Site icon Vistara News

Udupi Murder : ಒಂದೇ ಕುಟುಂಬದ ನಾಲ್ವರನ್ನು ಕೊಂದವ ಅರೆಸ್ಟ್‌; ಕೊಲೆಗಾರ ಭದ್ರತಾ ಸಿಬ್ಬಂದಿ

Udupi murder killer praveen arrested

ಬೆಳಗಾವಿ: ಉಡುಪಿಯ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು (Four of Family murdered) ಅತ್ಯಂತ ಬರ್ಬರವಾಗಿ ಚೂರಿಯಿಂದ ಇರಿದು ಕೊಲೆ ಮಾಡಿದ ಹಂತಕನನ್ನು (Killer Arrest) ಪೊಲೀಸರು ಬಂಧಿಸಲು (Udupi police) ಸಫಲರಾಗಿದ್ದಾರೆ. ಹಂತಕ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಉಡುಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮಹಾರಾಷ್ಟ್ರ ಸಾಂಗ್ಲಿ ಮೂಲದ ಪ್ರವೀಣ್​​​​ ಅರುಣ್​​​ ಚೌಗಲೆ ಎಂಬಾತನೇ ಈ ಕೊಲೆಗಾರ. ಆತ ಕುಡಚಿಯ ತನ್ನ ಸಂಬಂಧಿ ಮನೆಯಲ್ಲಿ ಅಡಗಿ ಕುಳಿತಿದ್ದ. ಆತನ ಮೊಬೈಲ್‌ ಟವರ್‌ ಲೊಕೇಶನ್‌ ಆಧರಿಸಿ ಬಲೆ ಬೀಸಿದ ಪೊಲೀಸರು ಆತನನ್ನು ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: Family Murder : ಒಂದೇ ಕುಟುಂಬದ ನಾಲ್ವರ ಕೊಲೆ; ಹಂತಕನ ಟಾರ್ಗೆಟ್‌ ಏರ್‌ ಹೋಸ್ಟೆಸ್‌?

ಹಂತಕ ಪ್ರವೀಣ್‌ ಅರುಣ್‌ ಚೌಗಲೆ ಖಾಸಗಿ ಸೆಕ್ಯೂರಿಟಿ ಏಜೆನ್ಸಿಯ ಸಿಬ್ಬಂದಿಯಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಆತನಿಗೆ ಕೊಲೆಯಾದ ಕುಟುಂಬದ ಅಯ್ನಾಜ್‌ ಪರಿಚಯವಾಗಿತ್ತು ಎನ್ನಲಾಗಿದೆ. ಅಯ್ನಾಜ್‌ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು, ಹಂತಕ ಚೌಗಲೆ ಆಕೆಯಲ್ಲಿ ಅನುರಕ್ತನಾಗಿದ್ದಾನೆಂದು ಹೇಳಲಾಗಿದ್ದು, ಆಕೆ ಆರಂಭದಲ್ಲಿ ಆತನ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರೂ ಬಳಿಕ ದೂರಾಗಿದ್ದಳು ಎನ್ನಲಾಗಿದೆ. ಈ ಹಂತದಲ್ಲಿ ದ್ವೇಷ ಬೆಳೆಸಿಕೊಂಡ ಚೌಗಲೆ ಆಕೆಯ ಕುಟುಂಬವನ್ನೇ ಸರ್ವನಾಶ ಮಾಡಲು ಮುಂದಾಗಿದ್ದ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ.

ಭಾನುವಾರ ಮುಂಜಾನೆ ನಡೆದ ಭೀಕರ ನರಮೇಧ

ಕೆಮ್ಮಣ್ಣು ನೇಜಾರಿನ ನಿವಾಸಿ ನೂರ್‌ ಮಹಮ್ಮದ್‌ ಅವರ ಕುಟುಂಬದ ಮೇಲೆ ಈ ಭೀಕರ ದಾಳಿ ನಡೆದಿತ್ತು. ನೂರ್‌ ಮಹಮ್ಮದ್‌ ಅವರು ದುಬೈಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರ ಪತ್ನಿ ಹಸೀನಾ (45), ಪುತ್ರಿಯರಾದ ಅಫ್ನಾನ್‌ (23), ಅಯ್ನಾಜ್‌ (21) ಮತ್ತು ಅಸೀಮ್‌ (14) ಅವರನ್ನು ಆಗಂತುಕನೊಬ್ಬ ಭಾನುವಾರ ಬೆಳಗ್ಗೆ ಕೊಲೆ ಮಾಡಿದ್ದ. ಅಫ್ನಾನ್‌ ಅವರು ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದರೆ, ಅಯ್ನಾಜ್‌ ಏರ್‌ ಹೋಸ್ಟೆಸ್‌ ಆಗಿ ಕೆಲಸ ಮಾಡುತ್ತಿದ್ದಳು. ಅಸೀಂ ಏಳನೇ ತರಗತಿಯಲ್ಲಿ ಓದುತ್ತಿದ್ದ. ಕುಟುಂಬದ ಹಿರಿಯ ಮಗ ಅಸಾದ್‌ ಬೆಂಗಳೂರಿನಲ್ಲಿ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ.

ಭಾನುವಾರ ಮುಂಜಾನೆ 8.30ರ ಸುಮಾರಿಗೆ ಪ್ರವೀಣ್‌ ಚೌಗಲೆ ಉಡುಪಿಯ ಸಂತೆಕಟ್ಟೆಯಿಂದ ರಿಕ್ಷಾ ಮಾಡಿಕೊಂಡು ಈ ಮನೆಗೆ ಬಂದಿದ್ದ. ಬಂದವನೇ ಮನೆಗೆ ನುಗ್ಗಿ ಹಸೀನಾ, ಅಫ್ನಾನ್‌, ಅಯ್ನಾಜ್‌ ಮತ್ತು ಅಸೀಮ್‌ ಅವರನ್ನು ಕಿಚನ್‌, ಬೆಡ್‌ರೂಂ, ಬಾತ್‌ ರೂಂ ಬಳಿ ಮತ್ತು ಹಾಲ್‌ನಲ್ಲಿ ಇರಿದು ಕೊಲೆ ಮಾಡಿದ್ದಾನೆ.

ಸ್ವಲ್ಪ ಮಟ್ಟಿಗೆ ಬೋಳುಮಂಡೆ ಮತ್ತು ಕಂದು ಬಣ್ಣದ ಷರಟು ಧರಿಸಿದ್ದ ಚೌಗಲೆ ಅಲ್ಲಿಂದ ಮರಳಿ ಉಡುಪಿಗೆ ಬಂದು ಅಲ್ಲಿಂದ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕಾಗಿ ಐದು ತಂಡಗಳನ್ನು ರಚಿಸಲಾಗಿತ್ತು. ಇದೀಗ ಒಂದು ತಂಡ ಆತನನ್ನು ಬೆಳಗಾವಿಯಲ್ಲಿ ಸೆರೆ ಹಿಡಿದಿದೆ.

ಯಾಕೆ ನಡೆಯಿತು ಈ ಕೊಲೆ?

ಈ ಕೊಲೆಯ ಹಿಂದಿನ ಸಣ್ಣ ಸುಳಿವು ಮೊದಲೇ ದೊರಕಿತ್ತು. ಏರ್‌ ಹೋಸ್ಟೆಸ್‌ ಆಗಿರುವ ಕಿರಿಯ ಮಗಳ ಕಾರಣಕ್ಕಾಗಿ ಈ ಕುಟುಂಬ ಟಾರ್ಗೆಟ್‌ ಆಗಿದೆ ಎಂಬ ಸಂಶಯವಿತ್ತು. ಅದು ಈಗ ನಿಜವಾಗಿದೆ. ಗಗನಸಖಿಯಾಗಿರುವ ಆಕೆಗೆ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಆಗಿರುವ ಪ್ರವೀಣ ಚೌಗಲೆಯ ಪರಿಚಯವಾಗಿದೆ. ಅವರಿಬ್ಬರ ಮಧ್ಯೆ ಯಾವ ರೀತಿಯ ಆತ್ಮೀಯತೆ ಇತ್ತು ಎನ್ನುವುದು ತಿಳಿದಿಲ್ಲ. ಆದರೆ, ಚೌಗಲೆ ಮಾತ್ರ ಆಕೆಯ ಮೇಲೆ ಅತೀವವಾದ ಮೋಹವಿತ್ತು ಎಂದು ಹೇಳಲಾಗುತ್ತಿದೆ. ಆಕೆ ಯಾವುದೋ ಕಾರಣಕ್ಕೆ ಆತನನ್ನು ದೂರ ಮಾಡಿದಾಗ ದ್ವೇಷದಿಂದ ಈ ಕೃತ್ಯ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಸುಳಿವು ಸಿಕ್ಕಿದ್ದು ಎಲ್ಲಿ? ಮಂಗಳೂರು ವಿಮಾನ ನಿಲ್ದಾಣದಲ್ಲಾ?

ಯುವತಿ ಅಯ್ನಾಜ್‌ ಕೆಲಸ ಮಾಡುತ್ತಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲೂ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಅವರಿಗೆ ಕೆಲವೊಂದು ಮಾಹಿತಿಗಳು ಸಿಕ್ಕಿರುವ ಸಾಧ್ಯತೆ ಇದೆ. ಅದೇ ವೇಳೆ ಆಕೆಯ ಜತೆಗೆ ಚೆನ್ನಾಗಿದ್ದ ಪ್ರವೀಣ್‌ ಚೌಗಲೆ ನಾಪತ್ತೆಯಾಗಿರುವುದು ಕಂಡುಬಂದಿತ್ತು. ಇದೆಲ್ಲ ಕ್ಲೂಗಳನ್ನು ಇಟ್ಟುಕೊಂಡು ಹಂತಕನನ್ನು ಬೆನ್ನು ಹತ್ತಿದ್ದಾರೆ ಪೊಲೀಸರು.

Exit mobile version