ಉಡುಪಿ: ಕೆಮ್ಮಣ್ಣು ನೇಜಾರುವಿನ ತೃಪ್ತಿ ನಗರದಲ್ಲಿ (Udupi Murder) ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಲೆ (Four of family killed) ಮಾಡಿದ ಹಂತಕ ಪ್ರವೀಣ್ ಅರುಣ್ ಚೌಗುಲೆಯನ್ನು ಗುರುವಾರ ಘಟನೆ ನಡೆದ ಮನೆಗೆ ಕರೆದುಕೊಂಡು ಬಂದು ಮಹಜರು ನಡೆಸಲಾಯಿತು. ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ (protest by public) ಜನರು ಕೇವಲ 30 ಸೆಕೆಂಡ್ ಕಾಲ ಹಂತಕನನ್ನು ತಮ್ಮ ಸುಪರ್ದಿಗೆ ಒಪ್ಪಿಸಿ ಎಂದು ಆಗ್ರಹಿಸಿದರು. ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ (Mild Laticharge) ನಡೆಸಬೇಕಾಯಿತು.
ಕಳೆದ ಭಾನುವಾರ ಮುಂಜಾನೆ ಕೆಮ್ಮಣ್ಣು ನೇಜಾರಿನ ತೃಪ್ತಿ ನಗರದಲ್ಲಿರುವ ನೂರ್ ಮಹಮದ್ ಅವರ ಮನೆಗೆ ನುಗ್ಗಿದ ಪ್ರವೀಣ್ ಅರುಣ್ ಚೌಗುಲೆ ನೂರ್ ಮಹಮದ್ ಅವರ ಪತ್ನಿ ಹಸೀನಾ (45), ಪುತ್ರಿಯರಾದ ಅಫ್ನಾನ್ (23), ಅಯ್ನಾಜ್ (21) ಮತ್ತು ಮಗ ಅಸೀಮ್ (14)ನನ್ನು ಕೊಂದು ಹಾಕಿದ್ದ.
ಇದನ್ನು ಓದಿ : Udupi Murder : ನಾಲ್ವರನ್ನು ಕೊಂದವನ ಟಾರ್ಗೆಟ್ ಅವಳೇ ಅಯ್ನಾಜ್; ಕಾರಣ ಬಿಚ್ಚಿಟ್ಟ ಹಂತಕ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಹೋಸ್ಟೆಸ್ ಆಗಿದ್ದ ಅಯ್ನಾಜ್ ಮೇಲಿನ ದ್ವೇಷಕ್ಕಾಗಿ ವಿಮಾನ ನಿಲ್ದಾಣದಲ್ಲೇ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ ಪ್ರವೀಣ್ ಚೌಗುಲೆ ಈ ಹತ್ಯಾಕಾಂಡವನ್ನು ಎಸಗಿದ್ದ. ಅಯ್ನಾಜ್ ಮೇಲೆ ಅನುರಕ್ತನಾಗಿದ್ದ ಈ ದುಷ್ಟ ಆಕೆ ತನ್ನನ್ನು ದೂರ ಮಾಡಿದ್ದಾಳೆ ಎಂಬ ಸಿಟ್ಟಿನಲ್ಲಿ ಕ್ರೂರವಾಗಿ ನಡೆದುಕೊಂಡಿದ್ದ. ಆತನಿಗೆ ಮದುವೆಯಾಗಿ ಮಕ್ಕಳು ಇದ್ದರೂ ಆಕೆಯನ್ನು ಕಾಡುತ್ತಿದ್ದ ಎನ್ನಲಾಗಿದೆ.
ಹಲವಾರು ಸುಳಿವುಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಆತನನ್ನು ಬಂಧಿಸಿದ್ದರು. ಬುಧವಾರ ಆತನನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಗುರುವಾರ ಹಂತಕನನ್ನು ಮನೆಗೆ ಕರೆ ತಂದು ಸ್ಥಳ ಮಹಜರು ಮಾಡಲಾಯಿತು. ಈ ವೇಳೆ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.
ಪೊಲೀಸ್ ವಾಹನದಲ್ಲಿ ಹಂತಕ ಪ್ರವೀಣ್ ಅರುಣ್ ಚೌಗುಲೆಯನ್ನು ಕರೆ ತರುತ್ತಿದ್ದಂತೆಯೇ ಆಸುಪಾಸಿನ ಪ್ರದೇಶದ ನೂರಾರು ಮಂದಿ ಅಲ್ಲಿ ಸುತ್ತ ಜಮಾಯಿಸಿದರು. ಅವರನ್ನು ತಡೆಯಲು ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಲಾಯಿತು ಮತ್ತು ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಮುಚ್ಚಲಾಯಿತು.
ವಾಹನದಲ್ಲಿ ಆರೋಪಿಯನ್ನು ಮನೆಯೊಳಗೆ ಕರೆದೊಯ್ಯುತ್ತಿದ್ದಂತೆಯೇ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ನೆರೆದು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರೆ, ಪುರುಷರು ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿ ನಾವೇ ಶಿಕ್ಷೆ ಕೊಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವನು ನಾಲ್ವರನ್ನು ಕೊಲೆ ಮಾಡಲು 15 ನಿಮಿಷ ತೆಗೆದುಕೊಂಡಿದ್ದಾನೆ. ನಮಗೆ ಅಷ್ಟೆಲ್ಲ ಸಮಯ ಬೇಡ, ಕೇವಲ ಮೂವತ್ತು ಸೆಕೆಂಡು ಕೊಡಿ ಸಾಕು, ನಾವು ಶಿಕ್ಷೆ ಕೊಡುತ್ತೇವೆ ಎಂದು ಅಲ್ಲಿದ್ದ ಸಾರ್ವಜನಿಕರು ಆಗ್ರಹಿಸಿದರು.
ರಸ್ತೆ ತಡೆ ನಡೆಸಿದ ಸಾರ್ವಜನಿಕರು ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು.
ಮನೆಯೊಳಗೆ ಆರೋಪಿಯನ್ನು ಕರೆದುಕೊಂಡು ಹೋಗುವ ಹೊತ್ತಿಗೆ ಜಮಾಯಿಸಿದ್ದ ಜನರು ಆತನನ್ನು ಹೊರಗೆ ಕರೆ ತರುವುದನ್ನೇ ಕಾದು ಕುಳಿತಿದ್ದರು. ಕೆಲವರಂತೂ ಮನೆಗೇ ನುಗ್ಗಲು ಯತ್ನಿಸಿದರು. ವಾಹನದಲ್ಲಿ ಹೊರಗೆ ಕರೆತರುತ್ತಿದ್ದಂತೆಯೇ ಜನರು ನುಗ್ಗಲು ಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು.
ಪೊಲೀಸರು ನಡೆಸಿದ ಲಾಠಿಚಾರ್ಜ್‌ನಲ್ಲಿ ಕೆಲವರು ಅಲ್ಲಲ್ಲೇ ಬಿದ್ದರೆ, ಇನ್ನು ಕೆಲವರು ಗಾಯಗೊಂಡಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಸಾರ್ವಜನಿಕರು ಧಿಕ್ಕಾರ ಕೂಗಿದರು.
ಜನರನ್ನು ಚದುರಿಸಿದ ಬಳಿಕವಷ್ಟೇ ಹಂತಕ ಪ್ರವೀಣ್ ಚೌಗುಲೆಯನ್ನು ಹೊತ್ತ ವಾಹನ ಮನೆಯಿಂದ ಹೊರಗೆ ಹೋಗಿದೆ.