ಬೆಂಗಳೂರು: ಇಲ್ಲಿನ ಯಶವಂತಪುರ ರೈಲ್ವೇ ನಿಲ್ದಾಣದ ಗೂಡ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಬ್ಲ್ಯೂ ಪ್ಲಾಸ್ಟಿಕ್ ಡ್ರಮ್‌ವೊಂದಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ಶವವೊಂದು ಪತ್ತೆ ಆಗಿದೆ. ಈ ಹಿಂದೆ ಬಂಗಾರಪೇಟೆ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಸೀಟೊಂದರ ಅಡಿಯಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲವೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ (Unidentified body found) ಪತ್ತೆಯಾಗಿತ್ತು.
ಪ್ಲಾಟ್‌ಫಾರ್ಮ್ ನಂ. 1ರಲ್ಲಿ ಬಟ್ಟೆ ತುಂಬಿದ ಪ್ಲಾಸ್ಟಿಕ್ ಡ್ರಮ್‌ನಿಂದ ವಿಪರೀತ ದುರ್ವಾಸನೆ ಬರುತ್ತಿತ್ತು. ಇದನ್ನು ರೈಲು ನಿಲ್ದಾಣದ ಸ್ವೀಪರ್ ಜಯಮ್ಮ ಎಂಬುವವರು ಗಮನಿಸಿದ್ದರು. ಕೂಡಲೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಯಶವಂತಪುರ ರೈಲ್ವೆ ಪೊಲೀಸರೇ ಶಾಕ್ ಆಗಿದ್ದರು.
ಕಾರಣ ಬ್ಲ್ಯೂ ಕಲರ್ ಡ್ರಮ್‌ನ ಮೇಲ್ಭಾಗದಲ್ಲಿ ಬಟ್ಟೆ ತುರುಕಲಾಗಿತ್ತು. ಆದರೆ, ಬಟ್ಟೆಯನ್ನು ಹೊರತೆಗೆದು ನೋಡಿದಾಗ ಅದರಲ್ಲಿ ಸುಮಾರು 20 ವರ್ಷ ವಯಸ್ಸಿನ ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಇರುವುದು ಕಂಡು ಬಂದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಯಶವಂತಪುರ ರೈಲ್ವೇ ಪೊಲೀಸರು ಯುವತಿಯ ಗುರುತು ಪತ್ತೆ ಹಚ್ಚುತ್ತಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸೆಂಬರ್‌ನಲ್ಲೂ ಪತ್ತೆಯಾಗಿತ್ತು ಮಹಿಳೆಯ ಮೃತದೇಹ!
ಕಳೆದ ಡಿಸೆಂಬರ್ 9ರಂದು ಬಂಗಾರಪೇಟೆ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಸೀಟೊಂದರ ಅಡಿಯಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲವೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ (Unidentified body found) ಪತ್ತೆಯಾಗಿತ್ತು. ಕೆಜಿಎಫ್‌ನಿಂದ ಬೆಂಗಳೂರಿನ ಕಡೆಗೆ ಬರುತ್ತಿದ್ದ ರೈಲಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮೃತದೇಹಕ್ಕೆ ಬೆಡ್‌ಶೀಟ್ ಹೊದಿಸಲಾಗಿತ್ತು. ಅಲ್ಲದೆ, ಅನುಮಾನ ಬಾರದಿರಲಿ ಎಂದು ಬಟ್ಟೆಗಳ ನಡುವೆ ಮೃತದೇಹವನ್ನು ತುರುಕಲಾಗಿತ್ತು. ಬಳಿಕ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲದೊಳಗೆ ಹಾಕಿ ಯಾರಿಗೂ ತಿಳಿಯದಂತೆ ರೈಲಿನ ಸೀಟಿನೊಳಗೆ ಇಟ್ಟು ಕೊಲೆಗಡುಕರು ಪರಾರಿಯಾಗಿದ್ದರು.
ರಾತ್ರಿ 11 ಗಂಟೆಗೆ ರೈಲು ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ)ಗೆ ಬಂದಾಗ ರೈಲ್ವೇ ಹವಾನಿಯಂತ್ರಣ ಮೆಕ್ಯಾನಿಕ್ ಇದನ್ನು ಗುರುತಿಸಿದ್ದಾರೆ. ರೈಲಿನಿಂದ ಪ್ರಯಾಣಿಕರೆಲ್ಲರೂ ಇಳಿದರೂ ಒಂದು ಸೀಟ್‌ನ ಕೆಳಬದಿಯಲ್ಲಿ ಇರುವ ಚೀಲವನ್ನು ಮಾತ್ರ ಯಾರೂ ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಅನುಮಾನ ಮೂಡಿದ್ದು, ರೈಲ್ವೆ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ | liquor bar protest | ರಾತ್ರಿ ಮದ್ಯ ಸೇವಿಸಿದವನು ಬೆಳಗ್ಗೆ ಸಾವು; ಬಾರ್ ಮುಂದೆ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ