Site icon Vistara News

Congress Guarantee: ಯುವನಿಧಿ ಜಾರಿ: IAS, KAS, ಇತರೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುವವರಿಗೆ ಸುವರ್ಣಾವಕಾಶ?

yuvanidhi

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಘೋಷಣೆ ಮಾಡಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಪ್ರತಿ ಯೋಜನೆಗೂ ನಿಬಂಧನೆಗಳನ್ನು ವಿಧಿಸಲಾಗಿದ್ದು, ನಿರುದ್ಯೋಗ ಭತ್ಯೆ ವಿಚಾರದಲ್ಲಿ ಅನೇಕ ನಿಬಂಧನೆ ವಿಧಿಸಿಸಿದೆ. ಆದರೆ ಈ ನಿಬಂಧನೆ ಒಳಗೇ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವವರಿಗೆ ಸುವರ್ಣಾವಕಾಶದ ಬಾಗಿಲು ತೆರೆದಿದೆ ಎನ್ನಲಾಗುತ್ತಿದೆ.

ಪದವೀಧರರಾಗಿ ನಿರುದ್ಯೋಗಿಗಳಾಗಿರುವವರಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂ. ನೀಡುವುದಾಗಿ ಕಾಂಗ್ರೆಸ್‌ ಹೇಳಿತ್ತು. ಗರಿಷ್ಠ 24 ತಿಂಗಳು ಅಥವಾ ಕೆಲಸ ಸಿಗುವವರೆಗೆ ಯಾವುದು ಮೊದಲೋ ಅಲ್ಲಿವರೆಗೆ ನೀಡಲಾಗುತ್ತದೆ ಎಂದು ಹೇಳಿತ್ತು.

ಆದರೆ ಈ ಯೋಜನೆಯನ್ನು ಎಲ್ಲ ಪದವೀಧರ ನಿರುದ್ಯೋಗಿಗಳಿಗೂ ಅನ್ವಯ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಸಕ್ತ ವರ್ಷ ಪದವಿ ಹಾಗೂ ಡಿಪ್ಲೊಮಾ ಪೂರೈಸಿದವರಷ್ಟೆ ಈ ಯೋಜನೆಗೆ ಅರ್ಹರಾಗುತ್ತಾರೆ. ಪದವಿ ಮತ್ತು ಡಿಪ್ಲೊಮಾ ಮುಗಿಸಿದ ತಕ್ಷಣ ನಿರುದ್ಯೋಗ ಭತ್ಯೆ ನೀಡಲಾಗದು. ಪದವಿ ಹಾಗೂ ಡಿಪ್ಲೊಮಾ ಮುಗಿಸಿ 180 ದಿನಗಳಾದರೂ ಉದ್ಯೋಗ ಲಭಿಸದವರು ಸರ್ಕಾರಕ್ಕೆ ಅರ್ಜಿ ಸಲ್ಲಿಸಬೇಕು. ಅವರಿಗೆ ಸರ್ಕಾರಿ, ಖಾಸಗಿ ಸೇರಿ ಯಾವುದೇ ರೀತಿಯ ಉದ್ಯೋಗ ಲಭಿಸುವವರೆಗೂ ಅಥವಾ ಗರಿಷ್ಠ 24 ತಿಂಗಳವರೆಗೆ ಹಣ ನೀಡಲಾಗುತ್ತದೆ. ಯಾವಾಗಿನಿಂದ ಅರ್ಜಿ ಸಲ್ಲಿಸುತ್ತಾರೆಯೋ ಆಗಿನಿಂದ ಜಾರಿ ಎಂದು ಸಿದ್ದರಾಮಯ್ಯ ಹೇಳಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲ:ಯುವ ನಿಧೀ ಯೋಜನೆಯು ಸಾಮಾನ್ಯ ಪದವಿಯಷ್ಟೆ ಅಲ್ಲದೆ ತಾಂತ್ರಿಕ, ವೈದ್ಯಕೀಯ ಪದವೀಧರರಿಗೂ ಅನ್ವಯ ಆಗುತ್ತದೆ. ಸಾಮಾನ್ಯವಾಗಿ ಪದವಿ ಪೂರೈಸಿದ ಕೂಡಲೆ ಅನೇಕರಿಗೆ ಐಎಎಸ್‌, ಕೆಎಎಸ್‌, ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಾರೆ. ಈ ಸಮಯದಲ್ಲಿ ವ್ಯಾಸಂಗ ಮಾಡಲು ಬೆಂಗಳೂರು ಸೇರಿ ಇತರೆ ನಗರಗಳಲ್ಲಿ ಉಳಿದುಕೊಳ್ಳಲು, ಊಟ ತಿಂಡಿ ಸೇರಿ ಇನ್ನಿತರ ಖರ್ಚಿಗೆ ಮನೆಯಿಂದ ಹಣ ಪಡೆಯಬೇಕಾಗುತ್ತದೆ. ಓದಿದ್ದು ಮುಗಿದ ನಂತರವೂ ಮನೆಯವರಿಂದ ಹಣ ಪಡೆದರೆ ಹೊರೆಯಾಗುತ್ತದೆ ಎಂಬ ಕಾರಣಕ್ಕೇ ಅನೇಕರು ಸ್ಪರ್ಧಾತ್ಮಕ ಪರೀಕ್ಷೆ ಕನಸನ್ನು ಮುಂದೂಡುತ್ತಾರೆ. ಇಂತಹವರಿಗೆ ಒಂದಷ್ಟು ಪ್ರಮಾಣದಲ್ಲಿ ಯುವನಿಧಿ ಸಹಾಯಕ್ಕೆ ಬರಬಹುದು.

ಬಿಕಾಂ ಪೂರ್ಣಗೊಳಿಸಿದ ನಂತರ ಸಿಎ ಕಚೇರಿಗಳಲ್ಲಿ ಆರ್ಟಿಕಲ್‌ಷಿಪ್‌ ಮಾಡುವವರು, ಕಾನೂನು ಪದವಿ ನಂತರ ಹಿರಿಯ ವಕೀಲರ ಕಚೇರಿಯಲ್ಲಿ ಇಂಟರ್ನ್‌ಷಿಪ್‌ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೇವಲ 4-5 ಸಾವಿರ ರೂ. ವೇತನ ನೀಡಲಾಗುತ್ತದೆ. ಅಂಥವರಿಗೂ ಯುವನಿಧಿಯಿಂದ ಅನುಕೂಲವಾಗುವ ಸಾಧ್ಯತೆಯಿದೆ. ಉದ್ಯೋಗ ಎಂದರೆ ಇಎಸ್‌ಐ, ಇಪಿಎಫ್‌ಒ ಖಾತೆ ತೆರೆದವರು, ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರಿ ಸೇರಿದವರು.. ಈ ರೀತಿ ಸರ್ಕಾರ ಪರಿಗಣಿಸುವುದರಿಂದ ಇಂತಹ ವ್ಯವಸ್ಥೆಯಿಂದ ಹೊರಗಿರುವವರು ನಿರುದ್ಯೋಗಿಗಳು ಎಂದೇ ಪರಿಗಣಿಸಲ್ಪಡುವ ಸಾಧ್ಯತೆಯಿದೆ.

ಇದೆಲ್ಲವನ್ನೂ ಹೊರತುಪಡಿಸಿ, ಪದವಿ ಹಾಗೂ ಡಿಪ್ಲೊಮಾ ನಂತರ ಯಾವುದೇ ಸಂಸ್ಥೆಯಲ್ಲಿ ಉದ್ಯೋಗ ಮಾಡದೆ ಸ್ವಂತ ಉದ್ಯೋಗ ಮಾಡುವ, ಕುಟುಂಬದಿಂದ ಬಂದ ವ್ಯಾಪಾರದಲ್ಲೇ ಮುಂದುವರಿಯುವ, ಕೃಷಿ ಕಡೆಗೆ ಧಾವಿಸುವ ಪದವಿ ಹಾಗೂ ಡಿಪ್ಲೊಮಾ ಪದವೀಧರರಿಗೂ ಎರಡು ವರ್ಷದವರೆಗೆ ಹಣ ಲಭಿಸುತ್ತದೆ. ಈ ಎಲ್ಲ ಯೋಜನೆ ಕುರಿತು ಸರ್ಕಾರ ಇನ್ನಷ್ಟೇ ಮಾರ್ಗಸೂಚಿ ಹೊರಡಿಸಬೇಕಿದ್ದು, ನಂತರ ಸ್ಪಷ್ಟತೆ ಲಭಿಸಲಿದೆ.

ಇದನ್ನೂ ಓದಿ: Congress Guarantee : ಎಲ್ಲರಿಗೂ ಫ್ರೀ ಫ್ರೀ ಫ್ರೀ… ಐದು ಗ್ಯಾರಂಟಿ ಯೋಜನೆಗಳ ಕಂಡೀಷನ್‌, ವೇಳಾಪಟ್ಟಿ ವಿವರ ಇಲ್ಲಿದೆ

Exit mobile version