ಹುಬ್ಬಳ್ಳಿ: ಚನ್ನಗಿರಿ ಪ್ರಕರಣದಲ್ಲಿ ಡಿವೈಎಸ್ಪಿ, ಸಿಪಿಐ ಅಮಾನತ್ತು ಮಾಡಿ ಪೊಲೀಸರ ನೈತಿಕ ಬಲ ಕುಗ್ಗಿಸಿದ್ದಾರೆ ಸಿಎಂ ಸಿದ್ದರಾಮಯ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಈ ಧೋರಣೆ ನೋಡಿದರೆ ಪೊಲೀಸರು ಠಾಣೆ ಬಿಟ್ಟು ಓಡಿ ಹೋಗಬೇಕು ಎಂಬಂತಿದೆ ಎಂದು ಖಂಡಿಸಿದರು.
ಇದನ್ನೂ ಓದಿ: Pralhad Joshi: ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್‌ಪೋರ್ಟ್ ರದ್ದಾಗಲ್ಲ: ಪ್ರಲ್ಹಾದ್ ಜೋಶಿ
ಮುಸ್ಲಿಂರಷ್ಟೇ ಅಲ್ಲ, ಯಾರೇ ಆದರೂ ಸರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿ, ವಾಹನ ಜಖಂಗೊಳಿಸಿ ಗಲಭೆ ಎಬ್ಬಿಸುವುದು ಖಂಡನೀಯ. ಆದರೆ, ಈ ಪ್ರಕರಣದಲ್ಲಿ ಸಿಎಂ ಪೊಲೀಸರ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಜೋಶಿ ಆಕ್ಷೇಪಿಸಿದರು.
ಅಪರಾಧ ಹಿನ್ನೆಲೆಯಲ್ಲಿ ಪೊಲೀಸರು ವ್ಯಕ್ತಿಯನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಆ ವೇಳೆ ಆತನಿಗೆ ಆರೋಗ್ಯ ಸಮಸ್ಯೆಯಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸಿಎಂ ಆದೇಶದಂತೆ ಡಿವೈಎಸ್‌ಪಿ ಮತ್ತು ಸಿಪಿಐ ಅಮಾನತ್ತು ಪಡಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Selco India: ಬೆಂಗಳೂರಿನಲ್ಲಿ ಮೇ 27ರಂದು ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ
ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಇಲ್ಲದ ತ್ವರಿತ ಕ್ರಮ ಚನ್ನಗಿರಿಯಲ್ಲೇಕೆ?
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹತ್ಯೆ, ಅಂಜಲಿ ಕೊಲೆ ಪ್ರಕರಣದಲ್ಲಿ ಕೈಗೊಳ್ಳದ ತ್ವರಿತ ಕ್ರಮವನ್ನು ಸಿಎಂ ಸಿದ್ದರಾಮಯ್ಯ ಚನ್ನಗಿರಿ ಪ್ರಕರಣದಲ್ಲಿ ಏಕೆ? ಕೈಗೊಂಡರು ಎಂದು ಪ್ರಶ್ನಿಸಿದ ಸಚಿವರು, ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಅರಾಜಕತೆ ನಿರ್ಮಾಣವಾಗುತ್ತಿದೆ ಎಚ್ಚರವಿರಲಿ ಎಂದು ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.