ಉಡುಪಿ: ಉಡುಪಿಯ ಕೆಮ್ಮಣ್ಣಿನ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು (Four people of Family killed) ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ಭಯಾನಕ ಘಟನೆಗೆ (Udupi family Murder) ಸಂಬಂಧಿಸಿ ಹಂತಕನ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರಾದರೂ ಅವರಿಂದ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇತ್ತ ಐದು ತಂಡಗಳನ್ನು ರಚಿಸಿರುವ ಪೊಲೀಸರು ಮಂಗಳೂರು, ಶಿವಮೊಗ್ಗ, ಕಾರವಾರಕ್ಕೆ ತಲಾ ಒಂದೊಂದು ತಂಡವನ್ನು ಕಳುಹಿಸಿದ್ದರೆ (Five teams formed) ಎರಡು ತಂಡಗಳು ಉಡುಪಿಯಲ್ಲಿ ತನಿಖೆ ನಡೆಸಲಿದೆ.
ಸುಮಾರು 45 ವರ್ಷದ ಬೋಳು ತಲೆ, ಬಿಳಿ ಮಾಸ್ಕ್ ಹಾಕಿಕೊಂಡಿರುವ ಹಂತಕನ ಕೆಲವೊಂದು ವಿಡಿಯೋ ಫೂಟೇಜ್‌ಗಳು ಲಭ್ಯವಾಗಿದ್ದು, ಆತನ ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ. ಹಂತಕ ಬೆಂಗಳೂರು ಕನ್ನಡ ಮಾತನಾಡುತ್ತಿದ್ದ ಎಂಬ ರಿಕ್ಷಾ ಚಾಲಕ ಶ್ಯಾಮ್ ಹೇಳಿಕೆಯ ಆಧಾರದಲ್ಲಿಯೂ ತನಿಖೆ ನಡೆಯುತ್ತಿದೆ. ಕೊಲೆಯಾದ ಯುವತಿಯರಲ್ಲಿ ಒಬ್ಬಾಕೆ ಏರ್ ಹೋಸ್ಟೆಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಈ ಘಟನೆ ಆಕೆಯ ಮೇಲಿನ ದ್ವೇಷ ಸಾಧನೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನೊಂದು ಕಡೆ ಮನೆಯ ಹಿರಿ ಮಗನೂ ಇರುವುದು ಬೆಂಗಳೂರಿನಲ್ಲಿ. ಅವನಿಗೂ ಹಂತಕನಿಗೂ ಏನಾದರೂ ಸಂಬಂಧವಿದೆಯಾ ಎನ್ನುವುದು ಕೂಡಾ ತನಿಖೆಗೆ ಒಳಗಾಗುತ್ತಿದೆ.
ಕೆಮ್ಮಣ್ಣು ನೇಜಾರಿನ ನಿವಾಸಿ ನೂರ್ ಮಹಮ್ಮದ್ ಅವರ ಕುಟುಂಬದ ಮೇಲೆ ಈ ಭೀಕರ ದಾಳಿ ನಡೆದಿದೆ. ನೂರ್ ಮಹಮ್ಮದ್ ಅವರು ದುಬೈಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರ ಪತ್ನಿ ಹಸೀನಾ (45), ಪುತ್ರಿಯರಾದ ಅಫ್ನಾನ್ (23), ಆಝ್ನಾನ್ (21) ಮತ್ತು ಅಸೀಮ್ (14) ಅವರನ್ನು ಆಗಂತುಕನೊಬ್ಬ ಭಾನುವಾರ ಬೆಳಗ್ಗೆ ಕೊಲೆ ಮಾಡಿದ್ದಾನೆ. ಈ ಕುಟುಂಬದ ಹಿರಿಯ ಮಗ ಅಸಾದ್ ಬೆಂಗಳೂರಿನಲ್ಲಿ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ಅಫ್ನಾನ್ ಏರ್‌ಹೋಸ್ಟೆಸ್ ಆಗಿ ಕೆಲಸ ಮಾಡುತ್ತಿದ್ದು, ಶನಿವಾರವಷ್ಟೇ ಬೆಂಗಳೂರಿನಿಂದ ಮನೆಗೆ ಬಂದಿದ್ದಳು.
ಕೆಲವೇ ನಿಮಿಷದಲ್ಲಿ ಮುಗಿದ ಕೊಲೆ, ಹಂತಕನ ಜಾಡು ಹಿಡಿದು..
ಭಾನುವಾರ ಮುಂಜಾನೆ 8.20ರ ಸುಮಾರಿಗೆ 45ರ ಆಸುಪಾಸಿನ ದೃಢಕಾಯ, ಕಂದು ಬಣ್ಣದ ಷರ್ಟು ಮತ್ತು ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡ ವ್ಯಕ್ತಿ ಉಡುಪಿಯ ಸಂತೆಕಟ್ಟೆ ರಿಕ್ಷಾ ಸ್ಟಾಂಡ್‌ಗೆ ಬಂದಿದ್ದಾನೆ. ಅಲ್ಲಿಂದ ತೃಪ್ತಿ ನಗರಕ್ಕೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾನೆ. ಮನೆಯ ವಿಳಾಸವನ್ನು ಸ್ಪಷ್ಟವಾಗಿ ಹೇಳಿದ್ದ ಆ ವ್ಯಕ್ತಿ ಆಟೊ ಚಾಲಕ ಶ್ಯಾಮ್ ಅವರಿಗೆ ದಾರಿ ತಪ್ಪಿದಾಗಲೂ ಮತ್ತೆ ಸರಿ ದಾರಿ ತೋರಿಸಿದ್ದಾನೆ.
ಶ್ಯಾಮ್ ಅವರು ಆತನನ್ನು ತೃಪ್ತಿ ನಗರದಲ್ಲಿ ಬಿಟ್ಟು ಬಂದ ಕೇವಲ 15 ನಿಮಿಷದಲ್ಲಿ ಅಂದರೆ 8.48ರ ಹೊತ್ತಿಗೆ ಆತ ಯಾರದೋ ಬೈಕ್‌ನಲ್ಲಿ ಲಿಫ್ಟ್ ಪಡೆದುಕೊಂಡು ಮರಳಿ ಸಂತೆಕಟ್ಟೆಗೆ ಬಂದಿದ್ದಾನೆ. ಅಲ್ಲಿಂದ ಎಲ್ಲಿ ಹೋಗಿದ್ದಾನೆ ಎನ್ನುವುದು ಸ್ಪಷ್ಟವಾಗಿಲ್ಲ.
ಮನೆಯಲ್ಲಿ ನಾಲ್ವರನ್ನು ಕೊಂದು ಹಾಕಿದ ಧೂರ್ತ
ಬಹುಶಃ ಚೂರಿಯನ್ನು ಕೈಯಲ್ಲೇ ಹಿಡಿದುಕೊಂಡು ಮನೆಯೊಳಗೆ ನುಗ್ಗಿರುವ ಆರೋಪಿ ಕ್ಷಣ ಮಾತ್ರದಲ್ಲಿ ಕೊಲೆಗಳನ್ನು ಮಾಡಿದ್ದಾನೆ. ನಾಲ್ವರನ್ನು ನಾಲ್ವರನ್ನು ನಾಲ್ಕು ಕಡೆಗಳಲ್ಲಿ ಕೊಂದು ಮುಗಿಸಿದ್ದಾನೆ. ಹಸೀನಾ, ಅಫ್ನಾನ್, ಅಝ್ನಾನ್ ಮತ್ತು ಅಸೀಮ್ ಅವರನ್ನು ಕಿಚನ್, ಬೆಡ್‌ರೂಂ, ಬಾತ್ ರೂಂ ಬಳಿ ಮತ್ತು ಹಾಲ್‌ನಲ್ಲಿ ಇರಿದು ಕೊಲೆ ಮಾಡಿದ್ದಾನೆ. ಈ ಕೊಲೆಗಳನ್ನು ತಡೆಯಲು ಬಂದ ಹಸೀನಾ ಅವರ ಅತ್ತೆಯನ್ನು ಹಂತಕ ಬೆದರಿಸಿದ್ದಾನೆ. ಅವರು ಬಾತ್ ರೂಂನ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರಿಂದ ಜೀವ ಉಳಿಸಿಕೊಂಡಿದ್ದಾರೆ.
ಕೊನೆಯ ಕ್ಷಣದಲ್ಲಿ ಚೂರಿಗೆ ಸಿಲುಕಿದ ಅಸೀಮ್
ನಿಜವೆಂದರೆ ಹಂತಕ ಮನೆ ಪ್ರವೇಶಿಸುವ ಹೊತ್ತಿಗೆ 14 ವರ್ಷದ ಅಸೀಮ್ (ಬ್ರಹ್ಮಾವರ ಖಾಸಗಿ ಶಾಲೆಯ 8 ತರಗತಿ ವಿದ್ಯಾರ್ಥಿ) ಮನೆಯಲ್ಲಿ ಇರಲಿಲ್ಲ. ಆತ ಸ್ನೇಹಿತರ ಜತೆ ಆಡಲೆಂದು ಸೈಕಲ್ ಹಿಡಿದುಕೊಂಡು ಹೋಗಿದ್ದ ಆತ ಬೆಳಗಿನ ತಿಂಡಿ ತಿನ್ನಲೆಂದು ಮನೆಗೆ ಬಂದಿದ್ದ. ಅಂಗಳ ಪ್ರವೇಶಿಸುತ್ತಿದ್ದಂತೆಯೇ ಮನೆಯೊಳಗೆ ಜೋರಾಗಿ ಕೂಗಿಕೊಳ್ಳುವ ಸದ್ದು ಕೇಳುತಿದ್ದಂತೆಯೇ ಸೈಕಲನ್ನು ಅಂಗಳದಲ್ಲಿ ಬಿಟ್ಟು ಒಂದೇ ಜಿಗಿತಕ್ಕೆ ಮನೆಯೊಳಗೆ ನುಗ್ಗಿದ್ದ. ಆದರೆ ಅವನು ಹಾಲ್‌ಗೆ ಬರುತ್ತಿದ್ದಂತೆಯೇ ಹಂತಕ ಎದುರೇ ನಿಂತಿದ್ದ. ಅಲ್ಲೇ ಆತನ ಹೊಟ್ಟೆಗೆ ಚೂರಿಯಿಂದ ಇರಿದಿದ್ದ. ಹೀಗೆ ಸಾಲು ಸಾಲು ಕೊಲೆಗಳನ್ನು ಮಾಡಿದ ಬಳಿಕ ಹಂತಕ ಅಲ್ಲಿಂದ ಪರಾರಿಯಾಗಿದ್ದ.
ಸೌದಿಯಿಂದ ಆಗಮಿಸಿದ ನೂರ್ ಅಹಮದ್
ಈ ನಡುವೆ, ಕೊಲೆ ನಡೆದ ಮಾಹಿತಿ ತಿಳಿದ ಬೆನ್ನಿಗೇ ಕುಟುಂಬದ ಯಜಮಾನ ನೂರ್ ಮೊಹಮ್ಮದ್ ಅವರು ಅಲ್ಲಿಂದ ಹೊರಟಿದ್ದು ಸೋಮವಾರ ಬೆಳಗ್ಗೆ ಉಡುಪಿ ತಲುಪಿದ್ದಾರೆ. ಇದೇವೇಳೇ ಬೆಂಗಳೂರಿನ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿರುವ ಕುಟುಂಬದ ಹಿರಿಯ ಪುತ್ರ ಮೊಹಮ್ಮದ್ ಅಸಾದ್ ಕೂಡಾ ಆಗಮಿಸಿದ್ದಾರೆ.
ಇದನ್ನೂ ಓದಿ: Murder Case : ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ!
ಉಡುಪಿಯ ಎರಡು ಮಸೀದಿಯಲ್ಲಿ ವಿಧಿವಿಧಾನ
ಮೃತರ ಅಂತ್ಯಕ್ರಿಯೆ ಕೋಡಿಬೆಂಗ್ರೆ ಸ್ಮಶಾನದಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಮಣಿಪಾಲ ಆಸ್ಪತ್ರೆಯ ಶವಾಗಾರದಿಂದ ಶವಗಳನ್ನು ಇಂದ್ರಾಳಿ ಮಸೀದಿ ಮತ್ತು ಉಡುಪಿ ಜಾಮಿಯಾ ಮಸೀದಿಗೆ ತಂದು ಅಲ್ಲಿ ಸ್ನಾನಾದಿ ಅಂತಿಮ ವಿಧಿ ವಿಧಾನಗಳನ್ನು ಪ್ರತ್ಯೇಕವಾಗಿ ನಡೆಸಲಾಗಿದೆ. ಇತ್ತ ಪೊಲೀಸರು ಹಂತಕನಿಗಾಗಿ ಐದು ತಂಡಗಳನ್ನು ಮಾಡಿ ಹುಡುಕುತ್ತಿದ್ದಾರೆ.