಅವರ ಈ ಮಾತು ಕೆಲವರ ಅಸಮಾಧಾನಕ್ಕೆ ‌ಕಾರಣವಾಗಿದೆ. ಕೆಲವರು ರೂಪೇಶ್ ಶೆಟ್ಟಿ ನಟಿಸಿದ ತುಳು ಚಿತ್ರಗಳನ್ನು ಬಹಿಷ್ಕರಿಸೋ ಬಗ್ಗೆ ಪೋಸ್ಟ್ ಹಾಕಿದ್ದರೆ, ಮತ್ತೆ ಕೆಲವರು ರೂಪೇಶ್ ಶೆಟ್ಟಿ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೇ ನಮ್ಮ ಬೆಂಬಲ ತುಳುವನಿಗೆ ಹೊರತು, ಗಡಿನಾಡ ಕನ್ನಡಿಗನಿಗೆ ಅಲ್ಲ ಅನ್ನೋ ಪೋಸ್ಟ್ ಕೂಡ ಹರಿದಾಡಿದೆ. ಜೊತೆಗೆ ಬಿಗ್ ಬಾಸ್‌ನಿಂದ ಹೊರಬಂದ ಬಳಿಕ ರೂಪೇಶ್ ಶೆಟ್ಟಿಯನ್ನು ಗಡಿನಾಡಿಗೆ ಓಡಿಸಬೇಕು ಅಂತ ಪೋಸ್ಟ್ ಹಾಕಲಾಗಿದೆ.

ಇದನ್ನೂ ಓದಿ | Bigg Boss Kannada | ಮನೆಯಿಂದ ಹೊರ ನಡೆದ ಸಾನ್ಯ ಅಯ್ಯರ್‌!

Exit mobile version