Site icon Vistara News

Unauthorized Flex: ಅನಧಿಕೃತ ಫ್ಲೆಕ್ಸ್, ಬ್ಯಾನರ್; ಕ್ರಮ ಕೈಗೊಳ್ಳದ ಸರ್ಕಾರಕ್ಕೆ ಹೈಕೋರ್ಟ್‌ ಕ್ಲಾಸ್

Karnataka High court

karnataka High court

ಬೆಂಗಳೂರು: ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ ಅಳವಡಿಕೆಗೆ ಕಡಿವಾಣ ಹಾಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಅನಧಿಕೃತ ಜಾಹೀರಾತು ಹಾವಳಿ ತಡೆಯಲು ಪಂಚವಾರ್ಷಿಕ ಯೋಜನೆ ಬೇಕೇ? ಫ್ಲೆಕ್ಸ್ (Unauthorized Flex) ತೆರವಿಗೆ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಗರಂ ಆಗಿದ್ದಾರೆ.

ಚುನಾವಣೆ ವೇಳೆ 60 ಸಾವಿರ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಲಾಗಿದೆ. ಆದರೆ, ಕೇವಲ 134 ದೂರು ಪರಿಗಣಿಸಿ 40 ಎಫ್‌ಐಆರ್ ದಾಖಲಿಸಲಾಗಿದೆ. ಫ್ಲೆಕ್ಸ್ ಅಳವಡಿಸಿದ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಮೇಲೆ ಕ್ರಮ ಯಾಕಿಲ್ಲ? ಬೆಂಗಳೂರು ಸುಂದರವಾಗಿರುವುದು ಸರ್ಕಾರಕ್ಕೆ ಬೇಕಿಲ್ಲವೇ? ನಗರದ ತುಂಬೆಲ್ಲಾ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ ಇರಬೇಕೆಂದು ಸರ್ಕಾರದ ಅಪೇಕ್ಷೆಯೇ ಎಂದು ಬಿಬಿಎಂಪಿ ಹಾಗೂ ಸರ್ಕಾರವನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಪ್ರಶ್ನಿಸಿದ್ದಾರೆ.

ಬ್ರ್ಯಾಂಡ್ ಬೆಂಗಳೂರಿಗೆ ಫ್ಲೆಕ್ಸ್, ಬ್ಯಾನರ್‌ಗಳಿಂದ ಕಳಂಕ ಉಂಟಾಗಿದೆ. ರಾಜಧಾನಿಯ ಬಗ್ಗೆ ಹೂಡಿಕೆದಾರರಿಗೆ ಎಂತಹ ಚಿತ್ರಣ ನೀಡುತ್ತಿದ್ದೀರಿ?, ನಗರದ ಸ್ಥಿತಿ ಸುಧಾರಿಸದಿದ್ದರೆ ಹೂಡಿಕೆ ಹೇಗೆ ತರುತ್ತೀರಿ? ಬೆಂಗಳೂರನ್ನು ಅದರ ಅದೃಷ್ಟಕ್ಕೇ ಬಿಡಲಾಗಿದೆ. ಇದು ಅಚ್ಚರಿ, ಆಘಾತಕಾರಿ ಹಾಗೂ ಆತ್ಮಸಾಕ್ಷಿ ಕಲಕುವಂತಹದ್ದಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬಿಬಿಎಂಪಿ ಅಸಹಾಯಕತೆಯಿಂದ ಕೈ ಎತ್ತಿದೆ, ಆದರೆ, ನೀವೇನು ಮಾಡುತ್ತಿದ್ದೀರಿ ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿರುವ ಸಿಜೆ ಪಿ.ಬಿ. ವರಾಳೆ ಅವರು, ಇನ್ನು ಮುಂದೆ ಒಂದೇ ಒಂದು ಅನಧಿಕೃತ ಫ್ಲೆಕ್ಸ್ ಕಂಡರೂ ತಲಾ 50 ಸಾವಿರ ರೂ. ದಂಡ ವಿಧಿಸಬೇಕು. ಬಿಬಿಎಂಪಿ, ರಾಜ್ಯ ಸರ್ಕಾರ ತಲಾ 50 ಸಾವಿರ ಠೇವಣಿ ಇಡಬೇಕು. ಫ್ಲೆಕ್ಸ್ ಮೂಲಕ ಶುಭಾಶಯ ಕೋರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು ಎಂದು ತಾಕೀತು ಮಾಡಿದ್ದಾರೆ.

ಇದನ್ನೂ ಓದಿ | OBC Commission : ಅನಾಥ ಮಕ್ಕಳಿಗೂ ಮೀಸಲಾತಿ; ಹಿಂದುಳಿದ ವರ್ಗಗಳ ಆಯೋಗ ಶಿಫಾರಸು

ಬೆಂಗಳೂರಿನ ಆಡಳಿತದ ಹೊಣೆ ಹೊತ್ತವರು ಈ ಬಗ್ಗೆ ಗಮನ ಹರಿಸಬೇಕು. ಮೂರು ವಾರಗಳಲ್ಲಿ ಕ್ರಮ ಕೈಗೊಂಡ ವರದಿ ಸಲ್ಲಿಕೆ ಸಲ್ಲಿಸಬೇಕು ಎಂದು ಸಿ.ಜೆ. ಪ್ರಸನ್ನ ಬಿ. ವರಾಳೆ, ನ್ಯಾ. ಎಂ.ಜಿ.ಎಸ್. ಕಮಲ್ ಅವರಿದ್ದ ಪೀಠ ಬಿಬಿಎಂಪಿ, ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಚುನಾವಣಾ ಅಕ್ರಮ ಆರೋಪ; ಎಚ್.ಡಿ.ರೇವಣ್ಣಗೆ ನೋಟಿಸ್

ಹಾಸನ: ಹೊಳೆನರಸೀಪುರದಿಂದ ಎಚ್. ಡಿ.ರೇವಣ್ಣ ಆಯ್ಕೆ ಅಸಿಂಧು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ಪೀಠ, ಚುನಾವಣಾ ತಕರಾರು ಅರ್ಜಿ ಸಂಬಂಧ ಎಚ್.ಡಿ.ರೇವಣ್ಣಗೆ ನೋಟಿಸ್ ನೀಡಿದೆ.

ಚುನಾವಣಾ ಅಕ್ರಮಗಳಿಂದಾಗಿ ಎಚ್.ಡಿ. ರೇವಣ್ಣ ಜಯಗಳಿಸಿದ್ದಾರೆ. 2ನೇ ಸ್ಥಾನದಲ್ಲಿದ್ದ ಶ್ರೇಯಸ್ ಪಟೇಲ್ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಹೀಗಾಗಿ ಇವರಿಬ್ಬರ ಮತಗಳಿಕೆಯನ್ನು ಅಸಿಂಧುಗೊಳಿಸಲು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ದೇವರಾಜೇಗೌಡ ಸಲ್ಲಿಸಿದ್ದರು.

Exit mobile version