ಬೆಂಗಳೂರು: ವಾರ್ಷಿಕ 7.5 ಲಕ್ಷ ವೇತನ ಪಡೆಯುವವರಿಗೆ ಯಾವುದೇ ತೆರಿಗೆ ಇಲ್ಲ. ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದ (Union Budget 2024) ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಮಾಹಿತಿ ಕೊಡುತ್ತಿದೆ. ಕೇಂದ್ರದಿಂದ ಯಾವುದೇ ಬಾಕಿ ಇಲ್ಲ. ಹತ್ತು ವರ್ಷದಲ್ಲಿ ಯುಪಿಎ ಸರ್ಕಾರ 81,791 ಕೋಟಿ ಅನುದಾನ ನೀಡಿದೆ. ಎನ್‌ಡಿಎ ಸರ್ಕಾರ 10 ವರ್ಷಗಳಲ್ಲಿ 2,95,818 ಅನುದಾನ ನೀಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ 60,679 ಕೋಟಿ ಗ್ರ್ಯಾಂಟ್ ಇನ್ ಏಡ್ ನೀಡಲಾಗಿದ್ದು, ಮೋದಿ ಸರ್ಕಾರದಲ್ಲಿ 2,36,955 ಕೋಟಿ ನೀಡಲಾಗಿದೆ. ಯುಪಿಎ ವಾರ್ಷಿಕ 8,179 ಕೋಟಿಯಾದರೆ, ಮೋದಿ ಸರ್ಕಾರದಲ್ಲಿ ವಾರ್ಷಿಕ 45,485 ಕೋಟಿ ನೀಡಲಾಗಿದೆ.
ಕಲಬುರಗಿಯ ಪಿಎಂ ಮಿತ್ರಾ ಮೆಗಾ ಟೆಕ್ಸ್‌ಟೈಲ್ಸ್ ಪಾರ್ಕ್‌ಗೆ 200 ಕೋಟಿ ಅನುದಾನ ನೀಡಲಾಗಿದೆ. ಕರ್ನಾಟಕದಲ್ಲಿ ರೈಲ್ವೆಗೆ 2009-14ರವರೆಗೂ 835 ಕೋಟಿ ನೀಡಲಾಗಿತ್ತು. 2024-25ನೇ ಸಾಲಿನ ಬಜೆಟ್‌ನಲ್ಲಿ 7,559 ಕೋಟಿ ನೀಡಲಾಗಿದೆ. ರೈಲ್ವೆ ಹಳಿಗಳ ನಿರ್ಮಾಣಕ್ಕೆ, 47,016 ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. 7 ಒಂದೇ ಭಾರತ್ ರೈಲು ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಐಐಟಿ ಧಾರವಾಡ ಸ್ಥಾಪನೆ ಆಗಿದೆ. ತುಮಕೂರಿನಲಿ ಸೌತ್ ಇಂಡಿಯಾ ಕಾರಿಡಾರ್ ನಡೆಯುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗಾಗಿ 6,428 ಕೋಟಿ ಅನುದಾನ ನೀಡಲಾಗಿದೆ. 7 ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದ್ದು, 1,600 ಕೋಟಿ ವೆಚ್ಚದಲ್ಲಿ ಖಾಸಗಿ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್ ಬೆಂಗಳೂರಿನಲ್ಲಿ ನಿರ್ಮಾಣ ಮಾಡಲಾಗಿದೆ.
4,600 ಕಿ.ಮೀ ರಸ್ತೆ ನಿರ್ಮಾಣ ಆಗಿದೆ. ಭಾರತ್ ಮಾಲಾ ಯೋಜನೆಯಡಿ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಸೇರಿ ಮೂರು ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗುತ್ತಿವೆ ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರ್ನಾಟಕ ಸರ್ಕಾರ ಪೆಟ್ರೋಲ್, ಡೀಸೆಲ್, ಹಾಲು, ಗೈಡ್‌ಲೈನ್ಸ್ ವ್ಯಾಲ್ಯೂ, ಇವಿ ವಾಹನಗಳ ದರ ಎಲ್ಲವೂ ಹೆಚ್ಚಳ ಮಾಡಿದೆ. ಉದ್ಯೋಗ ಸೃಷ್ಟಿ ಸಂಪೂರ್ಣ ಕುಸಿದಿದೆ. ಕಳೆದ ವರ್ಷ ಆದಾಯ ಬಜೆಟ್ ಮಂಡನೆಯಾಗಿತ್ತು, ಒಂದೇ ವರ್ಷದಲ್ಲಿ ಖೋತಾ ಬಜೆಟ್ ಆಗಿದೆ. ಎಸ್‌ಸಿ, ಎಸ್‌ಟಿ ಯೋಜನೆಯಿಂದ ಹಣ ತೆಗೆಯಲಾಗಿದೆ. ವಾಲ್ಮೀಕಿ ಹಗರಣ ನಿಮಗೆಲ್ಲಾ ಗೊತ್ತಿದೆ ಎಂದು ತಿಳಿಸಿದರು.
ಉದ್ಯೋಗ ವಿಚಾರವಾಗಿ ದೆಹಲಿಯಲ್ಲಿ ತಿಳಿಸಿದ್ದೇನೆ. ಯುವಕರಿಗೆ ಉದ್ಯೋಗ, ಎಂಎಸ್‌ಎಂಇ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಮೂರು ರೀತಿ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದ್ದು, ಮೊದಲ ಬಾರಿ ಉದ್ಯೋಗಕ್ಕೆ ಬರುವವರಿಗಾಗಿ ಉದ್ಯೋಗ, ನವೋದ್ಯಮ 4.0 ಕೈಗಾರಿಕೆಗಳಿಗಾಗಿ ಸ್ಕಿಲ್ ಟ್ರೈನಿಂಗ್ ನೀಡಲಾಗುತ್ತಿದೆ. ಇದರಿಂದ ಹೊಸ ಕಂಪನಿಗಳು ನೇಮಕಕ್ಕೆ ಸಹಾಯವಾಗಲಿದೆ. ಯುವಕರು ಓದಲು ಕಡಿಮೆ ಬಡ್ಡಿ ದರದಲ್ಲಿ 7.5ಲಕ್ಷದವರೆಗೂ ಸಾಲ ನೀಡಲಾಗುತ್ತದೆ, ಸ್ಕಿಲ್ ಟ್ರೈನಿಂಗ್‌ಗಾಗಿ ಸಾಲ ನೀಡಲಾಗುತ್ತದೆ. ಎಂಎಸ್‌ಎಂಇ ಮೂಲಕ ಹೆಚ್ಚು ಉದ್ಯೋಗ ನೀಡಲಾಗುತ್ತಿದೆ ಎಂದು ತಿಳಿಸಿದರು
ಸಂಶೋಧನೆ ಮತ್ತು ಅಭಿವೃದ್ಧಿ (R&D)ಯಿಂದ ಬೆಂಗಳೂರಿಗೆ ಹೆಚ್ಚು ಉಪಯೋಗ ಆಗಲಿದೆ. ಬೆಂಗಳೂರಿನಲ್ಲಿ ಸ್ಪೇಸ್ ರಿಸರ್ಚ್ ಈ ಹಿಂದಿನಿಂದಲೂ ನಡೆಯುತ್ತಿದೆ. ಹೀಗಾಗಿ ರಿಸರ್ಚ್‌ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಇದರಿಂದ ಹೆಚ್ಚು ಅನುಕೂಲ ಆಗಲಿದೆ. ಏಂಜೆಲ್ ಟ್ಯಾಕ್ಸ್ ಕೂಡ ಅನೇಕ ಜನರಿಗೆ ಲಾಭ ಆಗಲಿದೆ. ಕರ್ನಾಟಕ ಕೂಡ ಇದರ ಲಾಭ ಪಡೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ | Mann Ki Baat: ಪ್ಯಾರಿಸ್ ಒಲಿಂಪಿಕ್ಸ್: ಭಾರತೀಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆ ʼಮನ್ ಕಿ ಬಾತ್ʼನಲ್ಲಿ ಮೋದಿ ಕರೆ
ಇನ್ನು ಬಜೆಟ್‌ನಿಂದ ಮಹಿಳೆಯರಿಗೆ ಹೆಚ್ಚು ಅನುಕೂಲ ಆಗಲಿದೆ. ಮಹಿಳೆಯರಿಗೆ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಕೃಷಿ ಮತ್ತು ಸಂಶೋಧನೆಯಲ್ಲಿ ಕರ್ನಾಟಕ ಹೆಚ್ಚು ಲಾಭ ಪಡೆದಿದೆ. ಬೆಂಗಳೂರು ಮತ್ತು ರಾಯಚೂರಿನಲ್ಲಿ ಇದರ ಉಪಯೋಗವಾಗಿದೆ. ಅದರಲ್ಲೂ ಹೆಚ್ಚು ಉತ್ತರ ಕರ್ನಾಟಕಕ್ಕೆ ಅನುಕೂಲ ಆಗಿದೆ ಎಂದು ತಿಳಿಸಿದರು.
ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಪ್ರತಿಕ್ರಿಯಿಸಿ, ಈ ಅಕ್ರಮದ ಬಗ್ಗೆ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಏನು ಹೇಳುತ್ತೀರಿ? ಬ್ಯಾಂಕ್ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಿ. ಕೇಂದ್ರ ಸರ್ಕಾರದ ಸಿಬ್ಬಂದಿ ಆದರೂ ಸರಿ ಅವರನ್ನು ಬಂಧನ ಮಾಡಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.