ಬೆಂಗಳೂರು: ರಾಜ್ಯದಲ್ಲಿ ಅನಧಿಕೃತವಾಗಿ ಟ್ಯೂಷನ್, ಕೋಚಿಂಗ್ ಕ್ಲಾಸ್ ಮಾಡುವ ಹಾವಳಿ ಹೆಚ್ಚಿದೆ. ಮಾನ್ಯತೆ ಪಡೆದ ರಾಜ್ಯದ ಯಾವುದೇ ಶಾಲಾ-ಕಾಲೇಜುಗಳಲ್ಲಿ ಹಾಗೂ ಸಿಬ್ಬಂದಿ ಟ್ಯೂಷನ್ ತರಗತಿಗಳನ್ನು ನಡೆಸುವ ಹಾಗಿಲ್ಲ. ಒಂದು ವೇಳೆ ಟ್ಯೂಷನ್ ತರಗತಿ ನಡೆಸಬೇಕೆಂದರೆ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆಯಬೇಕು. ಜತೆಗೆ ನಿಯಮಗಳಾದ ನಿವೇಶನ, ಕಟ್ಟಡ, ಮಕ್ಕಳ ಸುರಕ್ಷತೆಗಳಂತಹ ವಿಚಾರಗಳನ್ನು ಅನುಸರಿಸಬೇಕು. ಆದರೆ, ಇದರ ನಿಯಮವೇ ಪಾಲನೆಯಾಗುತ್ತಿಲ್ಲ.
ರಾಜ್ಯಾದ್ಯಂತ ಸಾವಿರಾರು ಟ್ಯೂಷನ್ ತರಗತಿಗಳು, ಕೋಚಿಂಗ್ ಸೆಂಟರ್‌ಗಳು ಸರ್ಕಾರದಿಂದ ಮಾನ್ಯತೆ ಪಡೆಯದೆ, ಶಿಕ್ಷಣ ಇಲಾಖೆಯ ನಿಯಮಗಳನ್ನೂ ಪಾಲಿಸದೆ ರಾಜಾರೋಷವಾಗಿ ನಾಯಿ ಕೊಡೆಯಂತೆ ತಲೆ ಎತ್ತಿವೆ ಎಂದು ರೂಪ್ಸಾ ಸಂಘಟನೆ ಆರೋಪಿಸಿದೆ.
ಇದನ್ನೂ ಓದಿ | ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ
ಶಾಲಾ-ಕಾಲೇಜು ಶುಲ್ಕಕ್ಕಿಂತ ಟ್ಯೂಷನ್ ಶುಲ್ಕವೇ ದುಪ್ಪಟ್ಟು!
ಈ ಅಕ್ರಮಗಳನ್ನು ನಿಯಂತ್ರಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಕೆಲ ಪ್ರತಿಷ್ಠಿತ ಟ್ಯೂಷನ್ ಕೇಂದ್ರಗಳಿಗೆ ಮಣಿದು, ಕಣ್ಣು ಕಿವಿ ಮತ್ತು ಬಾಯಿ ಮುಚ್ಚಿಕೊಂಡು ತಮಗರಿವೇ ಇಲ್ಲದಂತೆ ಮೌನವಾಗಿದ್ದಾರೆ. ಅನಧಿಕೃತ ಟ್ಯೂಷನ್, ಕೋಚಿಂಗ್ ಸೆಂಟರ್‌ಗಳ ನಿಯಂತ್ರಣ ನಿಯಮಗಳಿರುವುದೇ ಅಧಿಕಾರಿಗಳ ಜೇಬು ತುಂಬಿಸಿ ಕೊಳ್ಳಲೆಂಬಂತೆ ವರ್ತಿಸುತ್ತಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.
ಶಾಲಾ-ಕಾಲೇಜುಗಳ ಶುಲ್ಕಕ್ಕಿಂತ ಟೂಷನ್ ಶುಲ್ಕವೇ ಜಾಸ್ತಿ ಇದೆ. ಬೆಳಗ್ಗೆ 7ರಿಂದ ಸಾಯಂಕಾಲದವರೆಗೂ ಮಕ್ಕಳನ್ನು ಹಿಡಿದಿಟ್ಟು ಶಿಕ್ಷಣದ ಹೆಸರಲ್ಲಿ ಮೋಸ ಮಾಡುತ್ತಿವೆ. ಈ ಸಂಸ್ಥೆಗಳಿಗೆ ಯಾವುದೇ ಸಾಮಾಜಿಕ ಜವಾಬ್ದಾರಿ ಇಲ್ಲವೆಂದು ರೂಪ್ಸಾ ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.
ಪ್ರತಿಷ್ಠಿತ ಸಂಸ್ಥೆಗಳು ಭಾಗಿ
ಆಳ್ವಾಸ್, ಎಕ್ಸ್ಪರ್ಟ್, ಬೇಸ್, ರೆಸೋನನ್ಸ್, ಆಕಾಶ್ ಅಲೆನ್, ಬೈಜೂಸ್, ವೇದಾಂತ್ ಸಂಸ್ಥೆಗಳೂ ಟ್ಯೂಷನ್ ತರಗತಿಗಳನ್ನು ಪಿಯುಸಿ ಕಾಲೇಜುಗಳ ಆವರಣದಲ್ಲಿ ಬಹಿರಂಗವಾಗಿ ನಡೆಸುತ್ತಿವೆ. ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರನ್ನು ಬಳಸಿಕೊಂಡು ಸರ್ಕಾರಕ್ಕೂ ಟ್ಯಾಕ್ಸ್ ಕಟ್ಟದೆ, NEET, JEE, CET, ಹೆಸರಿನಲ್ಲಿ ಲಕ್ಷಾಂತರ ಶುಲ್ಕ ವಸೂಲಿ ಮಾಡುತ್ತಿವೆ ಎಂದು ತಾಳಿಕಟ್ಟೆ ಆರೋಪಿಸಿದ್ದಾರೆ.
ಹಾಗೆಯೇ ಉತ್ತರ ಕರ್ನಾಟಕದಲ್ಲಿ ಸೈನಿಕ ಶಾಲೆ, ನವೋದಯ ಶಾಲೆ, ಮುರಾರ್ಜಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಅಂತ ಸಾವಿರಾರು ಹಣವಂತ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ನೋಂದಾಯಿಸಿಕೊಂಡು, ಅನೇಕ ಖಾಸಗಿ ಶಾಲೆಗಳಲ್ಲಿ ನಡೆಸುವ ವಸತಿ ಟ್ಯೂಷನ್ ತರಗತಿಗಳನ್ನು ಪಡೆಯುತ್ತವೆ. ನಾಯಿ ಕೊಡೆಯಂತೆ ತಲೆಯೆತ್ತಿರುವ ಕಾನೂನುಬಾಹಿರ ಟ್ಯೂಷನ್ ತರಗತಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಲೋಕೇಶ್ ಪತ್ರವನ್ನು ಬರೆದಿದ್ದಾರೆ.
ಇದನ್ನೂ ಓದಿ | IT Raid | ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ