Site icon Vistara News

ಹುಬ್ಬಳ್ಳಿ ಈದ್ಗಾ ಮೈದಾನ ಮಹಾನಗರ ಪಾಲಿಕೆ ಆಸ್ತಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಹುಬ್ಬಳ್ಳಿ ಈದ್ಗಾ

ಧಾರವಾಡ: ಹುಬ್ಬಳ್ಳಿ ಈದ್ಗಾ ಮೈದಾನ ಅಥವಾ ರಾಣಿ ಚನ್ನಮ್ಮ ಮೈದಾನ ಮಹಾನಗರ ಪಾಲಿಕೆ ಆಸ್ತಿಯಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ನಾನು ಹೋರಾಟ ಮಾಡಿದ್ದೇನೆ, ಅದರ ಸ್ಥಿತಿ ಗತಿ ನನಗೆ‌ ಗೊತ್ತು. ವರ್ಷಕ್ಕೆ ಎರಡು ದಿನ ಮುಸ್ಲಿಮರ ಪ್ರಾರ್ಥನೆಗೆ ಬಿಟ್ಟರೆ ಬೇರೆ ದಿನ ಅದು ಪಾಲಿಕೆಗೆ ಸೇರಿದ್ದಾಗಿದೆ. ಪಾಲಿಕೆಗೆ ಯಾವುದೇ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಅಧಿಕಾರವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ಕೋರಿ ಸಂಘಟನೆಯೊಂದು ಪತ್ರ ಬರೆದಿರುವ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಕಾನೂ‌ನು ಪ್ರಕಾರ ಹುಬ್ಬಳ್ಳಿ ಹಾಗೂ ಬೆಂಗಳೂರಿನ ಈದ್ಗಾ ಮೈದಾನಗಳ ಬಗ್ಗೆ ಪಾಲಿಕೆಗೆ ಸೂಕ್ತ ಕ್ರಮ ಕೈಗೊಳ್ಳಲು ಸ್ವತಂತ್ರ ಕೊಟ್ಟಿದ್ದೇವೆ. ಅವರು ಅದನ್ನು ಕೈಗೊಳ್ಳುತ್ತಾರೆ ಎಂದು ನಂಬಿಕೆ ಇದೆ. ಬೆಂಗಳೂರಿನ ಚಾಮರಾಜಪೇಟೆ ಮೈದಾನದ ಬಗ್ಗೆ ಶಾಸಕ ಜಮೀರ್‌ ಅಹ್ಮದ್‌ ಏನು ಹೇಳುತ್ತಾರೆ, ಅದಕ್ಕೆಲ್ಲ ನಾನು ಉತ್ತರ ಕೊಡುವ ಅಗತ್ಯ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | ಈದ್ಗಾ ಮೈದಾನದಲ್ಲೇ ಗಣೇಶೋತ್ಸವ: ಶಾಸಕ ಜಮೀರ್‌ ಖಾನ್‌ಗೆ ಸವಾಲು ಹಾಕಿದ ಮುತಾಲಿಕ್

ಸಿಎಂ ಬದಲಾವಣೆ ಚರ್ಚೆ ವಿಚಾರಕ್ಕೆ ಸ್ಪಂದಿಸಿ, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲವೆಂದು ನಾನು ಹಲವು ಬಾರಿ ಸ್ಪಷ್ಟ ಪಡಿಸಿದ್ದೇವೆ, ಈ ರೀತಿ ವಿರೋಧ ಪಕ್ಷದವರು ದುರುದ್ದೇಶದಿಂದ ರಾಜಕೀಯ ಅಸ್ಥಿರತೆ ಉಂಟು ಮಾಡಲು ನೋಡುತಿದ್ದಾರೆ. ಪಕ್ಷದ ವರಿಷ್ಠರ ಜತೆ ನಾನು ಸಂಪರ್ಕದಲ್ಲಿದ್ದೇನೆ, ಸಿಎಂ ಬದಲಾವಣೆ ವಿಚಾರ ಸತ್ಯಕ್ಕೆ ದೂರ ಹಾಗೂ ಆಧಾರ ರಹಿತವಾದುದು ಎಂದರು. ಎಸಿಬಿ ರಚನೆ ಆದೇಶ ರದ್ದು ಬಗ್ಗೆ ಪ್ರತಿಕ್ರಿಯಿಸಿ, ಲೋಕಾಯುಕ್ತಕ್ಕೆ ಬಲ ನೀಡುವ ನ್ಯಾಯಾಲಯದ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಇದು ಕಪಾಳ ಮೋಕ್ಷ ಆಗಿದೆ ಎಂದರು.

ಗರಗದಲ್ಲಿ ಹರ್ ಘರ್ ತಿರಂಗಾ ಬಹಿಷ್ಕಾರದ ಬಗ್ಗೆ ಸ್ಪಂದಿಸಿ, ಗರಗದಲ್ಲಿ 10 ಕೋಟಿ ಧ್ವಜ ತಯಾರಿಸಲು ಆಗುತ್ತಿರಲಿಲ್ಲ, ಹಾಗಾಗಿ ನಾವು ಜಿಲ್ಲಾಡಳಿತ ಎಷ್ಟು ಕೊಟ್ಟರೂ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೇವೆ. ಹೆಚ್ಚು ಧ್ವಜ ಬೇಕಾದಾಗ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡುವ ತೀರ್ಮಾನ ತೆಗೆದುಕೊಂಡಿದ್ದೇವೆ. ಗರದ ಗ್ರಾಮ ಸೇವೆಯನ್ನು ಸ್ಮರಿಸುತ್ತೇನೆ, ಒಂದೇ ದಿನ ಒಂದು ಕೋಟಿ ಜನ ಧ್ವಜ ಖರೀದಿ ಮಾಡಿದ್ದಾರೆ, ಇದು ದೇಶದಲ್ಲಿ ಇರುವ ಉತ್ಸಾಹ ವಾತಾವರಣ ಹಾಗೂ ಪ್ರಧಾನಿ ಕರೆಗೆ ಸಿಕ್ಕಿರುವ ಪ್ರತಿಕ್ರಿಯೆಯಾಗಿದೆ ಎಂದರು.

ಇದನ್ನೂ ಓದಿ | ಈದ್ಗಾ ಮೈದಾನ ಇನ್ನು `ಸರ್ವೇ ನಂಬರ್‌ 40-ಗುಟ್ಟಹಳ್ಳಿʼ: ಸಚಿವ ಆರ್‌. ಅಶೋಕ್‌

Exit mobile version