Site icon Vistara News

Karnataka Politics : ಮೇಲ್ಮನೆ ನಾಮನಿರ್ದೇಶನ; ಉಮಾಶ್ರೀ, ಸೀತಾರಾಂ, ಸುಧಾಮ್ ದಾಸ್ ಹೆಸರು ಫೈನಲ್

karnataka assembly live CM Siddaramaiah and Vidhanasoudha

ಬೆಂಗಳೂರು: ವಿಧಾನ ಪರಿಷತ್ ನಾಮ ನಿರ್ದೇಶನ (Nominated to Legislative Council) ವಿಚಾರಕ್ಕೆ ಸಂಬಂಧಿಸಿ ಕೊನೆಗೂ ಮೂರು ಹೆಸರನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅಂತಿಮಗೊಳಿಸಿದ್ದಾರೆ. ಮಾಜಿ ಸಚಿವೆ ಉಮಾಶ್ರೀ (Former Minister Umashree), ಮಾಜಿ ಸಚಿವ ಎಂ.ಆರ್. ಸೀತಾರಾಂ (Former minister MR Sitaram) ಹಾಗೂ ಮಾಜಿ ಇಡಿ ಅಧಿಕಾರಿ ಸುಧಾಮ್ ದಾಸ್ (Sudam Das) ಹೆಸರು ಬಹುತೇಕ ಫೈನಲ್ ಆಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಕೊನೇ ಕ್ಷಣದಲ್ಲಿ ಮನ್ಸೂರ್ ಅಲಿಖಾನ್ ಹೆಸರನ್ನು ಕೈಬಿಟ್ಟಿರುವುದು ಮುಸ್ಲಿಂ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.

ಸೋಮವಾರ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ (Thaawar Chand Gehlot) ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡುವ ಸಾಧ್ಯತೆ ಇದೆ. ಆದರೆ, ಸುಧಾಮ್ ದಾಸ್ ಹೆಸರಿಗೆ ಕಾಂಗ್ರೆಸ್‌ ನಾಯಕರಲ್ಲೇ ವಿರೋಧ ವ್ಯಕ್ತವಾಗಿದೆ. ಈ ನಡುವೆ ಉಮಾಶ್ರೀಗೆ ಸ್ಥಾನ ನೀಡುತ್ತಿರುವ ಬಗ್ಗೆಯೂ ಹಿರಿಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಇದ್ಯಾವುದಕ್ಕೂ ಬಗ್ಗದ ಸಿಎಂ ಸಿದ್ದರಾಮಯ್ಯ ಅವರು, ಇವರನ್ನು ಸೇರಿಸಿಕೊಳ್ಳಬೇಕೆಂದು ಪಟ್ಟು ಹಿಡಿದಿದ್ದಾರೆ.

ಕಾಂಗ್ರೆಸ್‌ನಲ್ಲಿ ಸಚಿವರ ವಿರುದ್ಧ ಶಾಸಕರು ಅಸಮಾಧಾನ ಕೂಗನ್ನು ಹಾಕಿ ಅದನ್ನೇನು ತಕ್ಕಮಟ್ಟಿಗೆ ಶಮನ ಆಗಿದೆ ಎಂದು ಅಂದುಕೊಳ್ಳುತ್ತಿರುವಾಗ ಈಗ ಪರಿಷತ್ ಫೈಟ್ ಆರಂಭವಾಗಿದೆ. ಒಕ್ಕಲಿಗರು ಸೇರಿದಂತೆ ಇತರರಿಗೆ ಪರಿಷತ್ ಸ್ಥಾನ ನೀಡಲು ಲಾಬಿ ನಡೆದಿದೆ. ಇದಕ್ಕಾಗಿ ಸಾಮಾಜಿಕ ನ್ಯಾಯ ಮತ್ತು ಜಾತಿ ಸಮೀಕರಣದ ಮೂಲಕ ಆಯ್ಕೆ ಮಾಡುವಂತೆ ಸಿಎಂ ಮೇಲೆ ಒತ್ತಡ ಹೇರಲಾಗುತ್ತಿದೆ. ಸುಧಾಮ್ ದಾಸ್‌ ಪರ ಡಿ.ಕೆ. ಶಿವಕುಮಾರ್‌ ಹಾಗೂ ಡಿ.ಕೆ. ಸುರೇಶ್‌ ಇದ್ದಾರೆ. ಇತ್ತ ಸೀತಾರಾಂ ಪರ ಸಿಎಂ ನಿಂತಿದ್ದಾರೆ. ಇದು ಈಗ ಹಲವರು ಕಣ್ಣು ಕೆಂಪಗಾಗಲು ಕಾರಣವಾಗಿದೆ.

ಮನ್ಸೂರ್ ಅಲಿಖಾನ್ ಹೆಸರು ಕೈಬಿಟ್ಟ ಸರ್ಕಾರ

ಈ ಮೊದಲು ಕೇಂದ್ರ ಮಾಜಿ ಸಚಿವ ಕೆ. ರೆಹಮಾನ್‌ ಖಾನ್‌ ಪುತ್ರ ಮನ್ಸೂರ್ ಅಲಿಖಾನ್ ಹೆಸರನ್ನು ಸಹ ವಿಧಾನ ಪರಿಷತ್ ನಾಮನಿರ್ದೇಶನ ಸ್ಥಾನಕ್ಕೆ ಸೂಚಿಸಲಾಗಿತ್ತು. ಇವರ ಜತೆಗೆ ಎಂ.ಆರ್. ಸೀತಾರಾಮ್, ಸುಧಾಮ್ ದಾಸ್,‌ ಮನ್ಸೂರ್ ಅಲಿಖಾನ್ ಹೆಸರುಗಳನ್ನು ಸಿಎಂ ಸಿದ್ದರಾಮಯ್ಯ. ಶಿಫಾರಸು ಮಾಡಿದ್ದರು. ಸಿಎಂ ಶಿಫಾರಸು ಮಾಡಿದ್ದ ಪಟ್ಟಿಗೆ ಆಕ್ಷೇಪಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌, ವಿವರಣೆ ಕೇಳಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿಲುವನ್ನು ಬದಲಾಯಿಸಿ, ಕೊನೇ ಹಂತದಲ್ಲಿ ‌ಮಾಜಿ ಸಚಿವೆ ಉಮಾಶ್ರೀ ಹೆಸರನ್ನು ಸೂಚಿಸಿತು.

ಈಗ ಮನ್ಸೂರ್ ಅಲಿಖಾನ್ ಹೆಸರನ್ನು ಕೈಬಿಟ್ಟಿರುವ ಸರ್ಕಾರದ ನಿರ್ಧಾರಕ್ಕೆ ಮುಸ್ಲಿಂ ಮುಖಂಡರು ಆಕ್ರೋಶಗೊಂಡಿದ್ದಾರೆ. ಮನ್ಸೂರ್ ಅಲಿಖಾನ್‌ಗೆ ಎಂಎಲ್‌ಸಿ ಸ್ಥಾನ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮುಖಂಡರ ಮನವೊಲಿಸಲು ಕಾಂಗ್ರೆಸ್‌ ನಾಯಕರು ಸಭೆ ನಡೆಸಲಿದ್ದಾರೆ. ಒಂದು ವೇಳೆ ಮನ್ಸೂರ್ ಅಲಿಖಾನ್‌ಗೆ ಈ ಸ್ಥಾನ ಕೈತಪ್ಪಿದರೆ ಇನ್ನೊಬ್ಬ ಮುಸ್ಲಿಂ ವ್ಯಕ್ತಿಗೇ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: Weather report : ಕರಾವಳಿ, ಮಲೆನಾಡಿನಲ್ಲಿಂದು ಜಿಟಿ ಜಿಟಿ ಮಳೆ

ಆದರೆ, ಮಹಿಳಾ ಕೋಟಾದಡಿ ಯಾರಿಗೂ ಸ್ಥಾನ ನೀಡಿಲ್ಲ. ಹೀಗಾಗಿ ಉಮಾಶ್ರೀ ಅವರನ್ನ ನಾಮನಿರ್ದೇಶನ ಮಾಡಬೇಕು ಎಂಬ ಬೇಡಿಕೆಯನ್ನೂ ತೇಲಿಬಿಡಲಾಗಿದೆ. ಇನ್ನು ಉಮಾಶ್ರೀ ಪರ ಸಿಎಂ ಸಿದ್ದರಾಮಯ್ಯ ಸಹ ಒಲವು ತೋರಿದ್ದಾರೆ. ಅಲ್ಲದೆ, ಅವರಿಗೆ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಹ ನೀಡಿಲ್ಲ. ಟಿಕೆಟ್ ಕೇಳಿದ ಸಂದರ್ಭದಲ್ಲಿ ಎಂಎಲ್‌ಸಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್‌ ಕೊಡವುದಾಗಿ ಸಿಎಂ ಹೇಳುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version