ಬೆಂಗಳೂರು: ವಿದ್ಯುತ್ ಕಳವು ಆರೋಪದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಜೆಡಿಎಸ್ ಕಚೇರಿ ಜೆಪಿ ಭವನಕ್ಕೆ ʼಕರೆಂಟ್ ಕಳ್ಳ ಕುಮಾರಸ್ವಾಮಿʼ, ʼವಿದ್ಯುತ್ ಕಳ್ಳ ಕುಮಾರಸ್ವಾಮಿʼ ಎನ್ನುವ ಬರಹವುಳ್ಳ ಅವಹೇಳನಕಾರಿ ಪೋಸ್ಟರ್ ಅಂಟಿಸಿರುವುದು ಕಂಡುಬಂದಿದೆ. ಮನೆ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಆರೋಪದಲ್ಲಿ ಮಾಜಿ ಸಿಎಂ ಮೇಲೆ ಬೆಸ್ಕಾಂ ಜಾಗೃತ ದಳ ಪ್ರಕರಣದ ದಾಖಲಿಸಿಕೊಂಡಿತ್ತು. ಹೀಗಾಗಿ ಎಚ್‌ಡಿಕೆ ಅವರನ್ನು ವ್ಯಂಗ್ಯವಾಡಲು ಕಿಡಿಗೇಡಿಗಳು ಪೋಸ್ಟರ್ ಅಂಟಿಸಿದ್ದಾರೆ.
ಕುಮಾರಸ್ವಾಮಿ ಕರೆಂಟ್ 200 ಯುನಿಟ್ ಮಾತ್ರ ಉಚಿತ ನೆನಪಿಟ್ಟುಕೊಳ್ಳಿ, ಹೆಚ್ಚು ಕದಿಯಬೇಡಿ. ಕರೆಂಟ್ ಕದ್ದರೂ ಎಚ್‌ಡಿಕೆ ಪ್ರಾಮಾಣಿಕತೆಯನ್ನು ಮೆಚ್ಚಲೇಬೇಕು ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ. ಈ ಬಗ್ಗೆ ಆಕ್ರೋಶ ಹೊರಹಾಕಿರುವ ಜೆಡಿಎಸ್ ಕಾರ್ಯಕರ್ತರು, ಮಾಜಿ ಸಿಎಂ ಎಚ್‌ಡಿಕೆಗೆ ಅವಮಾನ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಈ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ ಎಂದು ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯುತ್ ಕಳವು ಪ್ರಕರಣ; ಎಚ್.ಡಿ. ಕುಮಾರಸ್ವಾಮಿ ವಿರುದ್ಧ FIR
ಬೆಂಗಳೂರು: ದೀಪಾವಳಿ ಹಬ್ಬದ (Diwali Festival) ಪ್ರಯುಕ್ತ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರ ನಿವಾಸಕ್ಕೆ ವಿದ್ಯುತ್ ದೀಪಗಳ ಅಲಂಕಾರ (Decoration of electric lights) ಮಾಡಲಾಗಿದ್ದ ಸಂಬಂಧ ಈಗ ಕುಮಾರಸ್ವಾಮಿ ಮೇಲೆ ಎಫ್‌ಐಆರ್ ದಾಖಲಾಗಿದೆ. ವಿದ್ಯುತ್ ಕಳ್ಳತನದ ಆರೋಪದ ಮೇಲೆ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿವಾಸಕ್ಕೆ ದೀಪಾಲಂಕಾರ ಮಾಡಲು ವಿದ್ಯುತ್ ಕಳ್ಳತನ ಮಾಡಲಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿ ವಿಡಿಯೊ ಸಹಿತ ಟ್ವೀಟ್ ಮಾಡಿತ್ತು. ಈಗ ಬೆಸ್ಕಾಂ ಅಧಿಕಾರಿಗಳು ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಜಯನಗರ ಬೆಸ್ಕಾಂ ಜಾಗೃತ ದಳದಿಂದ ಎಫ್ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ | HD Kumaraswamy : ಎಚ್‌ಡಿಕೆಯಿಂದ ವಿದ್ಯುತ್ ಕಳ್ಳತನವೆಂದ ಕಾಂಗ್ರೆಸ್; ದಂಡ ಕಟ್ತೇನೆ ಅಂದ್ರು ಕುಮಾರಸ್ವಾಮಿ
ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಂಗಳವಾರ (ನ.14) ರಂದು ಅಪರಾಧ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಎಇಇ ಪ್ರಶಾಂತ್ ಕುಮಾರ್ ಎಂಬುವವರು ದೂರು ನೀಡಿದ್ದಾರೆ. ಈ ದೂರಿನನ್ವಯ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ಮನೆ ಪರಿಶೀಲನೆ ನಡೆಸಿದ ಬೆಸ್ಕಾಂ ಅಧಿಕಾರಿಗಳು
ಇದಕ್ಕೂ ಮೊದಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ಬೆಸ್ಕಾಂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸುಧಾಕರ್, ಮನೆ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆಯಲಾಗಿತ್ತು. ಅದನ್ನು ಪರಿಶೀಲನೆ ಮಾಡಲಾಗಿದೆ. ಸ್ಥಳದಲ್ಲಿ ಏನಿದೆ ಎಲ್ಲವನ್ನೂ ಪರಿಶೀಲನೆ ಮಾಡಿದ್ದೇವೆ. ಹೆಚ್ಚುವರಿ ತನಿಖೆ ಸಹ ನಾವು ಮಾಡಬೇಕಿದೆ. ಇದು ದಂಡ ವಿಧಿಸಬಹುದಾದ ಶಿಕ್ಷೆ ಮಾತ್ರ. ನಮ್ಮ ಮೇಲಧಿಕಾರಿಗಳಿಗೆ ಎಲ್ಲ ಮಾಹಿತಿಯನ್ನು ನೀಡುತ್ತೇವೆ. ಲೈಟಿಂಗ್ಸ್‌ಗೆ ನೇರವಾಗಿ ವಿದ್ಯುತ್ ಕಂಬದಿಂದ ಸಂಪರ್ಕ ನೀಡಲಾಗಿದೆ. ಕುಮಾರಸ್ವಾಮಿ ಅವರು ತಪ್ಪು ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ನಾವು ಈಗ ಪರಿಶೀಲನೆ ಮಾಡುವ ವೇಳೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸಲಹೆ ನೀಡಿದ್ದ ಕಾಂಗ್ರೆಸ್!
ಕಾಂಗ್ರೆಸ್ ತನ್ನ ಸೋಷಿಯಲ್ ಮೀಡಿಯಾ ಎಕ್ಸ್ ಜಾಲತಾಣದಲ್ಲಿ ಕುಮಾರಸ್ವಾಮಿ ಅವರಿಗೆ ಒಂದಷ್ಟು ಪ್ರಶ್ನೆಗಳನ್ನೂ ಕೇಳಿದೆ. ಜತೆಗೆ ಗೃಹ ಜ್ಯೋತಿ ಯೋಜನೆ ಅಡಿ ಅರ್ಜಿ ಹಾಕಿ ಉಚಿತ ವಿದ್ಯುತ್ ಪಡೆಯಿರಿ ಎಂದು ಸಲಹೆಯನ್ನೂ ನೀಡಿದೆ.
ಎಚ್.ಡಿ. ಕುಮಾರಸ್ವಾಮಿ ಮನೆಯ ವಿದ್ಯುತ್ ದೀಪಾಲಂಕಾರಕ್ಕೆ ಲೈನ್ ಕಂಬದಿಂದ ಸಂಪರ್ಕ ಪಡೆದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತಿದ್ದಂತೆ ಅದರ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ ಎಂದು ಕುಟುಕಿದೆ.
ಇದನ್ನೂ ಓದಿ | HD Kumaraswamy : ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಕುಮಾರಸ್ವಾಮಿಗೆ ಕಾಂಗ್ರೆಸ್ ಸಲಹೆ!
ಕಾಂಗ್ರೆಸ್ ಟ್ವೀಟ್‌ನಲ್ಲೇನಿದೆ?
“ಜಗತ್ತಿನ ಏಕೈಕ ಮಹಾಪ್ರಾಮಾಣಿಕ ಎಚ್.ಡಿ. ಕುಮಾರಸ್ವಾಮಿಯವರ ಜೆ.ಪಿ. ನಗರದ ನಿವಾಸದಲ್ಲಿ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ!
ಎಚ್.ಡಿ. ಕುಮಾರಸ್ವಾಮಿ ಅವರೇ ನಮ್ಮ ಸರ್ಕಾರ ಗೃಹ ಜ್ಯೋತಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತಿದೆಯೇ ಹೊರತು 2000 ಯೂನಿಟ್ ಅಲ್ಲ!
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ